ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು;
ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ;
ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು -
ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ
ನವಕುಟಜ ಕದಂಬಾಮೋದಿನೋ ಗಂಧವಾಹಾಃ |
ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ
ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ ||

-ಹಂಸಾನಂದಿ

 
ಕೊ: ಕಂದಲಿನ್ಯೋ - ಕಂದಲಿ ಎಂಬುದು ಮಳೆಗಾಲದಲ್ಲಿ ಅರಳುವ ಒಂದು ಹೂಜಾತಿ. ನೆಲದ ಮೇಲೆ ಹರಡಿ ಬೆಳೆಯುವ ಈ ಕಾಡು ಹೂಗಳ ಹಲವು ಜಾತಿಗಳು ಇವೆಯೆಂದು ತೋರುತ್ತದೆ.___LINK_OPEN_ href="http://en.wikipedia.org/wiki/Strobilanthes_wallichii"___ಅದರಲ್ಲಿ ಒಂದು ಜಾತಿ ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುತ್ತದಂತೆ! ಆದರೆ ಈ ಪದ್ಯದಲ್ಲಿ ಪ್ರತಿವರ್ಷ ಹೂವರಳುವ, ನೆಲವನ್ನೆಲ್ಲ ಹೂ ಹಾಸಿಗೆಯಂತಾಗಿಸುವ ಬೇರೆ ಹೂಗಳ ಬಗ್ಗೆ ಹೇಳಿದ್ದಾನೆಂದು ನನ್ನೆಣಿಕೆ. ಅದಕ್ಕಾಗಿ, ಕಂದಲಿ ಹೂಗಳ ಬದಲು, ಹೆಸರಿಸದೇ "ಹೂಗಳ ಹಾಸು" ಎಂದು ಹೇಳಿದ್ದೇನೆ.
 

ಕೊ.ಕೊ: ಕದಂಬ = ಕರ್ನಾಟಕದ ಮೊದಲ ಅರಸುಮನೆತನವಾದ ಕದಂಬರಿಗೆ ಆ ಹೆಸರು ಬರಲು ಕಾರಣವಾದ ಮರ ಇದೇ. ಹೆಚ್ಚಿನ ವಿವರಕ್ಕೆ, ವಿಕಿಪೀಡಿಯಾದಲ್ಲಿರುವ ___LINK_OPEN_ href="http://en.wikipedia.org/wiki/Neolamarckia_cadamba"___ಈ ಬರಹವನ್ನುನೋಡಿ. ಜೊತೆಗೆ, ಕುಟಜ ಎನ್ನುವುದು ಮಲ್ಲಿಗೆಯ ಹೋಲುವ, ಕಂಪಾದ ಹೂವುಗಳನ್ನು ಬಿಡುವ ಒಂದು ಗುಂಪಿನ ಗಿಡಗಳು. ಇವುಗಳಲ್ಲಿ ಎರಡರ ಚಿತ್ರವನ್ನು ಇಲ್ಲಿ , ಮತ್ತೆ ಇಲ್ಲಿ ನೋಡಬಹುದು.