ಪೀಡೆಕೀಟಗಳು, ರೋಗಗಳು

ಭತ್ತದ ಕೃಷಿ ವ್ಯಾಪಕವಾದ೦ತೆ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿತು. ಪ್ರಾರಂಭದಲ್ಲಿ ಅಮೋನಿಯಂ ಸಲ್ಫೇಟ್ ಮಾತ್ರ ಬಳಸಲಾಗುತ್ತಿತ್ತು. ಅನಂತರ ಯೂರಿಯಾ, ಸೂಪರ್ ಫಾಸ್ಪೇಟ್, ಪೊಟಾಶ್ ಉಪಯೋಗಿಸತೊಡಗಿದರು. ಬಳಿಕ ಸಮತೂಕದ ಗೊಬ್ಬರವೆಂದು ಸುಫಲಾ ಮತ್ತು ಫ್ಯಾಕ್ಟಂಫಾಸ್ ಬಳಕೆಗೆ ಬ೦ದುವು. ಯೂರಿಯಾವನ್ನು ಮೇಲುಗೊಬ್ಬರವಾಗಿ ಮಾತ್ರ ಬಳಸತೊಡಗಿದರು.

ಇದರೊಂದಿಗೆ ಕೀಟಗಳ ಬಾಧೆಯೂ ಹೆಚ್ಚಾಯಿತು. ಮುಂಚೆ ಭತ್ತದ ಬೆಳೆಗೆ ಕೇವಲ ಐದು ಬಗೆಯ ಕೀಟ ಹಾಗೂ ರೋಗಗಳ ಬಾಧೆ ಇತ್ತು. ಅಲ್ಲಲ್ಲಿ ಎಲೆಚುಕ್ಕೆ ರೋಗದ ಬಾಧೆ ಇತ್ತು. ಬೆಂಕಿರೋಗ ಇರಲೇ ಇಲ್ಲ. ಗೂಡುಕಟ್ಟುವ ಹುಳ, ಎಲೆ ಮಡಚುವ ಹುಳ ಮತ್ತು ಕಾಂಡ ಕೊರೆಯುವ ಹುಳಗಳ ಕಾಟ ಇತ್ತು. ಭತ್ತದ ಎಳೆಸಸಿಗಳಿಗೆ ಕಣೆಹುಳ ಮತ್ತು ಕೊಯ್ಲಿನ ಸಮಯದಲ್ಲಿ ಬಂಬುಚ್ಚಿ ಹಾವಳಿ ಇತ್ತು. ಪ್ರತಿಯೊಂದು ಭತ್ತದ ಬಯಲಿನಲ್ಲಿ ರೈತರು ಏಕಕಾಲಕ್ಕೆ ನೇಜಿ ನೆಡುವ ಮೂಲಕ ಕೀಟಗಳ ಹಾವಳಿ ನಿಯಂತ್ರಿಸುತ್ತಿದ್ದರು.

ಅವುಗಳ ಹತೋಟಿಗೆ ಆರಂಭದಲ್ಲಿ ಡಿ.ಡಿ.ಟಿ ಮತ್ತು ಬಿ.ಎಚ್.ಸಿ. ಬಳಸುತ್ತಿದ್ದರು. ಅನಂತರ ಎಂಡ್ರೆಕ್ಸ್ ಮತ್ತು ಫಾಲಿಡಾಲ್ ಬಳಕೆಗೆ ಬಂದವು. ಭತ್ತದ ಹೊಸತಳಿಗಳ, ರಾಸಾಯನಿಕ ಗೊಬ್ಬರಗಳ ಮತ್ತು ಪೀಡೆನಾಶಕಗಳ ಬಳಕೆ ಹೆಚ್ಚಿದಂತೆ ರೋಗಗಳೂ ಕಾಣಿಸಿಕೊಂಡವು. ಬೆಂಕಿರೋಗವೂ ಧಾಳಿ ಮಾಡಿತು. ಅನಂತರ ಹಿನೋಸಾನ್‌ನಂತಹ ಪ್ರಬಲ ರೋಗನಾಶಕಗಳನ್ನು ಬತ್ತದ ಗದ್ದೆಗಳಲ್ಲಿ ಪ್ರಯೋಗಿಸಲಾಯಿತು.

ನೀರಾವರಿ ಪಂಪ್‌ಸೆಟ್‌ಗಳು ಅದರಲ್ಲೂ ವಿದ್ಯುತ್ ಪಂಪ್‌ಸೆಟ್‌ಗಳು ಬಳಕೆಗೆ ಬಂದ ನಂತರ ಕರಾವಳಿಯ ಹಳ್ಳಿಗಳಲ್ಲಿ ಕೃಷಿ ವಿಸ್ತರಣೆ ತೀವ್ರವಾದರೂ ಕೃಷಿಯ ಸಮಸ್ಯೆಗಳು ಉಲ್ಬಣಿಸಿದುವು.

ನೀರಾವರಿ ಮೂಲಕ ಮೂರು ಹ೦ಗಾಮುಗಳಲ್ಲೂ ಭತ್ತ ಬೆಳೆದರೆ ವರುಷವಿಡೀ ಅದರ ಕೃಷಿ ಕೆಲಸವಿರುತ್ತದೆ. ಅದರೊಂದಿಗೆ ತೋಟಗಾರಿಕಾ ಬೆಳೆಗಳನ್ನೂ ಬೆಳೆದರೆ ಆದಾಯ ಹೆಚ್ಚಿಸಿಕೊಳ್ಳಬಹುದೆಂದು ಮಧ್ಯಮ ವರ್ಗದ ರೈತರು ಭಾವಿಸಿದರು. ಅದರಿ೦ದಾಗಿಯೇ ಅಡಿಕೆ, ಮೆಣಸು, ಕೊಕ್ಕೋಗಳನ್ನು ಇಲ್ಲಿನ ರೈತರು ಬೆಳೆಯತೊಡಗಿದರು. ಅನಾನಸು ಮತ್ತು ಬಾಳೆಯನ್ನೂ ಕೆಲವರು ಬೆಳೆಸಿದರು.

ಈ ಸಮಯದಲ್ಲಿ ಸೀ-ಐಲೇಂಡ್ ಹತ್ತಿ ಬೆಳೆಯನ್ನು ಕರಾವಳಿ ಕೃಷಿಕರಿಗೆ ಪರಿಚಯಿಸಲಾಯಿತು. ಅದನ್ನು ಇಲ್ಲಿ ಒಂದೇ ವರುಷ ಬೆಳೆಸಿದ್ದು. ಅದರಿಂದ ಉತ್ತಮ ಫಸಲು ಬಂದರೂ ಅನಂತರ ಅನೇಕ ಕಾರಣಗಳಿಂದಾಗಿ ಇಲ್ಲಿ ಅದರ ಕೃಷಿ ಮುಂದುವರಿಯಲಿಲ್ಲ. ಕಳೆದ ವರುಷ ಅನೇಕ ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡ ವರದಿ ಓದಿದಾಗ, ಅಂದು ನಾವು ಅದರ ಕೃಷಿಯನ್ನು ಕೈಬಿಟ್ಟದ್ದು ಸರಿ ಅನಿಸಿತು.

ಭತ್ತದ ಹೊಸ ತಳಿಗಳು

ಮುಂದಿನ ಹಂತ, ಕರಾವಳಿ ಪ್ರದೇಶದಲ್ಲಿ ಭತ್ತದ ಅಧಿಕ ಇಳುವರಿ ತಳಿಗಳ ಪ್ರಯೋಗ. ಅದೇ ಅವಧಿಯಲ್ಲಿ ಪವರ್ ಟಿಲ್ಲರ್ ಗಳನ್ನೂ ನಮ್ಮ ಹೊಲಗಳಿಗೆ ಮೊದಲ ಬಾರಿಗೆ ಇಳಿಸಲಾಯಿತು. ಈಗಂತೂ ಎತ್ತುಗಳು ಅಥವಾ ಕೋಣಗಳು ಅಪರೂಪ! ಭತ್ತದ ಗದ್ದೆಗಳ ಉಳುಮೆಗೆ ಪವರ್ ಟಿಲ್ಲರ್‌ಗಳನ್ನೇ (ಬಾಡಿಗೆಗೆ) ಅವಲಂಬಿಸಬೇಕಾಗಿದೆ.

