ಮಗುವೆಂದು ತಿಳಿಯುತ್ತ

ಮುತ್ತಿಟ್ಟ ಗೋಪಿಯರ

ತುಟಿಕಂಪ  ಸವಿಯುವನು ಈತ!

 

ಮಗುವೆಂದು ಅಪ್ಪಿದರೆ

ಬರಸೆಳೆದು ಕುತ್ತಿಗೆಯ

ಬಣ್ಣ ಕೆಂಪೇರಿಸಿದ ಈತ!

 

ಮಗುವೆಂದು  ಮುದ್ದಿನಲಿ

ತೊಡೆಮೇಲೆ ಏರಿಸಲು

ಮುಟ್ಟುತಲೆ ನಾಚಿಸುವ ಈತ!

 

ಕೇಡಿಗನು ಈ ಮಗುವೆ

ಕಳುಹಿಸಲಿ ಬಲುದೂರ

ನಮ್ಮೆಲ್ಲ  ಕೇಡುಗಳ ಈಗ!

 

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-68 ):

 

ಓಷ್ಟಂ ಜಿಘ್ರನ್ ಶಿಶುರಿತಿ ಧಿಯಾ ಚುಂಬಿತೋ ವಲ್ಲವೀಭಿಃ

ಕಂಠಂ ಗೃಹ್ಣನ್ ಅರುಣಿತ ಪದಂ ಗಾಢಮಾಲಿಂಗಿತಾಂಗಃ |

ದೋಷ್ಣಾ ಲಜ್ಜಾಪದಮಭಿಮೃಶನ್  ಅಂಕಮಾರೋಪಿತಾತ್ಮಾ

ಧೂರ್ತಸ್ವಾಮೀ ಹರತು ದುರಿತಂ ದೂರತೋ ಬಾಲಕೃಷ್ಣಃ ||

 

-ಹಂಸಾನಂದಿ

 

ಕೊ: ಹೊಗಳಬೇಕಾದವರನ್ನು ಮೇಲ್ನೋಟಕ್ಕೆ ಬೈಯುತ್ತ ಹೊಗಳುವುದಕ್ಕೆ "ನಿಂದಾ ಸ್ತುತಿ" ಎಂದು ಹೆಸರು. ಇಂತಹದ್ದರಲ್ಲಿ ಹರಿದಾಸರು ಪ್ರವೀಣರು. ಪುರಂದರದಾಸರು, ಕನಕದಾಸರು ಮೊದಲಾದವರು ಹಲವಾರು ದೇವರನಾಮಗಳನ್ನು ನಿಂದಾಸ್ತುತಿಯ ರೂಪದಲ್ಲಿ ರಚಿಸಿರುವುದು ತಿಳಿದಿರುವ ಸಂಗತಿಯೇ.

 

ಕೊ.ಕೊ: ___LINK_OPEN_href="http://haridasa.sampada.net/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/%E0%B2%AE%E0%B3%86%E0%B2%B2%E0%B3%8D%E0%B2%B2-%E0%B2%AE%E0%B3%86%E0%B2%B2%E0%B3%8D%E0%B2%B2%E0%B2%A8%E0%B3%86-%E0%B2%AC%E0%B2%82%E0%B2%A6%E0%B2%A8%E0%B3%86/235" target="_blank"___’ಮೆಲ್ಲ ಮೆಲ್ಲನೆ ಬಂದನೆ’  ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ . ಅದರಲ್ಲಿ ಬರುವ  "ಹಾಲು ಮಾರಲು ಹೋದರೆ ನಿನ್ನಯ ಕಂದ ಶಾಲೆಯ ಸೆಳೆದುಕೊಂಡು ಪೋದನೆ" , "ಶಶಿಮುಖಿಯರನೆಲ್ಲ ಬಸಿರು ಮಾಡಿದನೀತ" ಮೊದಲಾದ ಸಾಲುಗಳಲ್ಲಿ ಕಂಡುಬರುವ ಭಾವವೇ ಈ ಪದ್ಯದಲ್ಲೂ ನನಗೆ ಕಂಡಿದ್ದರಿಂದ ಆ ರಚನೆಯ ಅನುಪಲ್ಲವಿಯ ಸಾಲನ್ನೇ ಇಲ್ಲಿ ತಲೆಬರಹವಾಗಿ ಕೊಟ್ಟಿದ್ದೇನೆ.

 

ಕೊ.ಕೊ.ಕೊ: ಹಿರಿಯ ಮಿತ್ರ ಶ್ರೀ ಕೃಷ್ಣಪ್ರಿಯ ಅವರು ಕೊಟ್ಟ ಕೆಲವು ಸಲಹೆಗಳನ್ನು  ಅಳವಡಿಸಿ ಪಂಚಮಾತ್ರಾಗಣಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದೇನೆ.