ನನ್ನ ಕೃಷಿ ಜೀವನದಲ್ಲಿ ಕೃಷಿ ಪ್ರವಾಸಗಳಿ೦ದ ಬಹಳ ಪ್ರಯೋಜನವಾಗಿದೆ. ಕೃಷಿಕನಾದವನು ಕೇವಲ ತನ್ನ ತೋಟ-ಗದ್ದೆಗಳಲ್ಲಿ ಮಾತ್ರ ಓಡಾಡದೆ ಇತರೆಡೆಯೂ ಓಡಾಡಬೇಕು. ಆಗ ಕಾಲಕಾಲಕ್ಕೆ ಬದಲಾಗುತ್ತಿರುವ ಕೃಷಿ ವಿಚಾರಗಳು, ಮಾಹಿತಿಗಳು, ಕೃಷಿ ಸುಧಾರಣೆಗಳನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಹಾಗೆ ತಿಳಿದ ವಿಚಾರಗಳನ್ನು ತನ್ನ ತೋಟದಲ್ಲಿ, ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿ ಪ್ರವಾಸಗಳು ನನಗೆ ಹೊಸ ಪಾಠಗಳನ್ನು ಕಲಿಸಿದವು.

ನಾನು ಮಾಡಿದ ಪ್ರವಾಸಗಳು:-

1) ಸಿಂಡಿಕೇಟ್ ಕೃಷಿ ಪ್ರತಿಷ್ಠಾನವು ಉತ್ತಮ ಕೃಷಿಕರ ಆಯ್ಕೆಗಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕೃಷಿ ಕ್ಷೇತ್ರ ಪ್ರವಾಸ.

2) ಭಾರತ ಸರಕಾರದ ಕ್ಷೇತ್ರ ಪ್ರಚಾರ ಇಲಾಖೆಯವರು ಸಂಘಟಿಸಿದ ಕೃಷಿ ಕ್ಷೇತ್ರಗಳ ಪ್ರವಾಸ.

3) ಮೂಡಬಿದ್ರೆಯ ಕೃಷಿ ವಿಚಾರ ವಿನಿಮಯ ಕೇಂದ್ರ ಜರಗಿಸಿದ ಪ್ರವಾಸಗಳು.

4) ಅಡ್ಡೂರು ಕೃಷಿ ವಿಚಾರ ವಿನಿಮಯ ಕೇಂದ್ರ ಸಂಘಟಿಸಿದ ಪ್ರವಾಸಗಳು.

5) ಡಾ. ಎಲ್.ಸಿ.ಸೋನ್ಸ್‌ರೊಂದಿಗೆ ಅಧ್ಯಯನ ಪ್ರವಾಸಗಳು.

ಸಿಂಡಿಕೇಟ್ ಕೃಷಿ ಪ್ರತಿಷ್ಠಾನವು ಉತ್ತಮ ಕೃಷಿಕರ ಆಯ್ಕೆಗಾಗಿ ನಡೆಸಿದ ಪ್ರವಾಸ

ನಾನು, ಪಂಚಮಾಲ್ ಅಚ್ಯುತ ಪ್ರಭು, ಮಂಚಿ ನಾರಾಯಣ ಆಚಾರ್, ಡಾ.ಎಲ್.ಸಿ.ಸೋನ್ಸ್, ಪಾಂಗಾಳ ಸಂಜೀವ ಶೆಟ್ಟಿ, ಬೊಂಡಾಲ ಶ್ರೀಧರ ನಾಯ್ಕ್ – ಹೀಗೆ ಒಟ್ಟು ಆರು ಜನರು ಉತ್ತಮ ಕೃಷಿಕರ ಆಯ್ಕೆಗಾಗಿ ತೀರ್ಪುಗಾರರಾಗಿದ್ದೆವು.

ಉಡುಪಿಯಿಂದ ನಮ್ಮ ಪ್ರವಾಸ ಆರಂಭ. ಮೊದಲ ಭೇಟಿ ಧಾರವಾಡಕ್ಕೆ. ಅಲ್ಲಿ ಕುಲಕರ್ಣಿ ಎಂಬವರ ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ನೋಡಿದೆವು. ಹುಬ್ಬಳ್ಳಿಯಲ್ಲಿ ಒಬ್ಬ ಕೃಷಿಕರು ಹೈಬ್ರಿಡ್ ಜೋಳದ ಬೀಜ ತಯಾರಿಸಿ ಸರಕಾರಕ್ಕೆ ಕೊಡುತ್ತಿದ್ದರು. ಅವರು ಅದೇ ಹೈಬ್ರಿಡ್ ತಳಿಯನ್ನು ಬೆಳೆಯುತ್ತಿದ್ದರು. ಹೈಬ್ರಿಡ್ ಬೀಜ ಮಾಡುವ ತಂತ್ರಜ್ಞಾನ ನಮಗಲ್ಲಿ ತಿಳಿಯಿತು.

