ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಕೃಷಿ ಆಭಿವೃದ್ಢಿಗೆ ಜನರೂ, ಸರಕಾರವೂ ಗಮನ ಹರಿಸಿದ್ದು 1947ರ ಸ್ವಾತಂತ್ರ್ಯದ ಬಳಿಕ ಎಂದು ಹೇಳಬಹುದು.
ಅದಕ್ಕಿಂತ ಮುಂಚೆ ಕರಾವಳಿ ಪ್ರದೇಶದಲ್ಲಿ ಭತ್ತವೇ ಮುಖ್ಯ ಬೆಳೆಯಾಗಿತ್ತು. ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಮಾತ್ರ ಕೆಲವು ದೊಡ್ಡ ಕೃಷಿಕರು ಅಡಿಕೆ ತೋಟ ಮಾಡಿದ್ದರು.
ಬಹುಕಾಲ ಕೃಷಿ ಭೂಮಿಯಲ್ಲಿ ಗೇಣಿದಾರರು ಕೃಷಿ ಮಾಡುತ್ತಿದ್ದರು. ಅವರು ಭತ್ತವನ್ನು ಮಾತ್ರ ಬೆಳೆಯುತ್ತಿದ್ದರು. ಹೆಚ್ಚಿನ ಗೇಣಿದಾರರು ಭತ್ತದ ಗದ್ದೆಯ ಉತ್ಪತ್ತಿಯ ಶೇ.33 ರಿಂದ ಶೇ.40 ಪಾಲನ್ನು ಗೇಣಿ ಸಂದಾಯ ಮಾಡಿ ಉಳಿದ ಉತ್ಪತ್ತಿಯ ಭಾಗದಿ೦ದ ತಮ್ಮ ಜೀವನ ನಿರ್ವಹಣೆ ಮಾಡಬೇಕಾಗಿತ್ತು. ಆದ್ದರಿಂದ ಅವರಿಗೆ ಮಳೆಗಾಲದಲ್ಲಿ ದಿನನಿತ್ಯದ ಊಟಕ್ಕೂ ತತ್ವಾರ ಆಗುತ್ತಿತ್ತು. ಅವರು ವರುಷ ವರುಷವೂ ಸಾಲ ಮಾಡಿಯೇ ಬದುಕಬೇಕಾಗಿತ್ತು. ಆಗ ಮಳೆಗಾಲದಲ್ಲಿ ದಿನಗೂಲಿಯ ಕೆಲಸ ಕಡಿಮೆ. ಈಗಿನ ಹಾಗೆ ಬೀಡಿಕಟ್ಟುವ ಕೆಲಸವೂ ಇರಲಿಲ್ಲ. ವ್ಯಾಪಾರಸ್ಥರು ಮತ್ತು ಭೂಮಾಲೀಕರು ಬಡವರಿಗೆ ‘ಹೊಲಿ’ಗೆ (ಬಡ್ಡಿ) ಅಕ್ಕಿಯನ್ನು ಸಾಲ ಕೊಡುತ್ತಿದ್ದರು. ಅದಕ್ಕೆ ಶೇ.33 ದರದಲ್ಲಿ ಹೊಲಿ ಕೊಡಬೇಕಾಗಿತ್ತು. (ಅಂದರೆ ಮೂರು ಕಳಸೆ ಅಳತೆಯ ಒಂದು ಮುಡಿ ಅಕ್ಕಿಗೆ ಒಂದು ಕಳಸೆ ದರದಲ್ಲಿ)
ಐವತ್ತು ವರುಷಗಳ ಹಿಂದಿನ ಕಾಲದಲ್ಲಿ, ಗದ್ದೆ ಬದಿಗಳಲ್ಲಿ ಬೆಳೆದ ತೆಂಗಿನ ಮರಗಳು, ಅಲ್ಲಲ್ಲಿ ತೋಟದಲ್ಲಿ ಬೆಳೆದ ಹಲಸಿನ ಮರಗಳು – ಇವೇ ಹೆಚ್ಚಿನ ಸಣ್ಣ ಹಿಡುವಳಿದಾರರಿಗೆ ಪೂರಕ ಆದಾಯ ಮೂಲಗಳು. ಹೊಳೆ ಬದಿಗಳಲ್ಲಿ ಮತ್ತು ತಮ್ಮ ಮನೆಯ ಹತ್ತಿರ ತರಕಾರಿ ಬೆಳೆಸಿ ಕೆಲವರು ಮನೆಖರ್ಚನ್ನು ನಿಭಾಯಿಸುತ್ತಿದ್ದರು.
