ಮಂಗಳೂರಿನಲ್ಲಿ ಅರುವತ್ತರ ದಶಕದಲ್ಲಿ ಜರುಗಿದ ಒಂದು ಸೆಮಿನಾರಿನಲ್ಲಿ ಚರ್ಚೆ ನಡೆಯುತ್ತಿತ್ತು. ನಾನು ಅಲ್ಲೇ ಕುಳಿತು ಚರ್ಚೆ ಕೇಳುತ್ತಿದ್ದೆ. ಕರ್ನಾಟಕದ ಕೃಷಿ ನಿರ್ದೇಶಕರಾಗಿದ್ದ ಡಾ.ಆರಕೇರಿಯವರು ಚರ್ಚೆಯನ್ನು ನಡೆಸುತ್ತಿದ್ದ ಕೃಷಿ ತಜ್ಞರನ್ನು ಇತ್ತ ಕರೆದು, “ನೀವು ನಿಮಗೆ ಗೊತ್ತಿಲ್ಲದ ವಿಷಯವನ್ನು ‘ಗೊತ್ತಿಲ್ಲ’ ಆಮೇಲೆ ಹೇಳುತ್ತೇನೆ ಅನ್ನಿ. ಗೊತ್ತಿಲ್ಲದೆ ಏನಾದರೂ ಹಾರಿಕೆಯ ಉತ್ತರ ಕೊಡಬೇಡಿ. ಇಲ್ಲಿಯ ರೈತರು ಚೆನ್ನಾಗಿ ತಿಳಿದಿದ್ದಾರೆ” ಎಂದು ಕಿವಿ ಮಾತು ಹೇಳಿದರು.

ಹೀಗೆ ರೈತರ ಬಗ್ಗೆ ಅವರು ಗೌರವ ತೋರಿಸಲು ಕಾರಣ, ಮಂಗಳೂರಿನಲ್ಲಿ ನಡೆಯುತ್ತಿದ್ದ ಅಂತಹ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ರೈತರ ತಿಳುವಳಿಕೆಯ ಮಟ್ಟ ಹಾಗೂ ದಶಕಗಳ ಅನುಭವ.

ಇಲ್ಲಿನ ರೈತರಲ್ಲಿ ತಿಳುವಳಿಕೆಯ ಮಟ್ಟ ಏರಲು ಮುಖ್ಯ ಕಾರಣ, ಇಲ್ಲಿ ಆಗಲೇ ಸಕ್ರಿಯವಾಗಿದ್ದ ಕೃಷಿ ಅನುಭವ ಕೂಟ (Farm Experience Club) ಎಂಬ ಸಂಘಟನೆ.

ಸುಮಾರು 1965ರಲ್ಲಿ ಕಿನ್ಯದ ಇ.ವಿಠಲ ರಾವ್, ನಾನು ಮತ್ತು ಕೆಲವು ಪ್ರಗತಿಶೀಲ ರೈತರು ಒಟ್ಟುಸೇರಿ ಈ ಸಂಘಟನೆ ಸ್ಥಾಪಿಸಲು ತೀರ್ಮಾನಿಸಿದೆವು. ಕೃಷಿ ತಜ್ಞರು ಮತ್ತು ಅಧಿಕಾರಿಗಳು ಹೇಳಿದ್ದನ್ನು ಕೇಳುವಾಗ, ಏಕೆ? ಹೇಗೆ? ಅದರಿಂದ ಪ್ರಯೋಜನವೇನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದ್ದುವು. ಈ ಬಗ್ಗೆ ಸಂವಾದಕ್ಕಾಗಿ ಈ ಕೂಟ ಸ್ಥಾಪಿಸಿದೆವು. ನಮ್ಮ ಸದಸ್ಯರು ಕೃಷಿ ಇಲಾಖೆ ಏರ್ಪಡಿಸುವ ಸಭೆ, ವಿಚಾರಗೋಷ್ಠಿ ಮತ್ತು ಸಮಾವೇಶಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ತಿಂಗಳಿಗೊಂದು ಸಭೆ, ಪ್ರತಿ ಸಭೆಯಲ್ಲಿ ಯಾವುದಾದರೂ ಒಂದು ವಿಚಾರದ ಬಗ್ಗೆ ಅನುಭವಿ ರೈತ ಅಥವಾ ತಜ್ಞರೊಬ್ಬರಿಂದ ವಿಶ್ಲೇಷಣೆ, ಅದರ ಮೇಲೆ ಚರ್ಚೆ-ಪ್ರಶ್ನೋತ್ತರ ನಡೆಸುವುದು ನಮ್ಮ ಉದ್ದೇಶ.