ಮನಿಲಾದ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ತೈಚುಂಗ್ 1 ಮತ್ತು ತೈಚುಂಗ್ 65 ಅಧಿಕ ಇಳುವರಿ ತಳಿಗಳನ್ನು ಭಾರತದಲ್ಲಿ ಪ್ರಥಮವಾಗಿ ಬೆಳೆಸಿದ ಪ್ರದೇಶಗಳಲ್ಲಿ ನಮ್ಮ ಕರಾವಳಿ ಜಿಲ್ಲೆಗಳು ಮುಂಚೂಣಿಯಲ್ಲಿದ್ದವು. ದಿವಂಗತ ಟಿ.ಎ.ಪೈಯವರು ತರಿಸಿಕೊಟ್ಟ ತೈಚುಂಗ್ 65 ತಳಿಯನ್ನು ನಾನು ಮೊದಲ ಬಾರಿ ಬೆಳೆಸಿದಾಗ ನನ್ನ ಅನುಭವದಲ್ಲೇ ಅತ್ಯಧಿಕ ಫಸಲು ಪಡೆದೆ. ಅನಂತರ ನಮ್ಮ ಜಿಲ್ಲೆಗೆ ತರಲಾದ ತಳಿ ಐ‌ಆರ್ 8. ಇದು ಬಹುಬೇಗ ಪ್ರಚಾರ ಪಡೆಯಿತು. ಅದಾದ ನಂತರ ಪರಿಚಯಿಸಲಾದ ಜಯಾ ತಳಿಯನ್ನು ರೈತರು ಈಗಲೂ ಬೆಳೆಯುತ್ತಿದ್ದಾರೆ. ಆದರೆ ಏಣಿಲು (ಮಳೆಗಾಲದ) ಬೆಳೆಯನ್ನು ಬಾಧಿಸುವ ಕಣೆಕೀಟದ ನಿರೋಧ ಗುಣವನ್ನು ಜಯ ತಳಿ ಹೊಂದಿರಲಿಲ್ಲ. ಅದ್ದರಿಂದ ಕಣೆಕೀಟ ನಿರೋಧಕ ತಳಿಯನ್ನು ಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ಗಮನ ನೀಡಿದರು. ಅದರ ಫಲವೇ ಜಿ‌.ಎಂ.ಆರ್.3, 2566 ಮತ್ತು ಶಕ್ತಿ ತಳಿಗಳ ಬಿಡುಗಡೆ. ಇವುಗಳಲ್ಲಿ ರೈತರು ಈಗಲೂ ಬೆಳೆಸುತ್ತಿರುವ ತಳಿ ಶಕ್ತಿ. (ಏಣಿಲು ಬೆಳೆಗೆ)

ಭತ್ತದ ಅಧಿಕ ಇಳುವರಿ ತಳಿಗಳನ್ನು ಬೆಳೆಸುವ ವೆಚ್ಚವೂ ಅಧಿಕ. ಇವಕ್ಕೆ ಒದಗಿಸಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ ಸ್ಥಳೀಯ ತಳಿಗಳಿಗೆ ಬೇಕಾದ್ದಕ್ಕಿಂತ ಇಮ್ಮಡಿ. ಅದಲ್ಲದೆ ಇವುಗಳಿಗೆ ಕೀಟಗಳ ಮತ್ತು ರೋಗಗಳ ಹಾವಳಿಯೂ ಜಾಸ್ತಿ. ಅವುಗಳ ನಿಯಂತ್ರಣಕ್ಕಾಗಿ ಹೊಲದ ಪೈರಿಗೆ ಪ್ರಯೋಗಿಸಬೇಕಾದ ಕೀಟನಾಶಕ ಮತ್ತು ರೋಗನಾಶಕಗಳ ಪ್ರಮಾಣವೂ ಅಧಿಕ. ಅಂತೂ ಅಧಿಕ ಇಳುವರಿ ತಳಿಗಳ ದೂರಗಾಮಿ ದುಷ್ಪರಿಣಾಮಗಳು ನಮ್ಮಲ್ಲಿ ಆತಂಕ ಹುಟ್ಟಿಸುತ್ತಿವೆ.

ಕಳಕೊಂಡದ್ದೇ ಜಾಸ್ತಿ

ಸ್ವಾತಂತ್ರ್ಯ ಪಡೆದ ಬಳಿಕ ಎರಡು ದಶಕಗಳಲ್ಲಿ ಭಾರತವು ಆಹಾರ ಕೊರತೆಯ ಸಮಸ್ಯೆಯನ್ನು ಬಗೆಹರಿಸಿಕೊ೦ಡದ್ದು ಸಾಧನೆ ನಿಜ. ಆದರೆ ಇದನ್ನು ಸಾಧ್ಯವಾಗಿಸಿದ ಕೃತಕ ಕೃಷಿಯ ಪರಿಣಾಮಗಳು ಈಗಷ್ಟೇ ಗೋಚರಿಸುತ್ತಿವೆ.

ಈ ನಡುವೆ ನಮ್ಮ ಕರಾವಳಿ ಪ್ರದೇಶದಲ್ಲಿ ಕೆಲವು ಗಮನಾರ್ಹ ಸಾಮಾಜಿಕ ಬದಲಾವಣೆಗಳಾದವು. ಭೂಮಸೂದೆ ಜ್ಯಾರಿಯಾಗಿ ಗೇಣಿದಾರರೇ ಭೂಮಾಲೀಕರಾದರು. ಹಳ್ಳಿಹಳ್ಳಿಗಳಲ್ಲಿ ನೂತನ ಭೂಮಾಲೀಕರು ಮುತುವರ್ಜಿಯಿಂದ ಕೃಷಿಗೆ ತೊಡಗಿದರು. ಬೀಡಿ ಕಟ್ಟುವ ಕಸುಬು ಬಹುಪಾಲು ಹಳ್ಳಿಗಳನ್ನು ಪ್ರವೇಶಿಸಿ, ಹೊಸ ಪೀಳಿಗೆಯ ಯುವಜನರಿಗೆ ಉದ್ಯೋಗ ನೀಡಿತು. ಭತ್ತದ ಕೃಷಿ ಕೆಲಸಗಳಿಗೆ ಆಳುಗಳು ಸಿಗುವುದೇ ಕಷ್ಟವಾಯಿತು. ಅವರ ದಿನಮಜೂರಿಯೂ ಹೆಚ್ಚಿತು. ಇವೆಲ್ಲ ಕಾರಣಗಳಿಂದಾಗಿ ಭತ್ತ ಬೆಳೆಯುವ ಒಟ್ಟು ಪ್ರದೇಶ ವರುಷದಿಂದ ವರುಷಕ್ಕೆ ಕಡಿಮೆಯಾಯಿತು. (ಭತ್ತದ ಬೆಳೆಯ ಕೀಟ ಹಾಗೂ ರೋಗಗಳ ಹೆಚ್ಚಳ ಮತ್ತು ತೋಟಗಾರಿಕಾ ಬೆಳೆ ಬೆಳೆಯುವ ಪ್ರದೇಶದ ಹೆಚ್ಚಳವೂ ಇದಕ್ಕೆ ಕಾರಣ)

