ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿಕರೊಳಗೆ ಸಂಪರ್ಕ ಸಂವಹನ ಅನಿವಾರ್ಯ. ಈ ಅನಿವಾರ್ಯತೆಯಿಂದಲೇ ಹಲವಾರು ಕೃಷಿಕರ ಸಂಘಟನೆಗಳು ರೂಪುಗೊಂಡು ಬೆಳೆಯುತ್ತಿವೆ. ಈ ಸಂಘಟನೆಗಳು ತಂತಮ್ಮ ಉದ್ದೇಶ ಸಾಧನೆಗಾಗಿ ಸದಸ್ಯರೊಳಗೆ ಸಂಪರ್ಕ ಸಾಧಿಸಲೇ ಬೇಕು. ಇದಕ್ಕಾಗಿ, ನಿರ್ದಿಷ್ಟ ಅವಧಿಗೊಮ್ಮೆ ಸಭೆ ನಡೆಸಬಹುದಾದರೂ ಇದು ವೆಚ್ಚ ಹಾಗೂ ಸಮಯ ಕಬಳಿಸುವ ಸಂಪರ್ಕ ವಿಧಾನ. ಅದಲ್ಲದೆ, ಸಭೆಗಳಲ್ಲಿ ನಡೆಸಿದ ವಿಚಾರ ವಿನಿಮಯ, ಕೈಗೊಂಡ ನಿರ್ಣಯಗಳು ಕ್ರಮೇಣ ಮರೆತು ಹೋಗುವುದೇ ಜಾಸ್ತಿ.

ಈ ನಿಟ್ಟಿನಲ್ಲಿ, ವಾರ್ತಾಪತ್ರ ಪ್ರಕಟಣೆ ಪರಿಣಾಮಕಾರಿ ಸಂಪರ್ಕವಿಧಾನ. ವಾರ್ತಾಪತ್ರವನ್ನು ಸಭೆಗಳ ಬದಲಾಗಿ ಅಥವಾ ಜೊತೆಯಾಗಿ ಸಂಪರ್ಕ ಸಂವಹನಕ್ಕೆ ಬಳಸಬಹುದು. ವಾರ್ತಾಪತ್ರದ ಪ್ರಕಟಣೆಯಲ್ಲಿ ರಚನೆ, ಪ್ರತಿ ತೆಗೆಯುವುದು, ರವಾನೆ ಎಂಬ ಮೂರು ಹಂತಗಳನ್ನು ಗುರುತಿಸಬಹುದು. ಮಂಗಳೂರಿನ ಕೃಷಿ ಅನುಭವ ಕೂಟವು, ವಾರ್ತಾಪತ್ರದ ರಚನೆ ಮತ್ತು ಪ್ರತಿ ತೆಗೆಯುವ ಹಂತದಲ್ಲಿ ವಿನೂತನ ವಿಧಾನವೊಂದನ್ನು ಯಶಸ್ವಿಯಾಗಿ ಉಪಯೋಗಿಸಿದೆ. ಪ್ರತಿ ತೆಗೆಯಲು ಆಧುನಿಕ ತಂತ್ರಜ್ಞಾನ ಜೆರಾಕ್ಸ್ ಬಳಕೆಯೇ ಈ ಯಶಸ್ಸಿನ ಗುಟ್ಟು.

ರಚನೆ: ಆಯಾ ಸಂಘಟನೆಗಳಿಗೆ ಉಪಯುಕ್ತವಾದ ಮುಖ್ಯವಾದ ವಿಷಯಗಳನ್ನು ವಿವಿಧ ಮೂಲಗಳಿಂದ ಸದಸ್ಯರೆಲ್ಲರೂ ಸಂಗ್ರಹಿಸಬಹುದು. ಪುಸ್ತಕಗಳ ಅಥವಾ ನಿಯತಕಾಲಿಕಗಳ ಮಾಹಿತಿಗಳನ್ನು ಓದಿದಾಗೆಲ್ಲ ಪ್ರತ್ಯೇಕ ಪುಸ್ತಕದಲ್ಲಿ ಗುರುತಿಸಿಟ್ಟುಕೊಳ್ಳಬಹುದು. ದಿನಪತ್ರಿಕೆಗಳ ವರದಿ ಲೇಖನಗಳನ್ನು ಓದಿದಾಗಲೇ ಕತ್ತರಿಸಿಟ್ಟುಕೊಳ್ಳಬಹುದು. ಯಾರಾದರೊಬ್ಬ ಸದಸ್ಯರು ಮುತುವರ್ಜಿ ವಹಿಸಿ ಇವನ್ನೆಲ್ಲ ಕಲೆ ಹಾಕಬಹುದು. ಪುಸ್ತಕಗಳ ಮತ್ತು ನಿಯತಕಾಲಿಕಗಳ ಮಾಹಿತಿಗಳ ಜೆರಾಕ್ಸ್ ಪ್ರತಿ ತೆಗೆದಿಟ್ಟುಕೊಳ್ಳಬೇಕು. ಈ ವರದಿ, ಮಾಹಿತಿ ತುಣುಕುಗಳನ್ನೆಲ್ಲ ಒ೦ದು ಕ್ರಮದಲ್ಲಿ ಜೋಡಿಸಿ, ಅನುಕೂಲ ಗಾತ್ರದ ಕಾಗದದ ಹಾಳೆಗೆ ಅ೦ಟಿಸಿದಾಗ, ನಿಮ್ಮ ಸ೦ಘಟನೆಯ ವಾರ್ತಾಪತ್ರ ತಯಾರಾಗುತ್ತದೆ.