ಮುಂದೆ ನಿಪ್ಪಾಣಿಗೆ ಪಯಣ. ಅಲ್ಲಿನ ಒಬ್ಬ ರೈತ ಡ್ರೈ ರೈಸ್, ಹೊಗೆಸೊಪ್ಪು, ಮತ್ತು ವೀಳ್ಯದೆಲೆ ಕೃಷಿ ಮಾಡುತ್ತಿದ್ದರು. ದಿನಾ ವೀಳ್ಯದೆಲೆಯನ್ನು ಅವರು ಮುಂಬಯಿಗೆ ಕಳುಹಿಸುತ್ತಿದ್ದರು. ಅವರಲ್ಲಿ ಕಿಲಾರಿ ಜಾತಿಯ ಎತ್ತುಗಳು ಮತ್ತು ಬೀಜದ ಹೋರಿಗಳಿದ್ದುವು. ಅನಂತರ ಗದಗ, ಬಿಜಾಪುರ, ಬಸವಕಲ್ಯಾಣ, ಗುಲ್ಬರ್ಗ, ಗಂಗಾವತಿ, ಸಿಂಧನೂರುಗಳ ಕೃಷಿ ಕ್ಷೇತ್ರಗಳ ವೀಕ್ಷಣೆ.

ಬಾದಾಮಿ ಪಟ್ಟದಕಲ್ಲಿನ ರೈತರು ಜೋಳ (ಅಕ್ಕಿ ಜೋಳ) ಬೆಳೆದಿದ್ದರು. ತುಂಬಾ ರುಚಿ. ಡಾ.ಸೋನ್ಸರ ಪರಿಚಯವಾಗಿ ಅವರಿಂದ ಅಲ್ಲಿನ ರೈತರು ತೆಂಗು ಬೆಳೆ ಬೆಳೆಸುವುದರ ಬಗ್ಗೆ ಮಾಹಿತಿ ಕೇಳಿದರು. (ಹಲವು ವರುಷಗಳ ನಂತರ ಆ ಗ್ರಾಮದ ಕೆಲವು ಕೃಷಿ ಕಾರ್ಮಿಕರು ಕಬ್ಬಿನ ಕಟಾವಿಗಾಗಿ ಆಡ್ಡೂರಿಗೆ ಬಂದಿದ್ದರು. ಈಗ ತಮ್ಮ ಊರಿನಲ್ಲಿ ಅನೇಕರು ತೆಂಗು ಬೆಳೆಯುತ್ತಿದ್ದಾರೆಂದು ತಿಳಿಸಿದರು.)

ಸಿಂಧನೂರಿನಲ್ಲಿ ಶಿರ್ವ ಮೂಲದ ಒಬ್ಬ ವೈದ್ಯರು ಟ್ರಾಕ್ಟರ್ ಮೂಲಕ ಭತ್ತದ ಬೇಸಾಯ ಮಾಡುತ್ತಿದರು. ಬಾಂಗ್ಲಾದೇಶದಿಂದ ವಲಸೆ ಬಂದ ಅನೇಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮಜೂರಿ ಬಹಳ ಕಡಿಮೆ.

