ನಾವು ಪ್ರಶ್ನೆಗೊಂದು ಉತ್ತರವನ್ನ ಹುಡುಕ್ತಾ ಇರ್ತೇವೆ. ನಮ್ಮ ಮನಸ್ಸಿನೊಳಗೆ ಮೂಡಿದ ಪ್ರಶ್ನೆಗೆ ಉತ್ತರ ಸಿಗಲೇಬೇಕು ಆದರೆ ನಾವು ಹುಡುಕುವ ವಿಧಾನ ಏನು ಅನ್ನೋದರ ಮೇಲೆ ಉತ್ತರ ನಮ್ಮನ್ನ ಅರಸಿ ಬರುತ್ತದೆ. ಯಾವ ಪ್ರಶ್ನೆಗೆ ಉತ್ತರ ಯಾರ ಬಳಿ ಇರುತ್ತದೆ ಅನ್ನುವುದು ತುಂಬಾ ಮುಖ್ಯ. ಪ್ರಶ್ನೆಯೇ ಅರ್ಥವಾಗದವನ ಬಳಿ ನಾವು ಉತ್ತರವನ್ನು ಹುಡುಕಿಕೊಂಡು ಹೋದರೆ ಆತನಿಂದ ಏನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ. ನಮಗೆ ಗೊತ್ತಿರಬೇಕು ಪ್ರಶ್ನೆಯನ್ನ ಯಾವ ವ್ಯಕ್ತಿಯ ಮುಂದೆ ಇಟ್ಟರೆ ಉತ್ತರ ಸಿಗುತ್ತದೆ ಅಂತ. ಇಲ್ಲವಾದರೆ ಬರಿಯ ಹುಡುಕಾಟ ಅಷ್ಟೇ ಸಮಯ ವ್ಯರ್ಥ ಯೋಚನೆಗಳು ವ್ಯರ್ಥ. ಪ್ರಶ್ನೆಗೆ ಉತ್ತರವನ್ನು ಹುಡುಕುವ ಮೊದಲು ಉತ್ತರ ನೀಡುವವರನ್ನು ಹುಡುಕಿದರೆ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಎಲ್ಲರಿಗೂ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸುವ ಸಾಮರ್ಥ್ಯವಿರುವುದಿಲ್ಲ. ಒಂದೊಂದು ಪ್ರಶ್ನೆಗೂ ಒಬ್ಬೊಬ್ಬರನ್ನ ಸಂಪರ್ಕಿಸಬೇಕಾದ ಅನಿವಾರ್ಯತೆಯೂ ಇದೆ. ನಮಗೆ ಬೇಕಾದ ಉತ್ತರ ಮಾತ್ರ, ಹಾಗಾಗಿ ಹುಡುಕುವುದು ನಮ್ಮ ಅನಿವಾರ್ಯ ಕೆಲಸ. ನಾನಿವತ್ತು ನನಗೆ ಅಗತ್ಯವಾದ ವ್ಯಕ್ತಿ ಒಬ್ಬರ ಸಂಪರ್ಕವನ್ನು ಸಾಧಿಸುವುದಕ್ಕೆ ಹಲವರ ಬಳಿ ಪ್ರಯತ್ನಿಸಿದೆ. ಅಚಾನಕ್ಕಾಗಿ ಎದುರು ಸಿಕ್ಕ ಒಬ್ಬ ವ್ಯಕ್ತಿಯಲ್ಲಿ ಮಾತನಾಡಿಸುವಾಗ ಆತ ಅವರಿಗೆ ಆತ್ಮೀಯ ಅಂತ ತಿಳಿದು ಬಂತು. ನಾನು ಹಿಂದೆ ಪಟ್ಟ ಎಲ್ಲಾ ಶ್ರಮದ ಬದಲು ಇವರ ಜೊತೆಗೆ ಮಾತನಾಡಿದರು ಸಾಕು, ಆ ವ್ಯಕ್ತಿಯ ಜೊತೆಗೆ ಮಾತನಾಡಿ ನನ್ನ ಕೆಲಸವೂ ಮುಗಿದು ಹೋಗುತ್ತಿತ್ತು. ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ಉತ್ತರ ನೀಡುವವರನ್ನು ಹುಡುಕುವುದು ಮುಖ್ಯ ಅಂತ ನನಗನ್ನಿಸ್ತು. ನಿಮಗೆ...?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