ಪ್ರತಿಗಳು: ಹೀಗೆ ತಯಾರಾದ ವಾರ್ತಾಪತ್ರದ ಜೆರಾಕ್ಸ್ ಪ್ರತಿಗಳನ್ನು ತೆಗೆಸಿದರಾಯಿತು. ಕೃಷಿ ಅನುಭವ ಕೂಟವು ದೊಡ್ಡ ಕ್ಯಾಲೆಂಡರ್‌ನ ಅಳತೆಯ ಒಂದೇ ಕಾಗದದ ಹಾಳೆಯಲ್ಲಿ (2 ಪುಟಗಳು) ವಾರ್ತಾಪತ್ರ ಪ್ರಕಟಿಸುತ್ತಿದೆ.

ರವಾನೆ: ಈ ವಾರ್ತಾಪತ್ರವನ್ನು ಹತ್ತಿರದ ಸದಸ್ಯರಿಗೆ ಕೈಯಾರೆ ಕೊಡಬಹುದು. ದೂರದ ಸದಸ್ಯರಿಗೆ ತೆರೆದ ಅಂಚೆಯಲ್ಲಿ ಕಳಿಸಬಹುದು. ಅಂಚೆ ರವಾನೆ ವೆಚ್ಚದಲ್ಲಿ ಉಳಿತಾಯ ಮಾಡಲು ಎರಡೆರಡು ಸಂಚಿಕೆಗಳನ್ನು ಒಟ್ಟಾಗಿ ರವಾನಿಸಬಹುದು.

ಖರ್ಚು: ದೊಡ್ಡ ಕ್ಯಾಲೆ೦ಡರ್ ಅಳತೆಯ ಒಂದು ಹಾಳೆಯಲ್ಲಿ (2 ಪುಟಗಳು) ಜೆರಾಕ್ಸ್ ತೆಗೆಸಲು ಈಗಿನ ಖರ್ಚು ರೂ. 2.50-3.00. ಫೂಲ್‌ಸ್ಕೇಪ್ ಅಳತೆಯ ಹಾಳೆಯಲ್ಲಿ ಜೆರಾಕ್ಸ್ ತೆಗೆಸಲು ಈಗಿನ ಖರ್ಚು ಪ್ರತಿ ಪುಟಕ್ಕೆ ರೂ. 0.30-0.60. ವರುಷಕ್ಕೆ ಒಂದೇ ಹಾಳೆಯ ನಾಲ್ಕು ಸಂಚಿಕೆಗಳನ್ನು ರೂ.20 ಕ್ಕೆ ಒದಗಿಸಲು ಸಾಧ್ಯ.

ಅನುಕೂಲತೆಗಳು:

(1) ಅಗತ್ಯವಿರುವಷ್ಟೇ ಪ್ರತಿಗಳನ್ನು ತೆಗೆಸಲು ಸಾಧ್ಯ. ಖರ್ಚಿನಲ್ಲಿ ಏರುಪೇರಾಗದು.

(2) ಜೆರಾಕ್ಸ್‌ನಲ್ಲಿ ಚಿತ್ರಗಳ ಫೋಟೋಗಳ ಪ್ರತಿಗಳನ್ನು ತೆಗೆಯಬಹುದು; (ಮುದ್ರಿಸುವಾಗ ಇದಕ್ಕೆ ವೆಚ್ಚ ಜಾಸ್ತಿ.)

(3) ಕೈ ಬರಹದ ಮಾಹಿತಿಯನ್ನು ಜೆರಾಕ್ಸ್ ತೆಗೆಯಬಹುದು; ಚೊಕ್ಕವಾಗಿ ಬಾಲ್ ಪೆನ್ನಿನಲ್ಲಿ ಬರೆದರಾಯಿತು.

(4) ಒಂದೇ ಸಂಚಿಕೆಯಲ್ಲಿ ಬೇರೆ ಬೇರೆ ಭಾಷೆಗಳ ಮಾಹಿತಿ ಅಳವಡಿಸಬಹುದು.