ಸಿಂಧನೂರಿನಿಂದ ಬಳ್ಳಾರಿ ಮಾರ್ಗವಾಗಿ ಬರುವಾಗ ಹೊಸಪೇಟೆ ಹತ್ತಿರ ಒಬ್ಬ ಆಂಧ್ರ ಮೂಲದ ಗುತ್ತಿಗೆದಾರರೊಬ್ಬರ ಹೊಲಕ್ಕೆ ಭೇಟಿ. ಆಂಧ್ರದ ವಿಜಯವಾಡದ ಹತ್ತಿರವಿದ್ದ ತನ್ನ ಎರಡೂವರೆ ಎಕ್ರೆ ಗದ್ದೆ ಮಾರಿ ಇಲ್ಲಿಗೆ ಬಂದು ನೆಲೆಸಿದ್ದರು. ಆಗ ಅಣೆಕಟ್ಟಿನ ನೀರಾವರಿ ಸ್ಥಳಗಳಲ್ಲಿ ಸರಕಾರ ಅನೇಕ ರೈತರಿಗೆ ಹತ್ತು ಎಕ್ರೆಯವರೆಗೆ ಜಮೀನು ನೀಡುತ್ತಿತ್ತು. ಒಡ್ಡು ನೀರಾವರಿ ವಿಧಾನದಿಂದ ತನ್ನ ಹತ್ತು ಎಕ್ರೆ ಫಲವತ್ತಾದ ಭೂಮಿಯನ್ನು ಕೃಷಿ ಮಾಡಲು ತೊಡಗಿದ ಈ ಗುತ್ತಿಗೆದಾರರು ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ತಲಾ 10 ಎಕ್ರೆ ಭೂಮಿ ಖರೀದಿಸಿ ಒಟ್ಟು 300 ಎಕ್ರೆ ಭೂಮಿ ಹೊಂದಿದ್ದರು. ಇದಲ್ಲದೆ ಸ್ಥಳೀಯ ರೈತ ವರ್ಗದವರಿಂದಲೂ ನೂರು ಎಕ್ರೆ ಹೊಲವನ್ನು ಗೇಣಿಗೆ ಪಡೆದು ಒಟ್ಟು 400 ಎಕ್ರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಇವರ ಹೊಲದಲ್ಲಿ ವಿವಿಧ ಬೆಳೆಗಳಿದ್ದುವು. ಬಾಳೆ, ಕಬ್ಬು, ಭತ್ತ ಮುಖ್ಯ ಬೆಳೆ. ಅವರ ಒಬ್ಬ ತಮ್ಮ ತಾಂತ್ರಿಕ ಪದವೀಧರರಾಗಿದ್ದು ಕೈತುಂಬಾ ಹಣ ಬರುವ ಕೆಲಸದಲ್ಲಿದ್ದವರು ಅದನ್ನು ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಉತ್ತಮ ಕೃಷಿಕ ಪ್ರಶಸ್ತಿಗೆ ಇವರು ಆಯ್ಕೆಯಾದರು.

ಬ್ರಹ್ಮಾವರದ ಸನಿಹ ಚಾಂತಾರು ಎಂಬಲ್ಲಿ ಚಾಂತಾರು ಭಟ್ಟರೆಂದೇ ಪ್ರಸಿದ್ದರಾದವರ ತೋಟಕ್ಕೆ ಹೋದದ್ದು ಈ ಪ್ರವಾಸದ ಕೊನೆಯ ಘಟ್ಟ. ಅವರು ಹುಬ್ಬಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಇಲ್ಲಿ ಹಲವು ದನಗಳನ್ನು ಸಾಕುತ್ತಿದ್ದರು. ಅವುಗಳಲ್ಲಿ ಹೆಚ್ಚಿನವು ಗೊಡ್ಡು ದನಗಳು. ಹಾಗೆಂತ ಆ ದನಗಳು ಅವರದಲ್ಲ! ಅವೆಲ್ಲ ಇತರರ ದನಗಳು. ಹಾಲು ಬತ್ತಿದ ದನಗಳನ್ನು ಸಾಕಿ, ಅವು ಗರ್ಭ ಧರಿಸಿ ಕರು ಹಾಕಿದ ಕೂಡಲೇ ವಾರೀಸುದಾರರಿಗೆ ಮರಳಿಸುತ್ತಿದ್ದರು. ಅದಕ್ಕೆ ಶುಲ್ಕವನ್ನು ನಿಗದಿಪಡಿಸಿದ್ದರು.