ಈ ಕೂಟದ ಸಭೆಗಳಿಗೆ ಜಿಲ್ಲೆಯ ಮೂಲೆಮೂಲೆಗಳಿಂದ ಅನುಭವಿ ಕೃಷಿಕರು ಬರುತ್ತಿದ್ದರು. ಗಂಗೊಳ್ಳಿಯಿಂದ ಭಾಸ್ಕರ ಕಾಮತ್, ಉಜಿರೆಯಿಂದ ಆರ್.ಎನ್.ಭಿಡೆ, ಹಳೆಯಂಗಡಿಯಿಂದ ಬೆರ್ನಾರ್ಡ್ ಮಿರಾಂಡ, ಬಂಟ್ವಾಳದಿಂದ ಎಸ್.ಡಿ.ಕೊಂಬ್ರಬೈಲು, ಸುಳ್ಯದಿಂದ ಬಲ್ಯ ಶಿವರಾಮ ಭಟ್ಟರು, ವಿಟ್ಲ ನೂಜಿಯಿಂದ ಜಿ.ಬಿ.ನೂಜಿ, ಪುತ್ತೂರಿನಿಂದ ಮಹೇಶ್ಚಂದ್ರ, ಕಿನ್ಯದ ವಿಠಲ ರಾವ್, ಮಣೇಲಿನ ಡಿ.ಎಸ್.ಮಣೇಲ್, ನೀರುಮಾರ್ಗದ ವೆಂಕಟ್ರಮಣ ಭಟ್, ಕಲ್ಲಡ್ಕದ ಪದ್ಮನಾಭಯ್ಯ, ನಾವೂರಿನ ವೆಂಕಟ್ರಮಣ ಐತಾಳ್, ಕೈಕಂಬದ ಹಿಲಾರಿಯನ್, ಮೂಡಬಿದ್ರೆಯ ಡಾ.ಎಲ್.ಸಿ.ಸೋನ್ಸ್, ಮಂಗಳೂರಿನ ಪಂಚಮಾಲ್ ಅಚ್ಯುತ ಪ್ರಭು … ಇನ್ನೂ ಅನೇಕರಿದ್ದು ಸುಮಾರು ನಲವತ್ತು ಮಂದಿ ಸದಸ್ಯರಿದ್ದರು. ಕೂಟದ ಚಟುವಟಿಕೆಯನ್ನು ನೋಡಿದ ಅನೇಕ ಕೃಷಿಕರು ಸದಸ್ಯರಾಗಲು ಸಿದ್ಧರಾಗಿದ್ದರು. ಇನ್ನೂ ಹೆಚ್ಚು ಜನ ಸೇರಿದರೆ ಜಾತ್ರೆಯಂತೆ ಆದೀತು, ಇಷ್ಟು ಸಾಕು ಎಂದು ಡಾ.ಸೋನ್ಸರು ಸೂಚಿಸಿದರು. ಅನಂತರ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಿಲ್ಲ. ಆದರ ಕೆಲವು ಸಭೆಗಳಲ್ಲಿ ಮಿಜಾರು ಆನಂದ ಆಳ್ವ, ಜೀವಂಧರ ಕುಮಾರ್, ಜಿ.ಎಸ್.ಆಚಾರ್, ಮತ್ತು ಪೆರಾಜೆ ಶ್ರೀನಿವಾಸ ರಾವ್ ಪಾಲ್ಗೊಳ್ಳುತಿದ್ದರು. ನಮ್ಮ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಗ್ರಾಮಸೇವಕರಲ್ಲಿ ಅಡೂರು ತಿಮ್ಮಪ್ಪಯ್ಯ, ಕಮಲಾಕ್ಷ ಇವರು ಪ್ರಮುಖರು. ಬಂಟ್ವಾಳ ನಾರಾಯಣ ನಾಯಕರು ನಮಗೆ ಸಭೆ ಜರುಗಿಸಲು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನ ಅತಿಥಿ ಗೃಹದ ವರಾಂಡದಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಮಂಗಳೂರಿನ ಮೋತಿಮಹಲ್‌ನಲ್ಲಿ ಕೂಟದ ಆಶ್ರಯದಲ್ಲಿ ಬಹು ದೊಡ್ಡ ಕೃಷಿ ಸೆಮಿನಾರ್ ನಡೆದಿತ್ತು. ಅದರಲ್ಲಿ ಜಿಲ್ಲೆಯ ಸುಮಾರು ಇನ್ನೂರು ಕೃಷಿಕರು ಭಾಗವಹಿಸಿದ್ದರು. ಮೋತಿಮಹಲಿನಲ್ಲಿ ರೈತರ ಸೆಮಿನಾರ್ ಹೇಗಿರುತ್ತದೆ? ಎಂಬ ಕುತೂಹಲದಿಂದಲೇ ಕೆಲವರು ಸೆಮಿನಾರಿಗೆ ಬಂದರೆಂಬುದು ಆಮೇಲೆ ತಿಳಿಯಿತು. ಈ ಸಭೆಯಲ್ಲಿ ಬೆಂಗಳೂರು ಕೃಷಿ ವಿ.ವಿ.ಯಿಂದ ತಜ್ಞರು, ಕಾಸರಗೋಡು ಸಿ.ಪಿ.ಸಿ.ಆರ್.ಐ.ಯ ತಜ್ಞರು ಭಾಗವಹಿಸಿದ್ದರು. ಮಧ್ಯಾಹ್ನದ ಊಟಕ್ಕೆ ಐದು ರೂಪಾಯಿಯ ಕೂಪನ್ ವ್ಯವಸ್ಥೆ ಮಾಡಲಾಗಿತ್ತು. ಸೆಮಿನಾರಿನ ಸಂದರ್ಭದಲ್ಲಿ ನೆಹರೂ ಮೈದಾನಿನಲ್ಲಿ ಹಾಲು ನೀಡುವ ದನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅತ್ಯುತ್ತಮ ದನಕ್ಕೆ ಬಹುಮಾನ ನೀಡಲಾಯಿತು.

