ಮೂಡಬಿದ್ರೆ ಕೃಷಿ ವಿಚಾರ ವಿನಿಮಯ ಕೇಂದ್ರ ಜರಗಿಸಿದ ಪ್ರವಾಸಗಳಲ್ಲಿ ಸಂದರ್ಶಿಸಿದ ಕ್ಷೇತ್ರಗಳು

-ಜೀವಂಧರ ಕುಮಾರರ ಮಂಗಳಾಫಾರ್ಮ್

-ಸುಳ್ಯದ ಕುರುಂಜಿಕಾರ್ ಕೆ.ಎಂ.ಗೋಪಾಲಕೃಷ್ಣ ಗೌಡರ ಮಾದರಿ ತೆಂಗಿನ ತೋಟ

-ಚೆಟ್ಟಳ್ಳಿಯ ಲಿಂಬೆಜಾತಿ ಗಿಡಗಳ ಸಂಶೋಧನಾ ಕೇಂದ್ರ

-ಮಾಟಕ್‌ನ ಅರಣ್ಯ ಸಂಶೋಧನಾ ಮತ್ತು ನರ್ಸರಿ ಕೇಂದ್ರ

-ಕೃಷ್ಣರಾಜಸಾಗರ ಬಳಿ ಇದ್ದ ತೋಟಗಾರಿಕಾ ನರ್ಸರಿ ತೋಟ

-ತಳಿಪರಂಬದ ತೋಟಗಾರಿಕಾ ಕೇಂದ್ರ

-ಕಾಸರಗೋಡಿನ ಸಿಪಿಸಿ‌ಆರ್‌ಐ

-ಬ್ರಹ್ಮಾವರದ ಕೃಷಿ ಸಂಶೋಧನಾ ಕ್ಷೇತ್ರ

-ಚೇರ್ಕಾಡಿ ರಾಮಚಂದ್ರ ರಾಯರ ತೋಟ

-ಆನಂದಪುರ ಗ್ರಾಮೀಣಾಭಿವೃಧ್ಢಿ ಕೇಂದ್ರ ಮತ್ತು ಗೋಕುಲ ಕೃಷಿ ಕ್ಷೇತ್ರ

-ಬನವಾಸಿಯ ರಾವುಫ್ ಸಾಹೇಬರ ಅನಾನಸು ಬೆಳೆ

-ಶಿರಸಿ ಭೈರುಂಭೆಯ ಹೆಗಡೆಯವರ ಕೃಷಿ ಕ್ಷೇತ್ರ

-ತೀರ್ಥಹಳ್ಳಿ ಕುರುವಳ್ಳಿಯ ಪುರುಶೋತ್ತಮ ರಾಯರ ಕೃಷಿ ಕ್ಷೇತ್ರ

ಈ ಕೃಷಿ ಕ್ಷೇತ್ರಗಳ ಸಂದರ್ಶನ ಮತ್ತು ಅವುಗಳ ಮಾಲೀಕರೊಂದಿಗಿನ ಸಂವಾದದಿಂದ ಹಲವಾರು ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು. ಅನೇಕ ಕೃಷಿ ಪ್ರಯೋಗಗಳನ್ನು ಹಾಗೂ ಕೃಷಿ ವಿಧಾನಗಳನ್ನು ಕಣ್ಣಾರೆ ಕಂಡದ್ದು ಈ ಪ್ರವಾಸಗಳಿಂದಾದ ಉಪಯೋಗ.

ಅಡ್ಡೂರು ಮತ್ತು ಪೊಳಲಿ ಕೃಷಿ ವಿಚಾರ ವಿನಿಮಯ ಕೇಂದ್ರಗಳ ಕೃಷಿ ಪ್ರವಾಸ

ಇವನ್ನು ಎರಡು ಬಾರಿ ನಾನೇ ಸಂಘಟಿಸಿದ್ದೆ. ಜೀವಂಧರ ಕುಮಾರರ ಮಂಗಳಾ ಫಾರ್ಮ್, ಕಾಂತ ರೈಗಳ ಕೃಷಿ ಕ್ಷೇತ್ರ, ಡಾ. ಎಲ್.ಸಿ. ಸೋನ್ಸ್‌ರ ಫಾರ್ಮ್, ವಿಟ್ಲದ ಸಿ.ಪಿ.ಸಿ.ಆರ್.ಐ., ಉಳ್ಳಾಲದ ಗೇರು ಸಂಶೋಧನಾ ಕೇಂದ್ರ, ಕಂಕನಾಡಿ ಭತ್ತ ಸಂಶೋಧನಾ ಕೇಂದ್ರ, ಎ.ಜಿ.ಕೊಡ್ಗಿಯವರ ಕೃಷಿ ಕ್ಷೇತ್ರಗಳನ್ನು ಈ ಪ್ರವಾಸದಲ್ಲಿ ಸಂದರ್ಶಿಸಿದ್ದೆವು.

ಡಾ.ಎಲ್.ಸಿ. ಸೋನ್ಸರೊಂದಿಗೆ ಅಧ್ಯಯನ ಪ್ರವಾಸಗಳು

ಇವುಗಳಲ್ಲದೆ ನಾನು ಡಾ.ಸೋನ್ಸ್ ರೊಂದಿಗೆ ಖಾಸಗಿಯಾಗಿ ಹೋದ ಪ್ರವಾಸಗಳು ಅನೇಕ. ಅವೆಲ್ಲಾ ಅಧ್ಯಯನ ಪ್ರವಾಸಗಳು. ಬೇರೆ ಪ್ರವಾಸದಲ್ಲಿ ವಿವಿಧ ಆಸಕ್ತಿ ಹೊಂದಿದ ಹೊಂದಿದ ವ್ಯಕ್ತಿಗಳಿದ್ದಾಗ ಕೃಷಿ ವಿಚಾರಗಳಲ್ಲದೆ ಇತರ ವಿಚಾರಗಳೂ ಚರ್ಚೆಯಲ್ಲಿ ನುಸುಳುತ್ತಿದ್ದುವು. ಸೋನ್ಸ್‌ರೊಂದಿಗೆ ಹೋದಾಗ ಹೀಗೆ ಆಗುತ್ತಿರಲಿಲ್ಲ. ಕೇವಲ ಕೃಷಿ ಕುತೂಹಲಗಳನ್ನು ಮಾತ್ರ ಮುಕ್ತವಾಗಿ ಚರ್ಚಿಸಲು ಅನುಕೂಲವಾಗುತ್ತಿತ್ತು.

ಡಾ.ಸೋನ್ಸರು ಕೃಷಿ ವಿಜ್ಞಾನಿ ಮತ್ತು ಕೃಷಿ ಸಾಧಕ. ಅವರ ಕೃಷಿ ಅನುಭವದ ಮುಂದೆ ನಮ್ಮ ಕೃಷಿ ವಿಜ್ಞಾನಿಗಳನೇಕರು ನಾಚಲೇಬೇಕು.

ಒಮ್ಮೆ ಅವರೊಂದಿಗೆ ಅರಸೀಕೆರೆಯ ತೆಂಗು ಸಂಶೋಧನಾ ಕೇಂದ್ರಕ್ಕೆ ಹೋಗಿದ್ದೆ. ಪೆರಾಜೆ ಶ್ರೀನಿವಾಸ ರಾಯರು ಜೊತೆಗಿದ್ದರು. ಈ ಸಂಶೋಧನಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಗಂಗಾಪಾಣಿ ಎಂದು ಬರೆದಿದ್ದ ಫಲಕವೊಂದಿತ್ತು. ಅದರಲ್ಲಿ ತೆಂಗಿನ ಚಿತ್ರವೂ ಇತ್ತು. ಗಂಗಾಪಾಣಿ ತಿಪಟೂರಿನ ವಿಶಿಷ್ಠ ತೆಂಗಿನ ತಳಿ. ಅದರ ಕಾಯಿ ಉದ್ದ. ಗಂಗಬೊಂಡಂನ ಹಾಗೆ ವರ್ತುಲವಿಲ್ಲ. ಫಲಕದಲ್ಲಿ ಅದನ್ನು ಕಾಸರಗೋಡಿನ ಸಿಪಿಸಿ‌ಆರ್‌ಐನಿಂದ ತಂದಿರುವುದೆಂದೂ ನಮೂದಾಗಿತ್ತು. ಇದು ತಪ್ಪು. ಈ ನಮೂನೆಯ ತಪ್ಪು ಮಾಹಿತಿ ಕೃಷಿ ಸಂಶೋಧನಾ ಕೇಂದ್ರದಲ್ಲೇ ಇತ್ತು!

ಇನ್ನೊಮ್ಮೆ ಸೋನ್ಸ್‌ರೊಂದಿಗೆ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಹೋಗಿದ್ದೆ. ಮರುಭೂಮಿಯಂತಿದ್ದ ಪ್ರದೇಶದಲ್ಲಿ ಕಾಡು ಬೆಳೆಸಿದ್ದರು. ಎಲ್ಲಾ ಜಾತಿಯ ಮರಗಳಿದ್ದವು. ಇವುಗಳ ನಿರ್ವಹಣೆ ಬಗ್ಗೆ ತಿಂಗಳಿಗೊಂದು ಸಲ ನೆರೆಯ ಗ್ರಾಮಗಳ ಕೃಷಿಕರ ಸಭೆಗಳನ್ನು ಜರುಗಿಸುತ್ತಿರುವ ವಿಚಾರ ತಿಳಿಯಿತು. ರೈತರೇನೋ ಬರುತ್ತಿದ್ದರು. ಆದರೆ ಅವರು ಅದರಿಂದ ಪ್ರಯೋಜನ ಪಡೆದಂತೆ ಕಾಣಲಿಲ್ಲ. ಯಾಕೆಂದರೆ ಅವರ‍್ಯಾರೂ ಕಾಡು ಬೆಳೆಸಿದ್ದು ಕಾಣಲಿಲ್ಲ. ಅನಂತರ ಮನಮೋಹನ್ ಅತ್ತಾವರ ಅವರ ಇಂಡೋ ಅಮೇರಿಕನ್ ಹೈಬ್ರೀಡ್ ಸಂಸ್ಥೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಮೈಸೂರು ರಾಮಕೃಷ್ಣಾಶ್ರಮದ ತೋಟಗಳನ್ನು ಸಂದರ್ಶಿದೆವು.

ಮತ್ತೊಮ್ಮೆ ಡಾ.ಸೋನ್ಸರು, ಜೀವಂಧರ್ ಕುಮಾರ್ ಮತ್ತು ನಾನು ಜೊತೆಯಲ್ಲಿ ತ್ರಿಶೂರ್, ಕೊಟ್ಟಾಯಂ, ಕುಮರಕ್ಕೋಂ, ಮತ್ತು ತಮಿಳುನಾಡಿನ ಕುಟ್ರಾಲಂಗೆ ಹೋಗಿದ್ದೆವು. ಅಲ್ಲಿ ಜಲಪಾತವಿದೆ. ಅದರ ಹತ್ತಿರ ಪುಣ್ಯ ಕ್ಷೇತ್ರವಿದೆ. ಅಲ್ಲಿ ಸಂತೆಯಲ್ಲಿ ರಂಬುಟಾನ್ ಹಣ್ಣು ಮಾರಾಟವಾಗುತ್ತದೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಹೋಗಿದ್ದೆವು. ಆಗಲೇ ಸೋನ್ಸರು ತಮ್ಮ ಕೃಷಿ ಕ್ಷೇತ್ರದಲ್ಲಿ ರಂಬುಟಾನ್ ಬೆಳೆಸಿದ್ದರು. ಅವುಗಳನ್ನು ಮಲೇಶಿಯಾದಿಂದ ತಂದು ಬೆಳೆಸಲು ಅವರಿಗೆ ತುಂಬಾ ವೆಚ್ಚವಾಗಿದೆ. ಈಗ ಅವುಗಳು ಫಲ ನೀಡುತ್ತಿವೆ. ಒಂದು ಮರ ತೊಂಭತ್ತು ಕಿಲೋ ಹಣ್ಣು ನೀಡಿದೆ. ಒಂದುಹಣ್ಣಿಗೆ ಎರಡು ರೂಪಾಯಿ ದರವಿದೆ.