ಏತದ ಬದಲು ಪಂಪ್-ಸೆಟ್
1950ರ ದಶಕದಲ್ಲಿ ನೀರಾವರಿಗೆ ಪಂಪ್ಸೆಟ್ಗಳಿರಲಿಲ್ಲ. ಏತ ನೀರಾವರಿ ಮಾತ್ರ ಇತ್ತು. (ಏತ ಅಂದರೆ ಕೆಳಗಿನ ಹಂತದಿಂದ ಮೇಲಿನ ಹಂತಕ್ಕೆ ನೀರೆತ್ತುವ ಪಾರಂಪರಿಕ ಸಾಧನ.) ಇದರಿಂದ ಸುಗ್ಗಿ (ಎರಡನೇ) ಬೆಳೆ ಬೆಳೆಯುತ್ತಿದ್ದರು. ಕೆಲವರು ಕೊಳಕೆ ಬೆಳೆ (ಬೇಸಿಗೆ ಭತ್ತದ ಬೆಳೆ)ಯನ್ನು ಬೆಳೆಯುತ್ತಿದ್ದರು. ಪ್ರತಿಯೊಂದು ಏತ ನಡೆಸಲು ಕನಿಷ್ಠ ಮೂರು ಜನರು ಬೇಕಾಗಿದ್ದರು. ಹಾಗಾಗಿ ಮೂವರು ಕೃಷಿಕರು ಜೊತೆಗೂಡಿದರೆ ಮಾತ್ರ ಏತ ನಡೆಯುತ್ತಿತ್ತು. ಒಂದು ಕಳಸೆ ಗದ್ದೆಗೆ ಸುಗ್ಗಿಗೆ ಒಂದು ಮುಡಿ ಅಕ್ಕಿಯನ್ನು, ಕೊಳಕೆಗೆ ಒಂದೂವರೆ ಮುಡಿ ಅಕ್ಕಿಯನ್ನು ಮಜೂರಿಯಾಗಿ ಏತ ನಡೆಸುವವರಿಗೆ ಕೊಡಬೇಕಾಗಿತ್ತು. ಏತದಿಂದ ನೀರೆತ್ತಬೇಕಾದರೆ ನೀರಿನ ಮಟ್ಟ ಹದಿನೈದು ಅಡಿಗಳಿಗಿಂತ ಕೆಳಕ್ಕಿರಬಾರದು. ಅಂತಹ ಕೆರೆಗಳಲ್ಲಿ ಅಥವಾ ಹೊಳೆಬದಿಯಲ್ಲಿ ಮಾತ್ರ ಏತದಿಂದ ನೀರೆತ್ತಲಾಗುತ್ತಿತ್ತು.
ಸರಕಾರಿ ಕೃಷಿ ಇಲಾಖೆಯಿಂದ 1950ರ ದಶಕದ ಆರಂಭದಲ್ಲಿ ಕೆಲವು ರೈತರಿಗೆ ಡೀಸೆಲ್ ಪಂಪ್ಸೆಟ್ ಬಾಡಿಗೆಗೆ ಕೊಡಲು ಪ್ರಾರಂಭಿಸಿದರು. ಇದರಿಂದಾಗಿ ಹೊಳೆಬದಿಯಲ್ಲಿ ಕೃಷಿ ಅಭಿವೃದ್ಧಿಗೆ ನಾಂದಿಯಾಯಿತು. 1952ರ ಚುನಾವಣೆಯ ಬಳಿಕ ಜವಾಬ್ದಾರಿ ಸರಕಾರ ಸ್ಥಾಪನೆಯಾದ ನಂತರ ಈ ಯೋಜನೆ ಜ್ಯಾರಿಗೆ ಬಂತು.