ಪುರಭವನದಲ್ಲಿ ನಡೆದ ಸೆಮಿನಾರಿನ ಸಮಾರೋಪ ಸಮಾವೇಶದಲ್ಲಿ ಜಿಲ್ಲಾಧಿಕಾರಿ ಕೆ.ಎನ್. ನಾಗೇಗೌಡರು ಅಧ್ಯಕ್ಷ ಸ್ಥಾನ ವಹಿಸಿದ್ದರು. ಸೀ‌ಐಲ್ಯಾಂಡ್ ಹತ್ತಿ ಬೆಳೆಗಾರರ ಸಂಘದ ಅಧ್ಯಕ್ಷರೂ, ಉತ್ತಮ ಕೃಷಿಕರೂ ಆದ ಶ್ರೀ ಎಕ್ಕಾರ್ ಸುಬ್ಬಯ್ಯ ಹೆಗ್ಡೆ ಇವರಿಗೆ ಅತ್ಯುತ್ತಮ ಕೃಷಿಕರೆಂದು ಚಿನ್ನದ ಪದಕ ನೀಡಿ ಪ್ರಶಸ್ತಿ ಕೊಡಲಾಯಿತು. ಈ ಸಮಾವೇಶದಲ್ಲಿ ಬಹಳ ಉಪಯುಕ್ತ ಚರ್ಚೆ ನಡೆದಿತ್ತು. ಅದರಲ್ಲಿ ಕೃಷಿ ಅನುಭವ ಕೂಟದ ಸದಸ್ಯರು ಹಾಗೂ ಜಿಲ್ಲೆಯ ಅನೇಕ ರೈತರು ಭಾಗವಹಿಸಿದ್ದರು.