ರಂಬುಟಾನ್‌ನ ದೊಡ್ಡ ಮಾರುಕಟ್ಟೆ ಎಲ್ಲಿ ಎಂದು ತಿಳಿದಿರಲಿಲ್ಲ. ಹಾಗಾಗಿ ರಂಬುಟಾನ್ ಮಾರಾಟ ಮಾಡುವ ಅಂಗಡಿಗಳಿಗೆ ಹೋದೆವು. ಒಂದೊಂದು ಹಣ್ಣಿಗೆ ಎರಡು ರೂಪಾಯಿ ಬೆಲೆ. ಹಣ್ಣಿನ ಬೆಳೆಗಾರರ ಬಗ್ಗೆ ವಿಚಾರಿಸಿದಾಗ ಮಾರಾಟಗಾರರು ಗುಟ್ಟು ಬಿಡಲಿಲ್ಲ. ‘ತ್ರಿಚೂರಿನಿಂದ’ ಎಂದಷ್ಟೇ ಉತ್ತರ ನೀಡಿದರು. ‘ನಿಮಗೆ ಯಾಕೆ’ ಎಂದೂ ಪ್ರಶ್ನಿಸಿದ್ದರು. ನಾವು ಅಲ್ಲಿನ ಬೆಳೆಗಾರರನ್ನು ಪತ್ತೆ ಮಾಡಿ ನಾವೇ ಹಣ್ಣಿನ ಮಾರಾಟ ಮಾಡುತ್ತೇವೆ ಎಂದು ಅವರು ಹೆದರಿರಬೇಕು. ಕೊನೆಗೆ ತ್ರಿಶೂರು ವಿವಿ ಯನ್ನು ಸಂಪರ್ಕಿಸಿದೆವು. ಅಲ್ಲಿನ ವಿಜ್ಞಾನಿಯೊಬ್ಬರು ಸೋನ್ಸರ ಪರಿಚಯದವರು. ಅವರು ಒಬ್ಬ ಸಹಾಯಕರನ್ನು ನಮ್ಮ ಜೊತೆಗೆ ಕಳುಹಿಸಿದರು. ಅಂತೂ ರಂಬುಟಾನ್ ಬೆಳೆಗಾರನಲ್ಲಿಗೆ ಹೋದೆವು. ಅಲ್ಲಿ ಕೆಲವೇ ಸಣ್ಣ ಮರಗಳಿದ್ದುವು. ಅವರು ನಮ್ಮ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದರು. ಸೋನ್ಸರ ತೋಟದಲ್ಲಿ ತೊಂಭತ್ತು ಕಿಲೋ ಹಣ್ಣು ನೀಡುವ ಮರ ಇದೆ ಎಂದು ತಿಳಿಸಿದಾಗ ಅವರಿಗೆ ಆಶ್ಚರ್ಯ. ಕೊನೆಗೆ ರಂಬುಟಾನ್ ಬಗ್ಗೆ ನಮ್ಮಿಂದ ಮಾಹಿತಿ ಪಡೆಯಲು ಉತ್ಸುಕರಾದರು!

ಸಾವಯವ ಕೃಷಿಕರ ಭೇಟಿ

ಕುಕ್ಕುಜಡ್ಕದಲ್ಲಿ ಜರುಗಿದ ಸಾವಯವ ಕೃಷಿ ವಿಚಾರ ಗೋಷ್ಠಿಯಲ್ಲಿ ಧಾರವಾಡದ ಭರಮ ಗೌಡರ್ ಮತ್ತು ದಿ. ಎ.ಎನ್.ಮೂರ್ತಿಯವರ ಪುತ್ರ ಡಾ.ಅ.ನ.ನಾಗರಾಜ್ ಪರಿಚಯ ನನಗಾಯಿತು. ಅವರು ವಿಶ್ವ ಸಂಸ್ಥೆಯ FAO ಸಲಹೆಗಾರನಾಗಿ ಬಹಳ ವರುಷ ಕೆಲಸ ಮಾಡಿದ್ದರು. ಅವರು ಜಗತ್ತಿನ ಕೃಷಿ ವಿಜ್ಞಾನಿಗಳು ವಿಷಮಯ ಕೀಟನಾಶಕಗಳ ಬಳಕೆಯನ್ನು ಶಿಫಾರಸು ಮಾಡುವುದನ್ನು ಒಪ್ಪದೆ ಆ ಹುದ್ದೆಯನ್ನು ತ್ಯಜಿಸಿ, ಮೈಸೂರಿನಲ್ಲಿ ನೆಲೆಸಿ ಸಾವಯವ ಕೃಷಿಗೆ ಇಳಿದರು. ಮೈಸೂರು ನಗರದ ತ್ಯಾಜ್ಯವನ್ನೆಲ್ಲ ಅವರ ಕ್ಷೇತ್ರದ ಬಳಿ ಬಿಟ್ಟು ಹೊಲಸು ಮಾಡುವುದನ್ನು ನೋಡಿ ಅಲ್ಲಿಗೆ ವಿದಾಯ ಹೇಳಿ ತೀರ್ಥಹಳ್ಳಿ ಹತ್ತಿರದ ಭೀಮನಕಟ್ಟೆಯಲ್ಲಿ ತೋಟ ಮಾಡಿದ್ದಾರೆ. ಅವರು ಈಗಲೂ ಸಾವಯವ ಕೃಷಿ ಮತ್ತು ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಪರಿಪೂರ್ಣ ಜೀವನ ಶೈಲಿಯ ಪ್ರತಿಪಾದಕರು.

ಒಮ್ಮೆ ಕೃಷಿ ವಿ.ವಿ.ಯವರು ಪ್ರತೀ ಜಿಲ್ಲೆಯಿಂದ ಒಬ್ಬೊಬ್ಬ ಕೃಷಿಕರನ್ನು ರಾಜ್ಯ ಮಟ್ಟದ ಸಮ್ಮೇಳನಕ್ಕೆ ಕರೆದಿದ್ದರು. ದಕ್ಷಿಣ ಕನ್ನಡದಿಂದ ನಾನು ಹೋಗಿದ್ದೆ. ಅಲ್ಲಿ ಶಿವಮೊಗ್ಗ ಪ್ರಫುಲ್ಲಚಂದ್ರ, ಬೆಂಗಳೂರಿನ ದ್ರಾಕ್ಷಿ ಬೆಳೆಗಾರ ಅನಂತಪ್ಪ, ಬೆಂಗಳೂರು ಗ್ರಾಮಾಂತರದ ಸಾವಯವ ಕೃಷಿಕ ವರ್ತೂರಿನ ಜಿ.ನಾರಾಯಣ ರೆಡ್ಡಿ ಇವರ ಪರಿಚಯವಾಯಿತು.

ದೆಹಲಿಯ ಜಾಗತಿಕ ಕೃಷಿ ಮೇಳ

1961ರಲ್ಲಿ ದೆಹಲಿಯಲ್ಲಿ ಜರುಗಿದ ಜಾಗತಿಕ ಕೃಷಿ ಮೇಳಕ್ಕೆ ಹೋಗಿ ಬ೦ದದ್ದು ನನ್ನ ಮೊದಲನೆಯ ಕೃಷಿ ಪ್ರವಾಸ. ಪ್ರತೀ ಬ್ಲಾಕ್‌ನಿಂದ ಆರು ಜನರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ 96 ಮಂದಿ ಕೃಷಿಕರು ಒಂದೇ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿದ್ದೆವು. ನಮಗೆ ನಮ್ಮ ಜಿಲ್ಲೆಯ ಹಾಗೂ ಇತರ ಜಿಲ್ಲೆಗಳ ರೈತರ ಪರಿಚಯವಾಯಿತು. ಈ ಪರಿಚಯದ ಆಧಾರದಿ೦ದ ನಾವು ನಂತರ ಜಿಲ್ಲೆಯಲ್ಲಿ ಕೃಷಿ ಅನುಭವ ಕೂಟವನ್ನು ಸ್ಥಾಪಿಸಲು ಸಾಧ್ಯವಾಯಿತು.