ಕಳೆದ ನಾಲ್ಕು ದಶಕಗಳಲ್ಲಿ ಅನೇಕ ಭತ್ತದ ಅಧಿಕ ಇಳುವರಿ ತಳಿಗಳನ್ನು ಕರಾವಳಿ ಜಿಲ್ಲೆಗಳಲ್ಲಿ ಬೆಳೆದಿದ್ದೇವೆ. ಇವುಗಳ ಭರಾಟೆಯಲ್ಲಿ ನಮ್ಮ ನೂರಾರು ಸ್ಥಳೀಯ ಭತ್ತದ ತಳಿಗಳು ಅಳಿದು ಹೋದದ್ದು ನಮಗಾದ ದೊಡ್ಡ ನಷ್ಟ. ಸ್ವಾತಂತ್ರ್ಯಾನಂತರದ ಲೆಕ್ಕಪತ್ರ ಬರೆದರೆ, ಭತ್ತದ ಕೃಷಿಯಲ್ಲಿ ಕರಾವಳಿ ಪ್ರದೇಶದವರು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ.

ಹೊಸ ಹೊಸ ತಳಿಗಳ ಬೀಜ, ಅಧಿಕ ರಾಸಾಯನಿಕ ಗೊಬ್ಬರಗಳು, ಅಧಿಕ ಪೀಡೆನಾಶಕಗಳು, ಏರುತ್ತಿರುವ ಪೆಟ್ರೋಲ್/ ಡೀಸಿಲ್/ ಸಾಗಾಟವೆಚ್ಚ ಮತ್ತು ವಿದ್ಯುತ್ ವೆಚ್ಚ – ಇವನ್ನು ಆಧರಿಸಿದ ದುಬಾರಿ ಕೃಷಿಗಾಗಿ ರೈತನು ಬ್ಯಾಂಕ್ ಅಥವಾ ಸಹಕಾರಿ ಸೊಸೈಟಿಯಿಂದ ತೆಗೆದ ಸಾಲವೇ ಅವನಿಗೆ ಶೂಲವಾಗುತ್ತಿದೆ. ಆದರೆ ರೈತರು ಕಷ್ಟಪಟ್ಟು ಬೆಳೆದ ಕೃಷಿ ಉತ್ಪನ್ನಗಳ ಮಾರಾಟ ಬೆಲೆಗಳು ಇಳಿಯುತ್ತಲೇ ಇವೆ. ಉದಾರೀಕರಣ, ಖಾಸಗೀಕರಣದ ರಭಸದಲ್ಲಿ ಬಡಪಾಯಿ ರೈತ ನೆರೆಯಲ್ಲಿ ಸಿಲುಕಿದ ತರಗೆಲೆಯಂತೆ ಕೊಚ್ಚಿಕೊಂಡು ಹೋಗುತ್ತಿದ್ದಾನೆ.

ಸುಸ್ಥಿರಕೃಷಿ ಅನಿವಾರ್ಯ

ಇಂತಹ ದುಸ್ಥಿತಿಯಲ್ಲಿ ಪೋಪ್ ಜಾನ್ 23 ಅವರು ಹೇಳಿದ ಮಾತೊಂದು ನೆನಪಾಗುತ್ತಿದೆ – “ಇದೀಗ ಇಟೆಲಿಯಲ್ಲಿ ದುಡ್ಡು ಕಳೆದುಕೊಳ್ಳುವ ಮೂರು ದಾರಿಗಳಿವೆ – ಹೆಣ್ಣು, ಜುಗಾರಿ ಮತ್ತು ಕೃಷಿ. ನನ್ನ ತಂದೆ ಇವು ಮೂರರಲ್ಲಿ ಅತ್ಯಂತ ನಿರುತ್ಸಾಹದ ದಾರಿಯಾದ ಕೃಷಿಯನ್ನು ಆಯ್ಕೆ ಮಾಡಿಕೊಂಡರು”