ನಮ್ಮ ಕೂಟದ ಮಾಸಿಕ ಸಭೆಯಲ್ಲಿ ಚರ್ಚಿತವಾದ ಕೆಲವು ವಿಚಾರಗಳು

· ಭತ್ತದ ಹೊಸ ತಳಿಗಳು

· ಕರಾವಳಿ ಕೃಷಿಯಲ್ಲಿ ಬಳಸಬಹುದಾದ ಪೀಡೆನಾಶಕಗಳು

· ಭತ್ತದ ಬೆಳೆಯ ಹಿಟ್ಟು ತಿಗಣೆಯ ಹತೋಟಿ

· ಕೃಷಿಕರ ಹೊಲಗಳಲ್ಲಿ ಬೆಳೆಸಬಹುದಾದ ವೃಕ್ಷಗಳು

· ತೆಂಗಿನ ಮರ ಹತ್ತುವ ಉಪಕರಣದ ಪ್ರದರ್ಶನ

· ತೆಂಗಿನ ಕಪ್ಪು ತಲೆ ಕಂಬಳಿ ಹುಳದ ಹತೋಟಿ

· ಐ‌ಆರ್-8 ಮತ್ತು ಅನ್ನಪೂರ್ಣ ಭತ್ತದ ಕೃಷಿ

· ಕೊಯಂಬತ್ತೂರಿನ ಕೃಷಿ ವಿ.ವಿ.ಯ ಕುಚ್ಚಲಕ್ಕಿಗಾಗಿ ಭತ್ತ ಬೇಯಿಸುವ ಡ್ರಂ ಪ್ರದರ್ಶನ

· ತೋಟದ ಕಳೆಗಳ ರಾಸಾಯನಿಕ ಹತೋಟಿ

· ರಾಸಾಯನಿಕ ಗೊಬ್ಬರಗಳ ಮತ್ತು ಕೀಟನಾಶಕಗಳ ಬಗ್ಗೆ ಚರ್ಚೆ.

ನಮ್ಮ ಕೂಟ ಐ.ಆರ್.8 ಭತ್ತದ ತಳಿ ಬಿಡುಗಡೆಯಾದ ಸಂದರ್ಭದಲ್ಲಿ ಅದರ ಕೃಷಿ ಬಗ್ಗೆ ಒಂದು ಸೆಮಿನಾರ್ ಜರುಗಿಸಿತ್ತು. ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದ ಶ್ರೀ ರಾಜಾರಾಂ ಮಲ್ಯರ ಅಧ್ಯಕ್ಷತೆ. ಅಲ್ಲಿ ಅನುಭವಿ ರೈತರ ಮತ್ತು ಕೃಷಿ ಅಧಿಕಾರಿಗಳ ಸಂವಾದ. ಸುಮಾರು ನೂರು ಜನರು ಭಾಗವಹಿಸಿದ್ದರು.

ಭತ್ತದ ಹಿಟ್ಟು ತಿಗಣೆಯ ಬಗ್ಗೆ ನಮ್ಮ ಕೂಗನ್ನು ವಿಧಾನಸೌಧದಲ್ಲಿ ಪ್ರತಿಧ್ವನಿಸುವ ಹಾಗೆ ಮಾಡಿ ಸರಕಾರವು ಕಾರ್ಯವೆಸಗುವಂತೆ ಮಾಡಿದ್ದು ಕೃಷಿ ಅನುಭವ ಕೂಟದ ಒಂದು ಸಾಹಸ.

