ನಮಗೆ ನಾವು ನಾವಾಗಿರುತ್ತೇವೆ, ಆದರೆ ಪ್ರತಿದಿನವೂ ಬೇರೆಯವರ ಬದುಕಿನಲ್ಲಿ, ಅವರ ಆಲೋಚನೆಯಲ್ಲಿ, ಅವರ ಕನಸಿನಲ್ಲಿ, ಅವರ ಮಾತಿನಲ್ಲಿ, ಅವರ ಜಗಳದಲ್ಲಿ ಅವರ ಸಿಟ್ಟು ಪ್ರೀತಿ ದ್ವೇಷ ಅಸೂಯೆ, ಇಲ್ಲಿ ನಾವೇನು ಆಗಿರತೇವೆ ಅನ್ನುವುದೇ ನಮ್ಮನ್ನು ನಿರ್ಧರಿಸಿಬಿಡುತ್ತದೆ. ನಾವು ನಮ್ಮನ್ನ ಸಮಾಜದಲ್ಲಿ ಹೀಗೆ ಅಂತ ಗುರುತಿಸಿಕೊಳ್ಳುತ್ತೇವೆ. ನಾವು ನಮ್ಮನ್ನ ಒಂದಷ್ಟು ಕಡೆ ಬಿಂಬಿಸುವುದಕ್ಕೆ ಪ್ರಯತ್ನ ಪಡುತ್ತೇವೆ. ನಮ್ಮ ಅಂದ ಚಂದದ ಫೋಟೋಗಳನ್ನ ಅಲ್ಲಲ್ಲಿ ಹಾಕಿ ನಮ್ಮ ಸೌಂದರ್ಯವನ್ನ ಜನ ಮೆಚ್ಚಬೇಕು ಅಂತ ಬಯಸುತ್ತೇವೆ, ಆದರೆ ಅದೇ ಸಮಯದಲ್ಲಿ ನಮ್ಮನ್ನ ನೋಡಿದವರು ಕೇವಲ ನಮ್ಮ ಚಿತ್ರವನ್ನು ನೋಡಿದವರು ಅಥವಾ ನಮ್ಮ ವ್ಯಕ್ತಿತ್ವವನ್ನು ನೋಡಿದವರು ಅಥವಾ ಯಾರದೋ ಬಾಯಿಯ ಮೂಲಕ ನಮ್ಮ ಬಗ್ಗೆ ಕೇಳಿದವರು ನಮ್ಮನ್ನು ಅವರ ಆಲೋಚನೆಗೆ ಸೀಮಿತವಾಗಿ ಬಳಸಿಕೊಂಡು ಬಿಡುತ್ತಾರೆ. ನಾವು ಅವರ ಕಾಮದ ವಸ್ತುಗಳಾಗಬಹುದು, ಸಿಟ್ಟಿಗೆ ಕಾರಣವಾಗಬಹುದು, ನಿಕೃಷ್ಟ ವ್ಯಕ್ತಿಗಳಾಗಬಹುದು, ಸುಳ್ಳರಾಗಬಹುದು ಮೋಸಗಾರರು ಆಗಬಹುದು. ಹಾಗೆಯೇ ಅದ್ಭುತ ವ್ಯಕ್ತಿಗಳು ಪ್ರೀತಿ ಪಾತ್ರರು ಸ್ನೇಹಿತರು, ಸಕಲ ಗುಣ ಸಂಪನ್ನರು ಆಗಿರ್ಬಹುದು. ಇಲ್ಲಿ ತಪ್ಪು ಯಾರದ್ದು ಅಂತಲ್ಲ ಅವರು ಹಾಗೆ ಯೋಚಿಸುವುದಕ್ಕೆ ಕಾರಣವಾದ ಅಂಶ ಏನು ಅನ್ನೋದು ಮುಖ್ಯವಾಗ್ತದೆ .ಆದರೆ ನನ್ನ ಆಲೋಚನೆ ಏನೆಂದರೆ , ನನ್ನನ್ನ ಇಷ್ಟಪಡುವವರು ನನ್ನ ಬಗ್ಗೆ ಮಾತನಾಡುವವರು ನನ್ನ ಜೊತೆ ಬದುಕಿ ನನ್ನನ್ನ ಅರ್ಥೈಸಿಕೊಂಡು ನನ್ನ ಸನ್ನಿವೇಶದಲ್ಲಿ ಇದ್ದು ಯೋಚನೆ ಮಾಡಿ ನನ್ನ ಬಗ್ಗೆ ಮಾತನಾಡಿದರೆ ಅದಕ್ಕೊಂದು ಅರ್ಥ. ಅದರ ಹೊರತಾಗಿ ಅವರ ನಾಲಗೆ ಚಪಲಕ್ಕೆ ನನ್ನನ್ನ ಬಳಸಿಕೊಂಡರೆ ನಾನೇನು ಮಾಡಲಾಗುವುದಿಲ್ಲ. ಆದರೂ ಒಂದು ಸಲ ಯೋಚನೆ ಮಾಡಬೇಕು ನಾನು ಬದುಕುತ್ತಿರುವುದು ಸಮಾಜದಲ್ಲಿ ಹಾಗೂ ನಾನಿಲ್ಲಿ ಹೇಗೆ ಇರಬೇಕು ಅನ್ನೋದರ ಬಗ್ಗೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