(5) ಸಂಪಾದಕರ ಕೆಲಸದ ಅಗತ್ಯವೇ ಇಲ್ಲ. ಮಾಹಿತಿಗಳನ್ನು ಇದ್ದದ್ದು ಇದ್ದಂತೆಯೇ ಕಾಗದದ ಹಾಳೆಗೆ ಅಂಟಿಸಬಹುದು ಅಥವಾ ಅನಗತ್ಯ ಪಾರಾ ಸಾಲುಗಳನ್ನು ಕತ್ತರಿಸಿ ತೆಗೆದ ಬಳಿಕ, ಉಳಿದ ಮಾಹಿತಿಯನ್ನು ಹಾಳೆಗೆ ಅಂಟಿಸಿದರಾಯಿತು. ಮಾಹಿತಿ ಮೂಲಗಳನ್ನು ಕೈಯಲ್ಲಿ ಬರೆದು ಸೂಚಿಸಿ, ಖಾಸಗಿ ಪ್ರಸಾರಕ್ಕಾಗಿ ಮಾತ್ರ ಎಂದು ನಮೂದಿಸಿದರೆ, ಕಾಪಿರೈಟ್‌ನ ಸಮಸ್ಯೆ ಎದುರಾಗುವುದಿಲ್ಲ.

(6) ವಾರ್ತಾಪತ್ರವನ್ನು ಒಂದು, ಎರಡು ಅಥವಾ ಮೂರೇ ಹಾಳೆಗಳಿಗೆ ಸೀಮಿತಗೊಳಿಸಿದರೆ, ಪಿನ್ನಿಂಗ್ ಮಾಡುವ ಅಗತ್ಯವಿಲ್ಲ.

(7) ಒಂದು ಸಂಘಟನೆಯ ವಾರ್ತಾಪತ್ರದ ಒಂದೇ ಪ್ರತಿಯನ್ನು ಇನ್ನೊಂದು ಸಂಘಟನೆಗೆ ಕಳಿಸಿಕೊಟ್ಟರೆ ಸಾಕು; ಅವರು ಪುನಃ ಸ್ಥಳೀಯವಾಗಿ ಪ್ರತಿ ತೆಗೆಸಬಹುದು.

(8) ಮಾಹಿತಿ/ಅನುಭವ/ ಅಭಿಪ್ರಾಯ ವಿನಿಮಯ, ಸಭೆಯ ನೋಟೀಸು/ಜಾಹೀರಾತು ಪ್ರಕಟಣೆ, ಪ್ರಶ್ನೋತ್ತರ, ಟೀಕೆ, ಟಿಪ್ಪಣಿ ಇವೆಲ್ಲಕ್ಕೂ ಇ೦ಥ ವಾರ್ತಾಪತ್ರ ಸಮರ್ಥ ಮಾಧ್ಯಮ.

ಈಗ ಸಣ್ಣ ಊರುಗಳಲ್ಲೂ ಜೆರಾಕ್ಸ್ ತಂತ್ರಜ್ಞಾನ ಲಭ್ಯ. ಇದನ್ನು ಸೂಕ್ತವಾಗಿ ಬಳಸಿ, ವಾರ್ತಾಪತ್ರ ಶುರುಮಾಡಿದರೆ ಕೃಷಿಕರ ಸಂಘಟನೆ ಬೆಳೆಯಲು ಅನುಕೂಲ ವಾತಾವರಣ ನಿರ್ಮಾಣವಾಗಬಲ್ಲುದು.

ಟಿಪ್ಪಣಿ: 2026ರ ಕಾಲಘಟ್ಟದಲ್ಲಿ ಕೃಷಿಕರ ನಡುವೆ ಸಂವಹನಕ್ಕಾಗಿ ಕಾನ್-ಫರೆನ್ಸ್ ಫೋನ್ ಕರೆಗಳು, ವಿಡಿಯೋ ಫೋನ್ ಕರೆಗಳು ಮತ್ತು ಇಂಟರ್-ನೆಟ್ ಆಧಾರಿತ ವಾಟ್ಸಾಪ್, ಫೇಸ್-ಬುಕ್ ತಂಡಗಳು ಮತ್ತು ಗೂಗಲ್ -ಮೀಟ್ (ಗೂಗಲ್ ಸಭೆ) ಇತ್ಯಾದಿ ಸೌಲಭ್ಯಗಳು ಲಭ್ಯವಿವೆ. ಇವುಗಳ ಮೂಲಕ ಸಂವಹನ ಸುಲಭ ಮತ್ತು ತತ್-ಕ್ಷಣ ಸಾಧ್ಯ.

ಫೋಟೋ: ಕೃಷಿ ವಾರ್ತಾ ಪತ್ರದ ಮಾಹಿತಿ ಮೂಲ -ಕೆಲವು ನಿಯತಕಾಲಿಕಗಳು

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