ಅಲ್ಲಿ ಜಪಾನ್ ನಿರ್ಮಿತ ಪವರ್ ಟಿಲ್ಲರ್ ಪ್ರದರ್ಶಿಸಲಾಗಿತ್ತು. ಆಗ ಅದರ ಕ್ರಯ ರೂ.1500. ಅದನ್ನು ನಮ್ಮ ಜಿಲ್ಲೆಗೆ ಕಳುಹಿಸಿ ಪ್ರಯೋಗ ಮಾಡಬೇಕೆಂದು ವಿನಂತಿಸಿದೆವು. ಆಗ ಐ.ಸಿ.ಎ.ಆರ್.ನ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿದ್ದವರು ಇ.ವಿಠಲರಾಯರ ಹಿರಿಯ ಸಹೋದರ ಇ.ಜಿ.ಕೆ.ರಾವ್. ಅವರು ನಮ್ಮ ಮನವಿಗೆ ಸ್ಪಂದಿಸಿ, ನಂತರ ಅದನ್ನು ಕಂಕನಾಡಿ ಭತ್ತ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿದರು. ಅಲ್ಲಿ ಅದರ ಪ್ರದರ್ಶನವಾಯಿತು. ಅನಂತರ ನಮ್ಮ ಜಿಲ್ಲೆಗೆ ಪವರ್ ಟಿಲ್ಲರ್ ಪ್ರವೇಶ ಮಾಡಿತು. ಪ್ರಾರಂಭದಲ್ಲಿ ಕೇವಲ ಐದು ಸಾವಿರ ರೂಪಾಯಿಗಳಿಗೆ ಸಿಗುತ್ತಿದ್ದ ಜಪಾನ್ ನಿರ್ಮಿತ ಪವರ್ ಟಿಲ್ಲರ್‌ನ ಕ್ರಯ ಕ್ರಮೇಣ ಹತ್ತು ಸಾವಿರ ರೂಪಾಯಿಗಳಿಗೆ ಏರಿತು. ಈಗ ಅದರ ಬೆಲೆ ಸುಮಾರು ಒಂದು ಲಕ್ಷ ರೂಪಾಯಿ!

ಮೂಡಬಿದ್ರೆಯ ಕೃಷಿ ವಿಚಾರ ವಿನಿಮಯ ಕೇಂದ್ರವು ಇತ್ತೀಚೆಗೆ (2003) ಮಿಜಾರಿನ ಡಾ.ಮೋಹನ ಆಳ್ವರ ‘ಶೋಭಾವನ’ದಲ್ಲಿ ಚರ್ಚಾ ಕಾರ್ಯಕ್ರಮ ಏರ್ಪಡಿಸಿತ್ತು. ಬಾಳಸಂಜೆಯಲ್ಲಿರುವ ನನಗೆ ನಾಳೆ ಏನಾಗುತ್ತದೆಂದು ತಿಳಿಯದು. ಇನ್ನು ಮುಂಚಿನಂತೆ ಕೃಷಿ ಕ್ಷೇತ್ರಗಳಿಗೆ ಪ್ರವಾಸ ಹೋಗಲು ಸಾಧ್ಯವಾಗದು. ಹಾಗಾಗಿ ಎಲ್ಲರನ್ನು ಕಂಡು ಮಾತನಾಡಿ ಬೀಳ್ಕೊಟ್ಟು ಬರುವ ಉದ್ದೇಶದಿಂದ ಹೋಗಿದ್ದೆ. ನನ್ನ ಬದುಕಿನ ಕೃಷಿ ಪ್ರವಾಸಗಳ ಘಟನೆಗಳನ್ನೂ, ಅವುಗಳಿಂದ ಕಲಿತ ವಿಷಯಗಳನ್ನೂ ನೆನಪು ಮಾಡಿಕೊಳ್ಳುತ್ತಾ ಅಲ್ಲಿಂದ ಹಿಂತಿರುಗಿದೆ.

ಫೋಟೋ: ದಿವಂಗತ ಡಾ. ಎಲ್.ಸಿ. ಸೋನ್ಸ್ - ಮೂಡಬಿದಿರೆಯ ತಮ್ಮ ಅನಾನಸ್ ಫಾರ್ಮಿನ ಮನೆಯೆದುರು

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