ತೆಂಗಿನ ಬೆಳೆಗೆ ಹಾನಿ ಮಾಡುತ್ತಿದ್ದ ಕಪ್ಪು ತಲೆ ಕಂಬಳಿ ಹುಳದ ಹತೋಟಿ ಬಗ್ಗೆ ನಮ್ಮ ಕೂಟ ಒಂದು ಸಭೆ ಏರ್ಪಡಿಸಿತು. ಸಿ.ಪಿ.ಸಿ.ಆರ್.ಐ. ತಜ್ಞ ಎಂ.ಕೆ.ಮುಳಿಯಾರರು ‘ಜೈವಿಕ ನಿಯಂತ್ರಣವೇ ಅತ್ಯುತ್ತಮ ವಿಧಾನ’ ಎಂದು ಅಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. ಈ ಹಿನ್ನೆಲೆಯಲ್ಲಿ ತೆಂಗಿನ ಮರಗಳ ಕಾಂಡಕ್ಕೆ ಮೋನೊಕ್ರೊಟೋಫಾಸ್ ಇಂಜೆಕ್ಷನ್ ಕೊಡಬೇಕೆಂಬ ತೋಟಗಾರಿಕೆ ಇಲಾಖೆಯ ಶಿಫಾರಸನ್ನು ಕೆಲವು ಕೃಷಿಕರು ಪ್ರಶ್ನಿಸಿದರು. ಮಾಧ್ಯಮಗಳಲ್ಲಿ ವರದಿಗಳು, ಬರಹಗಳು ಪ್ರಕಟವಾದುವು. ಪ್ರಬಲ ಜನಾಭಿಪ್ರಾಯ ರೂಪಣೆಯಾಯಿತು. ಇದರ ಪರಿಣಾಮವಾಗಿ ಸರಕಾರವು ಮಂಗಳೂರಿನಲ್ಲಿ ಜಿಲ್ಲಾ ತೋಟಗಾರಿಕಾ ಅಧಿಕಾರಿಗಳು, ವಿ.ವಿ.ಯ ಕೃಷಿ ತಜ್ಞರು ಮತ್ತು ಕಾಸರಗೋಡಿನ ಕೃಷಿ ತಜ್ಞರ ಸಭೆಯನ್ನು ಕರೆದು ಚರ್ಚೆ ಏರ್ಪಡಿಸಿತ್ತು. ಅಲ್ಲಿ ಸಿ.ಪಿ.ಸಿ.ಆರ್.ಐ. ತಜ್ಞರು ಸೂಚಿಸಿದ ಪರೋಪಜೀವಿ ಕೀಟಗಳನ್ನು ಬೆಳೆಸಿ ಅವನ್ನು ತೆ೦ಗಿನತೋಟಗಳಲ್ಲಿ ಬಿಡುಗಡೆ ಮಾಡಿ ಕಪ್ಪು ತಲೆ ಕಂಬಳಿಹುಳ ನಿಯಂತ್ರಿಸಬಹುದೆಂಬ ತೀರ್ಮಾನಕ್ಕೆ ಬರಲಾಯಿತು. ಇದರ ಫಲವಾಗಿ ಸರಕಾರ ಹಾಗೂ ತೋಟಗಾರಿಕಾ ಇಲಾಖೆ ತನ್ನ ಶಿಫಾರಸನ್ನು ಹಿಂತೆಗೆದದ್ದು ನಮ್ಮ ಕೂಟದ ಅತಿ ದೊಡ್ಡ ಸಾಧನೆ.

