ಭಾರತದಲ್ಲಿ ಈಗ ಎಲ್ಲವೂ ಏರುಗತಿಯಲ್ಲಿದೆ
ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿದೆ
ಹಣ್ಣು ತರಕಾರಿ ಬೆಲೆ ಏರುತ್ತಿದೆ
ಏಕೆಂದರೆ ಆಗುತ್ತಿದೆ ಭಾರತ ನಿರ್ಮಾಣ

ಬರ ಬಂದರೆ ಕುಡಿಯಲು ನೀರಿಲ್ಲ
ಎಷ್ಟೋ ಮಕ್ಕಳಿಗೆ ಪೌಷ್ಠಿಕ ಆಹಾರವಿಲ್ಲ
ಎಷ್ಟೋ ಊರುಗಳಲ್ಲಿ ರಸ್ತೆಯೇ ಇಲ್ಲ
ಕೃಷಿ ಮಾಡಿದರೆ ಬೆಲೆಯೂ ಇಲ್ಲ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಜೀವಸತ್ವವಾದ ಹಣ್ಣು , ತರಕಾರಿಗಳು ದುಬಾರಿ
ತಿನ್ನುವ ಅಕ್ಕಿ, ಬೇಳೆಕಾಳುಗಳು ದುಬಾರಿ
ಅಡಿಗೆ ಮಾಡುವ ಅನಿಲ ದುಬಾರಿ
ಮೈ ಮುಚ್ಚುವ ಬಟ್ಟೆಗಳು ದುಬಾರಿ
ತಲೆಕಾಯುವ ಸೂರು ಕಟ್ಟುವುದೂ ದುಬಾರಿ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಬಂಡವಾಳಶಾಹಿಗಳ ಕೈಯಲ್ಲಿ ಮಾರುಕಟ್ಟೆ
ಖಾಲಿಯಾದ ಚಿಲ್ಲರೆ ವ್ಯಾಪರಿಗಳ ಗಂಜಿ ತಟ್ಟೆ
ರೈತರ ಬೆವರಲ್ಲಿಯೇ ಮಧ್ಯವರ್ತಿಗಳ ಪಾಲು
ಗೋದಾಮಿನಲ್ಲಿ ಕೊಳೆಯುವ ಧಾನ್ಯಗಳು
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಎಷ್ಟೋ ಯುವಕರಿಗೆ ಭವಿಷ್ಯದ ಚಿಂತೆಯಿಲ್ಲ
ನಮ್ಮ ಪ್ರತಿಭೆಗಳಿಗೆ ಇಲ್ಲಿ ಬೆಲೆಯೇ ಇಲ್ಲ
ಅಮೇರಿಕದಲ್ಲಿ ಬಿಕರಿಯಾಗುತ್ತಿದೆ ಎಲ್ಲ
ಸರಿಯಾದ ರಾಜಕೀಯ ನಾಯಕತ್ವವಿಲ್ಲ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಒಡೆದು ಆಳುವವನೆ ಇಲ್ಲಿ ಅರಸ
ರಾಜ್ಯಪಾಲರಾದವರ ಪರಸ್ತ್ರೀ ಸರಸ
ಮಂತ್ರಿಗಳಿಗೆ ದಾದಿಯ ಮುತ್ತಿನ ಆರೈಕೆ
ಸದನದಲ್ಲೇ ನೀಲಿ ಚಿತ್ರಗಳ ಕೇಕೆ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಆಕಾಶದಲ್ಲಿ ಬಿತ್ತರಿಸುವ ತರಂಗಗಳಿಗೂ ಲಂಚ
ಕ್ರೀಡಾಕೂಟ ಆಯೋಜನೆಯಲ್ಲಿಯೂ ಲಂಚ
ಸೈನಿಕರ ಫಿರಂಗಿಗೂ ಲಂಚ,ಸೈನಿಕ ವಾಹನಕ್ಕೂ ಲಂಚ
ಭೋಪಾಲ ಜನರ ನರಕಸದೃಶ ಸ್ತಿತಿಗೂ ಲಂಚ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಕಾಮಪೀಪಾಸುಗಳು ಮೆರೆದಾಡಿದರೂ ಮೌನ
ಇಡೀ ದೇಶವೇ ಪ್ರತಿಭಟಿಸಿದರೂ ಮೌನ
ಸೈನಿಕರ ರುಂಡ ಕೊಯ್ದು ಒಯ್ದರೂ ಮೌನ
ಶತ್ರು ಸೈನ್ಯವೇ ಗಡಿ ದಾಟಿಬಂದರೂ ಮೌನ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಮೈ ತುಂಬಾ ಕಲ್ಲಿದ್ದಲ ಮಸಿ ಸುರಿದಿದೆ
ತಲೆಯ ಮೇಲೆ ಹೆಲಿಕಾಪ್ಟರ್ ಹಗರಣ ಕೂತಿದೆ
ಲೆಕ್ಕವಿಲ್ಲದಷ್ಟು ಅಂತರರಾಷ್ಟ್ರೀಯ ಪ್ರವಾಸಗಳು
ಲೆಕ್ಕ ಕೇಳದ ಮತದಾರ ಪ್ರಭುಗಳು
ಆದರೂ ಆಗುತ್ತಿದೆ ಭಾರತ ನಿರ್ಮಾಣ