ಭಾರತ ಸರಕಾರದ ಕ್ಷೇತ್ರ ಪ್ರಚಾರ ಇಲಾಖೆಯ ಕೃಷಿ ಪ್ರವಾಸ

ಪ್ರತೀ ಜಿಲ್ಲೆಯಿಂದ ಇಬ್ಬರಂತೆ ಒಟ್ಟು 20 ಮಂದಿ ತಂಡದಲ್ಲಿದ್ದೆವು. ಹೆಚ್ಚಿನವರು ಕೃಷಿಕರು. ಕೆಲವರು ಒತ್ತಾಯಕ್ಕೆ ಬಂದಂತಿತ್ತು! ಬೆಂಗಳೂರಿನಿಂದ ಪ್ರವಾಸ ಆರಂಭ. ಕೃಷಿ ವಿಶ್ವವಿದ್ಯಾಲಯಕ್ಕೆ ಮೊದಲ ಭೇಟಿ. ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ. ಅನಂತರ ಹೇಸರಘಟ್ಟದ ಮೀನು ಮರಿ ಸಾಕಣೆ ಕೇಂದ್ರ ಮತ್ತು ದನ ಸಾಕಣೆ ಕೇಂದ್ರಗಳ ಭೇಟಿ. ಅಲ್ಲಿ ದನದ ಕೊಟ್ಟಿಗೆಯ ಸುತ್ತು ಅಗಳು ಹಾಕಿದ ಪ್ರದೇಶದಲ್ಲಿ ದನಗಳನ್ನೆಲ್ಲ ಬಿಡುವುದು ಪದ್ದತಿ. ನಾವು ಹೋಗಿದ್ದಾಗ ಕೊಟ್ಟಿಗೆಯಲ್ಲಿ ದನಗಳಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ದನಗಳೆಲ್ಲಾ ಅವುಗಳ ಸ್ವಸ್ಥಾನಕ್ಕೆ ಯಾರ ಸಹಾಯವೂ ಇಲ್ಲದೆ ಬಂದುವು. ಅಲ್ಲಿ ಆಹಾರ ಇಡಲಾಗಿತ್ತು. ಅವುಗಳೆಲ್ಲಾ ತಿನ್ನಲು ಶುರುಮಾಡುತ್ತಿದ್ದಂತೆ, ಅಲ್ಲಿ ಅಳವಡಿಸಿದ್ದ ಪಟ್ಟಿಗಳು ದನಗಳ ಕುತ್ತಿಗೆಯನ್ನು ಆಧರಿಸಿದವು. ಇದರಿಂದಾಗಿ ತಿನ್ನಲು ಬಾಗಿಸಿದ್ದ ಕುತ್ತಿಗೆಯನ್ನು ಹೊರ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಹೊತ್ತಿನಲ್ಲಿ ಹಾಲು ಕರೆಯಲಾಗುತ್ತಿತ್ತು. ಆಗ ಹಾಲು ಕರೆಯುವ ಯಂತ್ರಗಳ ಬಳಕೆ ಇರಲಿಲ್ಲ.

ಮುಂದೆ ಮಂಡ್ಯದ ವಿ.ಸಿ. (ವಿಶ್ವೇಶ್ವರಯ್ಯ ಕೆನಾಲ್) ಫಾರ್ಮ್ ಮತ್ತು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಕೊಯಂಬತ್ತೂರಿಗೆ ತೆರಳಿದೆವು. ಅಲ್ಲಿನ ಕೃಷಿ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ನಮಗೆ ವಸತಿ. ಮರುದಿನ ನನ್ನ ಜೊತೆ ಬಂದಿದ್ದವರು ಬೇರೆಲ್ಲೋ ತಿರುಗಾಡಲು ಹೋಗಿದ್ದರು. ನಾನು ಮಾತ್ರ ವಿ.ವಿ.ಯಲ್ಲೇ ಉಳಿದುಕೊಂಡು ಕೃಷಿ ವಿಸ್ತರಣಾ ವಿಜ್ಞಾನಿಗಳ ಪರಿಚಯ ಮಾಡಿಕೊಂಡೆ. ನಾನು ತಮಿಳು ಭಾಷೆ ತಿಳಿದವನಾದ ಕಾರಣ ಅವರ ತಮಿಳು ಕೃಷಿ ಮಾಸಿಕಕ್ಕೆ ಚಂದಾದಾರನಾದೆ. ಕೃಷಿ ವಿಸ್ತರಣೆಯ ಪ್ರಾಧ್ಯಾಪಕರಾದ ಪ್ರೊ. ಕ೦ದಸ್ವಾಮಿ ಅಲ್ಲಿ ಪರಿಚಿತರಾದರು. ಊರಿಗೆ ಮರಳಿದ ಬಳಿಕ ಅವರೊಂದಿಗೆ ಪತ್ರ ವ್ಯವಹಾರ ಮಾಡುತ್ತಿದ್ದೆ. ಅನಂತರ ಮಲಪುಜಾ ಅಣೆಕಟ್ಟನ್ನು ಸಂದರ್ಶಿಸಿದೆವು.

ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಸಿಗದಿದ್ದರೂ, ಅದೊಂದು ಸ್ಮರಣೀಯ ಪ್ರವಾಸ.

ಫೋಟೋ: ಮಂಡ್ಯದ ವಿ.ಸಿ. ಫಾರ್ಮಿನ ಕೃಷಿ ವಿಜ್ಞಾನ ಕೇಂದ್ರ

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