ಆ ಕಾಲದಲ್ಲಿ ಅಡಿಕೆ ತೋಟ ಬೆಳೆಸಿದ್ದ ಕೆಲವು ಕೃಷಿಕರು ಕೊಳೆರೋಗದಿಂದಾದ ನಷ್ಟ ತಾಳಲಾಗದೆ ದೇಶಾಂತರ ಹೋದದ್ದುಂಟು. ಆದರೆ ನೀರಾವರಿಗೆ ಪಂಪ್ಸೆಟ್ ಅಳವಡಿಸಿದ ಬಳಿಕ, ಅಡಿಕೆ ಕೃಷಿಕರು ಗಟೋರ್ ಸ್ಪ್ರೇಯರ್ನಿಂದ ಬೋರ್ಡೋ ದ್ರಾವಣ ಸಿಂಪಡಿಸಿ ಕೊಳೆರೋಗ ನಿಯಂತ್ರಿಸಿ, ಅಡಿಕೆ ಬೆಳೆಯಲು ಉತ್ಸಾಹ ತೋರಿದರು.
ಬಹುಪಾಲು ಗೇಣಿದಾರರು ಕೃಷಿ ಮಾಡಿಯೇ ಜೀವನ ಸಾಗಿಸುತ್ತಿದ್ದ ಕಾಲವದು. ಅವರಲ್ಲದೆ ಮಧ್ಯಮವರ್ಗದವರೂ ಕೃಷಿಗೆ ತೊಡಗಿದ್ದರಿಂದ ಕೃಷಿ ಅಭಿವೃದ್ಡಿಗೆ ಪೂರಕವಾದ ವಾತಾವರಣ ಉಂಟಾಯಿತು.
ಭತ್ತ ಸಂಶೋಧನಾ ಕೇಂದ್ರ
ಆ ಸಮಯದಲ್ಲಿ ಮಂಗಳೂರಿನ ಕಂಕನಾಡಿಯಲ್ಲಿ ಭತ್ತ ಸಂಶೋಧನಾ ಕೇಂದ್ರ ಸ್ಥಾಪನೆಯಾಯಿತು. ಪ್ರತಿಯೊಂದು ಬ್ಲಾಕ್ನಲ್ಲಿ ಬ್ಲಾಕ್ ಅಭಿವೃದ್ಢಿ ಸಮಿತಿ ಮತ್ತು ಕೇಂದ್ರಗಳು ಸ್ಥಾಪನೆಯಾಗಿ ಕೃಷಿ, ಹೈನುಗಾರಿಕೆ, ಸಮಾಜ ಅಭಿವೃದ್ಢಿ ಇತ್ಯಾದಿ ಕೆಲಸಗಳಿಗೆ ಅಧಿಕಾರಿಗಳನ್ನು ನೇಮಿಸಲಾಯಿತು. ಹಾಗಾಗಿ ವಿದ್ಯಾವಂತ ಕೃಷಿಕರಿಗೆ ಮಾಹಿತಿ ಸಿಗುವಂತಾಯಿತು. ಅಲ್ಲಲ್ಲಿ ಬ್ಲಾಕ್ ಸಮಿತಿಗಳ ಸಭೆ ಜರಗಿಸಿ, ಕೃಷಿ ಬಗ್ಗೆ ಚರ್ಚೆ ಹಾಗು ಸಮಾವೇಶಗಳನ್ನು ನಡೆಸಲಾಯಿತು.
ಕಂಕನಾಡಿಯ ಭತ್ತ ಸಂಶೋಧನಾ ಕೇಂದ್ರವು ಕರಾವಳಿ ಜಿಲ್ಲೆಗಳಲ್ಲಿ ಬೆಳೆಸಲಾಗುತ್ತಿದ್ದ ಭತ್ತದ ತಳಿಗಳನ್ನೇ ಬೆಳೆಸಿ, ಆಯ್ಕೆ ಮಾಡಿ ಉತ್ತಮ ಭತ್ತದ ತಳಿಗಳನ್ನು ಬಿಡುಗಡೆ ಮಾಡತೊಡಗಿತು. ಕಾರ್ತಿ (ಏಣಿಲು) ಬೆಳೆಗೆ ಎಂಜಿಎಲ್-1 (ಗುಡ್ಡು ಬೊಳಿಯರಿ), ಎಂಜಿಎಲ್-2 (ಕಯಮೆ), ಎಂಜಿಎಲ್-3 (ಹಳ್ಳುಗ), ಎಂಜಿಎಲ್-4 (ಕಣ್ವ) ಮತ್ತು ಎಂಜಿಎಲ್-5 (ಮಸ್ಕತಿ) ತಳಿಗಳನ್ನು ಬಿಡುಗಡೆ ಮಾಡಿ ಪ್ರಚಾರ ಮಾಡಲಾಯಿತು. ಸುಗ್ಗಿ ಬೆಳೆಗೆ ಎಂಜಿಎಲ್-6 (ಅತಿಕ್ರಾಯ) ಶಿಫಾರಸು ಮಾಡಿದ್ದರು.