ಅದೇನಿದ್ದರೂ ಭಾರತದಲ್ಲಿ ಕೃಷಿ ಯಾವತ್ತೂ ದುಡ್ಡು ಮಾಡುವ ದಂಧೆಯಾಗಿರಲಿಲ್ಲ. ತಲೆತಲಾಂತರದಿಂದ ಕೃಷಿ ಇಲ್ಲಿ ಒಂದು ಉದಾತ್ತ ಜೀವನ ವಿಧಾನವಾಗಿದೆ. ಬೀಜ, ಗಿಡ, ಮರ, ಬಳ್ಳಿ, ಬೆಳೆ, ಮಳೆ, ಕೆರೆ, ಬಾವಿ, ನದಿ, ಹಸು, ಪ್ರಾಣಿ, ಪಕ್ಷಿ, ಕೀಟ, ಎರೆಹುಳ ಇತ್ಯಾದಿ ಜೀವಸ೦ಕುಲವೆಲ್ಲವೂ ಜೀವಪರವಾದ ಕೃಷಿಯೆಂಬ ಜೀವನ ವಿಧಾನದಲ್ಲಿ ಹಾಸುಹೊಕ್ಕಾಗಿವೆ.

ಆದರೆ ಅಮೇರಿಕದಲ್ಲಿ ಹಾಗಲ್ಲ. ಅಲ್ಲಿನ ಜನಸಂಖ್ಯೆಯ ಶೇ. 4ರಷ್ಟು ಜನ ಮಾತ್ರ ಕೃಷಿಯಲ್ಲಿ ತೊಡಗಿದ್ದಾರೆ. ಅಲ್ಲಿನ ಕೃಷಿಕನದ್ದು ಸಾವಿರಾರು ಎಕ್ರೆಗಳ ಹಿಡುವಳಿ. ಅಲ್ಲಿನ ಕೃಷಿಕರು ಕೃಷಿಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಿ ಅದನ್ನೊಂದು ಕೈಗಾರಿಕೆಯಂತೆ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಪರಿಸ್ಥಿತಿ ಸ೦ಪೂರ್ಣ ಭಿನ್ನ. ಇಂದಿಗೂ ಭಾರತದಲ್ಲಿ ಜನಸಂಖ್ಯೆಯ ಶೇ.70 ಜನ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಕೃಷಿಕರಲ್ಲಿ ಶೇ.80 ಜನ ಸಣ್ಣ ಹಿಡುವಳಿದಾರರು. ಇಲ್ಲಿ ಯಂತ್ರಗಳ ಬಳಕೆ ಕಡಿಮೆ. ಯಾಕೆ೦ದರೆ ದೇಶದ ಆರು ಲಕ್ಷ ಹಳ್ಳಿಗಳ ಹೊಲಗಳಲ್ಲಿ ದುಡಿಯಲು ಕೋಟಿಗಟ್ಟಲೆ ಕೈಗಳಿವೆ. ಇಲ್ಲಿ ಕೃಷಿ ಕೈಗಾರಿಕೆಯಾಗಿಲ್ಲ. ಇಲ್ಲಿ ಕೃಷಿ ಒಂದು ಜೀವನ ವಿಧಾನವಾಗಿ ಸಾವಿರಾರು ವರುಷಗಳಿ೦ದ ಉಳಿದು ಬ೦ದಿದೆ.

ನಮ್ಮ ಕೃಷಿಯನ್ನು ಹಾಗೆ ಉಳಿಸಿಕೊಂಡರೆ ಮಾತ್ರ ನಮ್ಮ ದೇಶದ ಹಾಗೂ ನಮ್ಮ ಜನರ ಭವಿಷ್ಯ ಸುಭದ್ರವಾದೀತು. ಅದಕ್ಕಾಗಿ ಸುಸ್ಥಿರ ಕೃಷಿಯನ್ನು ಅವಲಂಬಿಸುವುದೇ ನಮಗೆ ಉಳಿದಿರುವ ದಾರಿ.

ಫೋಟೋ: ಪವರ್ ಟಿಲ್ಲರಿನಿಂದ ಗದ್ದೆಯ ಉಳುಮೆ… ಕೃಪೆ: ಷಟರ್ ಸ್ಟಾಕ್ ವೆಬ್-ಸೈಟ್

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