ಪ್ರಾರಂಭದಲ್ಲಿ ನಾನು ಮತ್ತು ನನ್ನ ನಂತರ ಅಡ್ಡೂರು ಕೃಷ್ಣ ರಾವ್ (ಕೃಷಿ ಪದವೀಧರನಾದ ಬಳಿಕ) ಕೃಷಿ ಅನುಭವ ಕೂಟದ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆವು. ಕೃಷ್ಣ ರಾವ್ ಚೆನ್ನಾಗಿ ಕೆಲಸ ಮಾಡಿದರೂ ಅವನಿಗೆ ಕಾಪುವಿಗೆ ವರ್ಗವಾದ ನಂತರ ಕೃಷಿ ಅನುಭವ ಕೂಟದ ಕೆಲಸ ಸ್ಥಗಿತವಾಗಿತ್ತು. ನಾವು ಪುನ: ಹೇಗೆ ಸಂಘಟಿಸುವುದು ಎಂದು ಯೋಚಿಸುವಾಗಲೇ ಪುತ್ತೂರಿನಲ್ಲಿ ‘ಅಡಿಕೆ ಪತ್ರಿಕೆ’ ಹುಟ್ಟಿಕೊ೦ಡು ಅಮೋಘವಾದ ಸೇವೆ ಮಾಡಲಾರಂಭಿಸಿತು. ಹಾಗಾಗಿ ನಮ್ಮ ಕೃಷಿ ಅನುಭವ ಕೂಟವನ್ನು ಪುನರುಜ್ಜೀವನಗೊಳಿಸಲಿಲ್ಲ. ಅನ೦ತರದ ಅವಧಿಯಲ್ಲಿ ಕೃಷಿ ಅನುಭವ ಕೂಟದ ಮಾಹಿತಿ ಕೇಂದ್ರವು ಆಗಾಗ ಪತ್ರಿಕೆಗೆ ಹೇಳಿಕೆ ನೀಡುತ್ತಿತ್ತು. ಮಾಹಿತಿ ಕೇಂದ್ರದ ಕೆಲಸಗಳನ್ನು ನನ್ನ ಕ್ಷೇತ್ರದಿಂದಲೂ, ಇ. ವಿಠಲ ರಾಯರ ಕ್ಷೇತ್ರದಿಂದಲೂ ಮುಂದುವರಿಸಿದೆವು. ಮಾಹಿತಿ ಕೇಂದ್ರದಿಂದ ‘ಮಾಹಿತಿ ಪತ್ರ’ ದ ಹಲವು ಸಂಚಿಕೆಗಳನ್ನು ಪ್ರಕಟಿಸಿದೆವು.

ನಮ್ಮ ಕೃಷಿ ಅನುಭವ ಕೂಟದ ಚಟುವಟಿಕೆಗಳ ಬಗ್ಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಓ.)ಗೆ ನಾನು ಬರೆದ ಪತ್ರವೊಂದು ಅವರ ನಿಯತಕಾಲಿಕ CERESನಲ್ಲಿ ಜುಲೈ - ಆಗಸ್ಟ್ 1991 ಸಂಚಿಕೆಯಲ್ಲಿ (ಸಂಪುಟ 23 ಸಂಚಿಕೆ 4) ಪ್ರಕಟವಾಯಿತು. ಅದರ ಸಂಪಾದಕರು ನಮ್ಮ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಕೂಟದಲ್ಲಿ ಪ್ರಾರಂಭದಿಂದಲೂ ಕೊಂಬ್ರಬೈಲು ಸುಬ್ಬರಾವ್, ಇ. ವಿಠಲ ರಾವ್ ಮತ್ತು ಎ. ತಿಮ್ಮಪ್ಪಯ್ಯ ಮುಖ್ಯ ಪ್ರೇರಕ ಶಕ್ತಿಯಾಗಿದ್ದರು. ಮಾಸಿಕ ಸಭೆಗಳು ಕ್ರಮವಾಗಿ ಜರಗುತ್ತಿದ್ದವು. ಪಂಚಮಾಲ್ ಅಚ್ಯುತ ಪ್ರಭುಗಳು ಕೂಟವನ್ನು ಸೇರಿದ ನಂತರ ಸೆಮಿನಾರ್ ಮುಂತಾದುವುಗಳು ಏರ್ಪಟ್ಟವು.