ನಮ್ಮಯ ದುಡಿಮೆಯ ಫಲ ನಮಗಿಲ್ಲ
ಕಪ್ಪಾಗಿ,ಬೆಚ್ಚಗಿದೆ ಸ್ವಿಸ್ ಬ್ಯಾಂಕಿನಲ್ಲಿ ಎಲ್ಲ
ಜನರ ಹಣ ಮರಳಿ ತರುವ ದಾರಿ ತಿಳಿದಿಲ್ಲ
ತರುವ ಮನಸ್ಸಿನವರು ಯಾರೂ ಇಲ್ಲ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಹಣದ ಮರ ಎಂಬುದು ಇಲ್ಲ,ಮರದಲಿ
ಹಣ ಬಿಡುವುದಿಲ್ಲ ಎನ್ನುವ ಪ್ರಧಾನಿ
ದುಡಿಯುವ ಕೈಗಳಿಗೆ ಸರಿಯಾದ ಕೆಲಸವಿಲ್ಲ
ದುಬಾರಿ ಜೀವನಕ್ಕೆ ಬೇಕಾದಷ್ಟು ಪಗಾರವಿಲ್ಲ
ಆದರೂ ಆಗುತ್ತಿದೆ ಭಾರತ ನಿರ್ಮಾಣ

ನಲವತ್ತು ರೂಪಾಯಿಗೆ ಜೀವನ
ನಡೆಸಬಹುದೆನ್ನುವ ಯೋಜನಾ ಆಯೋಗದವರು
ತಮ್ಮ ತಮ್ಮ ಪ್ರವಾಸಗಳಿಗೆ ಮಾತ್ರ
ಲಕ್ಷ ಲಕ್ಷದ ವಾಹನಗಳನ್ನೇ ಉಪಯೋಗಿಸುವರು
ಆದರೂ ಆಗುತ್ತಿದೆ ಭಾರತ ನಿರ್ಮಾಣ

ಹೋದರೆ ಹೋಗಲಿ ನಮ್ಮ ಹಣವೇ ಎನ್ನುವರೇ
ಸರಿಯಾಗಿ ಕೇಳಿ ಇದು ನಿಮ್ಮ ಹಣವೇ,
ನೇರವಾಗಿ ಅಲ್ಲದಿದ್ದರೂ ಪರೋಕ್ಷ ಕಟ್ಟಿದ ತೆರಿಗೆ ಹಣವೇ
ಬರೀ ನೋಟು ಮುದ್ರಿಸುವುದರಿಂದ
ದೇಶ ನಡೆಯಬಹುದಾಗಿದ್ದರೆ ಎಲ್ಲ ದೇಶಗಳೂ
ಇಂದು ಶ್ರೀಮಂತ ದೇಶಗಳಾಗುತ್ತಿದ್ದವು
ಈಗಲೇ ನಾವುಗಳು ಎಚ್ಚೆತ್ತರೆ ನಿರ್ಮಾಣ ಇಲ್ಲದಿದ್ದರೆ ನಿರ್ವಾಣ