ಜಪಾನ್ ಕೃಷಿ ಪದ್ಢತಿ
ಅದೇ ಸಮಯದಲ್ಲಿ ಜಪಾನಿನ ಕೃಷಿ ಪದ್ದತಿಯನ್ನು ಕರಾವಳಿಯಲ್ಲಿ ಪ್ರಚಾರ ಮಾಡಲಾಯಿತು. ಜಪಾನಿನ ಕೃಷಿಕರು ಹೇಗೆ ಅಧಿಕ ಇಳುವರಿ ಪಡೆಯುತ್ತಿದ್ದರು ಎಂಬುದನ್ನು ಭಾರತದ ಕೃಷಿ ತಜ್ಞರು ಅಲ್ಲಿಗೆ ಹೋಗಿ ನೋಡಿ ಬ೦ದರು. ಇಲ್ಲಿಯೂ ಆ ಪದ್ಧತಿ ಅಳವಡಿಸಬೇಕೆಂದು ಸಲಹೆ ನೀಡಿದರು. ಉತ್ತಮ ಬೀಜ, ಚೆನ್ನಾಗಿ ಬೆಳೆಸಿದ ನೇಜಿ (ಭತ್ತದ ಸಸಿಗಳು), ಇಪ್ಪತ್ತೈದು ದಿನಗಳ ನೇಜಿಯನ್ನು ಸಾಲಿನಲ್ಲಿ ನಾಟಿ ಮಾಡುವುದು, ಸಾರಜನಕ ಗೊಬ್ಬರವನ್ನು ಮೇಲುಗೊಬ್ಬರವಾಗಿ ಒದಗಿಸುವುದು, ಭತ್ತದ ಸಸಿಗಳ ಸಾಲುಗಳ ನಡುವೆ ಕಳೆ ತೆಗೆಯುವ ಯಂತ್ರ ಎಳೆದುಕೊಂಡು ಹೋಗಿ ಕಳೆ ತೆಗೆಯುವುದು, ಅಗತ್ಯವಿದ್ದರೆ ಕೀಟನಾಶಕಗಳ ಬಳಕೆ – ಇಂತಹ ಸುಧಾರಿತ ಕ್ರಮಗಳನ್ನೊಳಗೊಂಡ ಜಪಾನಿನ ಕೃಷಿ ಪದ್ಧತಿಗೆ ಕರಾವಳಿ ಪ್ರದೇಶದಲ್ಲಿ ಪ್ರಚಾರ ನೀಡಲಾಯಿತು. ಆಗಿನ ಬಿ.ಡಿ.ಓ. ಹೆಜಮಾಡಿ ಮುದ್ದಣ್ಣ ಶೆಟ್ಟಿ, ಗಾಂಧಿ ಸ್ಮಾರಕ ಕೇಂದ್ರದ ಕಾರ್ಯಕರ್ತ ಆರ್.ಎಂ. ಶಿರಿ ಮುಂತಾದವರ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅನೇಕರು ಈ ಪದ್ಧತಿ ಅನುಸರಿಸಿ ಉತ್ತಮ ಫಸಲು ಪಡೆದರು.
ಜಪಾನಿನ ಕೃಷಿ ಪದ್ಧತಿ ಅನುಸರಿಸಿದ ಕೊಡಗಿನ ಜಂಗಮ ಸಂಗಯ್ಯ ಮತ್ತು ಈರೋಡಿನ ವೆಳ್ಳೆಂಗಿರಿ ಗೌಡರ್ ಇವರ ಹೆಸರು ದಾಖಲೆ ಭತ್ತ ಬೆಳೆದವರ ಪಟ್ಟಿಯಲ್ಲಿ ಸೇರಿಕೊಂಡಿತು. ಪುಣೆ ಹತ್ತಿರದ ಲಕ್ಷ್ಮಣ ಮಾಲಿ ಎಂಬವರು ಈ ಪದ್ದತಿಯಿಂದ ಒಂದು ಎಕ್ರೆಯಲ್ಲಿ 18,000 ರಾತ್ಲು ಭತ್ತ ಬೆಳೆದ ವರದಿ ರೀಡರ್ಸ್ ಡೈಜೆಸ್ಟ್ ಮಾಸ ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಸುದ್ದಿಯಾಯಿತು. ಅನಂತರ ಜಪಾನಿನ ಕೃಷಿ ತಜ್ಞರೇ ಇಲ್ಲಿ ಅಳವಡಿಸಲಾದ ತಮ್ಮ ದೇಶದ ಕೃಷಿ ಪದ್ಧತಿ ಅಭ್ಯಸಿಸಲು ಭಾರತಕ್ಕೆ ಬಂದರು.
ಆದರೆ ಕರಾವಳಿ ಪ್ರದೇಶದ ಹೆಚ್ಚಿನ ರೈತರಿಗೆ ಇದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಭತ್ತದ ಸಾಲುನಟ್ಟಿ ಮಾಡಲು ಕಷ್ಟವಾಗುತ್ತಿತ್ತು. ಕ್ರಮೇಣ ಇಲ್ಲಿ ಅದರ ಅನುಸರಣೆ ನಿಂತಿತು.
ಮದ್ರಾಸಿನ ಭತ್ತದ ತಳಿಗಳು
ಅನಂತರದ ದಿನಗಳಲ್ಲಿ ಆಗಿನ ಮದ್ರಾಸ್ ಪ್ರಾಂತ್ಯದ ಉತ್ತಮ ಭತ್ತದ ತಳಿಗಳನ್ನು ನಮ್ಮ ಕರಾವಳಿ ಪ್ರದೇಶಕ್ಕೆ ಪರಿಚಯಿಸಲಾಯಿತು. ಪಟ್ಟಾಂಬಿ ಕೃಷಿ ಸಂಶೋಧನಾ ಕೇಂದ್ರದ ಪಿಟಿಬಿ-4, ಪಿಟಿಬಿ-9, ಪಿಟಿಬಿ-20, ಪಿಟಿಬಿ-28; ಕೊಯಂಬತ್ತೂರು ಸಂಶೋಧನಾ ಕೇಂದ್ರದ ಸಿಓ-2, ಸಿಓ-14, ಸಿಓ-25 ಮತ್ತು ಮಾರುತೇರು ಕೃಷಿ ಸಂಶೋಧನಾ ಕೇಂದ್ರದ ಎಂಟಿಯು-3, ಎಂಟಿಯು-20 ತಳಿಗಳನ್ನು ಪ್ರಚಾರ ಮಾಡಲಾಯಿತು. ಅವುಗಳಲ್ಲಿ ಪಿಟಿಬಿ-9 (ಕರಿಜಡಿ), ಪಿಟಿಬಿ-20, ಸಿಓ-25 ಮತ್ತು ಎಂಟಿಯು – 3 ತಳಿಗಳನ್ನು ಇಲ್ಲಿನ ರೈತರು ಹೆಚ್ಚುಹೆಚ್ಚಾಗಿ ಬೆಳೆಯತೊಡಗಿದರು. ಪಿಟಿಬಿ-20 ತಳಿ ಪ್ರಚಾರಕ್ಕೆ ಬಂದ ನಂತರ ಇಲ್ಲಿ ಅತಿಕ್ರಾಯ ತಳಿಯ ಬಳಕೆ ನಿಂತಿತು.
ಫೋಟೋ; ಭತ್ತದ ನೇಜಿ (ಸಸಿಗಳ) ನಾಟಿ… ಕೃಪೆ: ಅನ್-ಪ್ಲಾಶ್ ವೆಬ್-ಸೈಟ್
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!