ದೆಹಲಿಯಲ್ಲಿ ಜರಗಿದ ಜಾಗತಿಕ ಕೃಷಿ ಮೇಳದ ಸಂದರ್ಭದಲ್ಲಿ ನಾವು ಈ ಕೂಟವನ್ನು ಹುಟ್ಟು ಹಾಕುವ ಯೋಚನೆ ಮಾಡಿದ್ದೆವು. ನಮ್ಮ ಜಿಲ್ಲೆಯಿಂದಲೇ 96 ಕೃಷಿಕರು ಅದಕ್ಕಾಗಿ ರೈಲಿಯಲ್ಲಿ ಪ್ರವಾಸ ಕೈಕೊಂಡಾಗ ನಾನು ಮತ್ತು ವಿಠಲ ರಾಯರು ಭೋಪಾಲದಲ್ಲಿ ರೈಲ್ವೇ ಪ್ಲಾಟ್‌ಫಾರ್ಮನಲ್ಲಿ ಈ ಬಗ್ಗೆ ಚರ್ಚಿಸಲು ಸಭೆ ಸೇರಬೇಕೆಂದು ಸಹ ಪ್ರಯಾಣಿಕರನ್ನು ಕೇಳಿಕೊಂಡೆವು. ಆದರೆ ಅಲ್ಲಿ ರೈಲು ನಿಂತಾಗ ಎಲ್ಲರೂ ಭೋಪಾಲ ನಗರ ನೋಡಲು ಹೋದರು. ಕೊನೆಗೆ ನಾವಿಬ್ಬರೇ ಪ್ಲಾಟ್ ಫಾರಂನಲ್ಲಿ ಕಾದು ಕುಳಿತೆವು!

ಕೃಷಿಕರ ಇಂತಹ ಸಂಘಟನೆಯ ಅಗತ್ಯ ಇಂದು ಹಿಂದಿಗಿಂತ ಹೆಚ್ಚಾಗಿದೆ. ಕೀಟನಾಶಕಗಳಿಂದ ಆಗುವ ಪ್ರಯೋಜನ(?)ದೊಂದಿಗೆ ಆಗಿರುವ ಹಾಗೂ ಆಗಲಿರುವ ಹಾನಿಯ ಬಗ್ಗೆ ಯೋಚಿಸಬೇಕಾಗಿದೆ. ಸಾವಯವ ಕೃಷಿ ಬಗ್ಗೆ ಅನುಭವದ ವಿನಿಮಯ ಆಗಬೇಕಾಗಿದೆ. ಅದರಿಂದ ಭವಿಷ್ಯದಲ್ಲಿ ದೇಶದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವೇ ಎ೦ದು ಯೋಚಿಸಬೇಕಾಗಿದೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿತ ಮತ್ತು ಬೆಳೆ ಬೆಳೆಸುವ ವೆಚ್ಚದ ಹೆಚ್ಚಳ – ಇವುಗಳಿಂದ ರೈತನು ತತ್ತರಿಸುತ್ತಿರುವಾಗ ಮುಂದೇನು ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಹಲವು ಬೆಳೆಗಳನ್ನು ಕಾಡುತ್ತಿರುವ ರೋಗ ಮತ್ತು ಕೀಟಗಳನ್ನು ನಿಯಂತ್ರಿಸುವ ದಾರಿ ಯಾವುದೆಂದು ಯೋಚಿಸಬೇಕಾಗಿದೆ. ಅಡಿಕೆ ಪತ್ರಿಕೆಯಂತಹ ಪತ್ರಿಕೆಗಳು ಮತ್ತು ದಿನಪತ್ರಿಕೆಗಳಲ್ಲಿ ಕೃಷಿ ಬಗ್ಗೆ ಬಹಳಷ್ಟು ಲೇಖನಗಳು ಪ್ರಕಟವಾಗುತ್ತಿವೆ. ಆದರೆ ಕೃಷಿ ಮತ್ತು ಗ್ರಾಮೀಣ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲು ಕೃಷಿ ಅನುಭವ ಕೂಟದಂತಹ ಸಂಘಟನೆ ಅತೀ ಅವಶ್ಯ. ಅನುಭವಿ ಕೃಷಿಕರು ಮತ್ತು ಯುವ ಕೃಷಿಕರೊಳಗೆ ವಿಚಾರ ವಿನಿಮಯಕ್ಕೆ ವೇದಿಕೆಯಾಗಬಲ್ಲ ಇಂತಹ ಸಂಘಟನೆ ಪುನ: ನೆಲೆಗೊಳ್ಳಲೆಂದು ಹಾರೈಸುವೆ.

ಫೋಟೋ: ಕೃಷಿ ಅನುಭವ ಕೂಟ (Farm Experience Club) ಲಾಂಛನ

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