ಪೌಷ್ಟಿಕ ಆಹಾರ ಸಪ್ತಾಹವನ್ನು ಸಪ್ಟಂಬರ 1--7 ರವರೆಗೆ ಹಮ್ಮಿಕೊಳ್ಳಲಾಗಿದೆ. ನಾವು ಆರೋಗ್ಯವಾಗಿ ಗಟ್ಟಿಮುಟ್ಟಾಗಿರಲು, ದೈನಂದಿನ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಪೌಷ್ಟಿಕ ಆಹಾರ ಸೇವಿಸಬೇಕು. ಮುಖ್ಯವಾಗಿ ದೇಹದ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಆಹಾರದ ಪ್ರಮಾಣ ನಿತ್ಯದ ಸೇವನೆಯಲ್ಲಿ ಮಿಶ್ರವಾಗಿರಬೇಕು. ‘ಹಾಲು ಅಬಾಲವೃದ್ಧರಿಗೆ ಹಾಗೂ ಎಲ್ಲಾ ವಯಸ್ಸಿನವರಿಗೂ ಒಂದು ಸಮತೋಲನ ಆಹಾರ’ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿಚಾರ. ಇಪ್ಪತ್ತೈದು ವರುಷಗಳ ಹಿಂದಿನ ಊರಿನ ಕಾಡುಗುಡ್ಡೆಯಲ್ಲಿ ಮೇದು ಬರುವ ಹಸುವಿನ ಹಾಲು ಇಂದು ಬೆರಳೆಣಿಕೆಯ ಮನೆಗಳಲ್ಲಿ ಇರಬಹುದಷ್ಟೆ. ಈಗ ಏನಿದ್ದರೂ ಮಿಶ್ರತಳಿಗಳು.

ಜೀವಸತ್ವಗಳು ಎಲ್ಲಾ ಸೊಪ್ಪುತರಕಾರಿ, ಧಾನ್ಯಗಳಲ್ಲಿ ಸಿಗುತ್ತದೆ. ಪ್ರೋಟೀನ್, ಪಿಷ್ಠ, ಖನಿಜಾಂಶ, ಮೇಧಸ್ಸು ಇವೆಲ್ಲ ಶರೀರದ ಬೆಳವಣಿಗೆಗೆ ಪೂರಕ. ನಮ್ಮ ಹಿರಿಯರ ಜೀವನ ಶೈಲಿಯತ್ತ ಹಿಂದಿರುಗಿ ನೋಡಿದರೆ, ‘ಅವರು ಮಣ್ಣಲ್ಲಿ ಕಷ್ಟಪಟ್ಟು ಬೆವರಿಳಿಸಿ ದುಡಿಯುತ್ತಿದ್ದರು. ತಮ್ಮ ತೋಟ, ಹಿತ್ತಿಲಿನ ತರಕಾರಿಗಳನ್ನೇ ಬಳಸುತ್ತಿದ್ದು ಆರೋಗ್ಯವಾಗಿ, ಸದೃಢರಾಗಿದ್ದರು. ನಮಗೆ ಅದೆಲ್ಲ ಬೆಳೆಸಲು ಪುರುಸೊತ್ತಿಲ್ಲ, ಹಣ ಕೊಟ್ಟರೆ ಎಲ್ಲವೂ ಕೈಗೆಟಕುವುದೆಂಬ ಭ್ರಮೆ. ಹಣ ಕರಗುವುದು ಗೊತ್ತಾಗುವುದೇ ಇಲ್ಲ. ನಮ್ಮ ಮಕ್ಕಳಿಗೆ ಅದೆಲ್ಲ ಬೇಡ. ಹೋಟೆಲಿನಲ್ಲಿ ತಿನ್ನುವುದೆಂದರೆ ಬಹಳ ಸಂಭ್ರಮ. ಆದಷ್ಟೂ ಮನೆಯಲ್ಲಿಯೇ ವೈವಿಧ್ಯ ಖಾದ್ಯಗಳನ್ನು ತಾಯಂದಿರು ಮಾಡಿಕೊಟ್ಟರೆ ಒಳ್ಳೆಯದು.

ಆಹಾರ ಭದ್ರತೆ, ಬೆಳೆ ಬೆಳೆಯುವಿಕೆ, ಶೇಖರಣೆ, ವಿತರಣೆಯಲ್ಲಿ ನಾವಿಂದು ಸ್ವಾವಲಂಬನೆ ಪಡೆದಿದ್ದೇವೆ ಎಂಬ ಹೆಮ್ಮೆಯಿದೆ. ಪಡಿತರ ಅಂಗಡಿಗಳ ಮೂಲಕ ಬಡವರಿಗೆ ಬಹಳಷ್ಟು ಅನುಕೂಲವಾಗಿದೆ. ಗರ್ಭಿಣಿ ಬಾಣಂತಿ ,6 ವರ್ಷದೊಳಗಿನ ಮಕ್ಕಳಿಗೆ ಸ್ಥಳೀಯ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಿಸುತ್ತಿದ್ದಾರೆ. ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಬಾಳೆಹಣ್ಣು, ಮೊಟ್ಟೆ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಶಾಲೆಗಳಲ್ಲೂ ಲಭ್ಯವಿದ್ದರೆ ಕೈತೋಟ ಮಾಡಬಹುದು. ಕೈಗೆಟಕುವ ಬೆಲೆಯಿದ್ದಲ್ಲಿ ಹಣ್ಣಗಳನ್ನು ಖರೀದಿಸಿ ಅಥವಾ ಮನೆಯಲ್ಲಿ ಸಿಗುವ ಹಣ್ಣು ತಿನ್ನಬಹುದು.

ಪುಟ್ಟ ಕಂದಮ್ಮಗೆ ತಾಯಿಯ ಎದೆಹಾಲು ಅತ್ಯಂತ ಒಳ್ಳೆಯದು. ಈ ಬಗ್ಗೆ ಮಾಹಿತಿಯನ್ನು ಅಂಗನವಾಡಿಗಳ ತಾಯಂದಿರ ‌ಭೆಯಲ್ಲಿ ನೀಡುತ್ತಾರೆ.ಶಾಲಯ ಹೆತ್ತವರ ಸಭೆಯಲ್ಲೂ ತಿಳಿಸಬಹುದು.ಕೆಲವೆಡೆ ಅಡುಗೆ ಸ್ಪರ್ಧೆ ಸಹ  ಇರುತ್ತದೆ.ಕೆಲವು ಒಣಹಣ್ಣುಗಳನ್ನು ‌ಮಿಶ್ರ ಮಾಡಿ ಉಂಡೆ ಮಾಡಿ ನಿತ್ಯ ಸೇವಿಸಬಹುದು.

ನಮ್ಮ ಮನೆಯ ಸುತ್ತಮುತ್ತ ಸುಲಭವಾಗಿ ಸಿಗುವ ಹಸಿರು ಸೊಪ್ಪುಗಳ ಸಲಾಡ್, ಪಲ್ಯ, ವಡೆ, ದೋಸೆ, ರೊಟ್ಟಿ ತಂಬುಳಿ, ಚಟ್ನಿ ಮಾಡಿ ಸೇವಿಸಬಹುದು. ಕೆಲವು ಪುಷ್ಪಗಳ ತಂಬುಳಿ, ಶರಬತ್ತು, ಸಾರು, ದೋಸೆ ಮಾಡಬಹುದು. ಔಷಧೀಯ ಸಸ್ಯಗಳು ಸಹ ಬಹುಪಯೋಗಿ. ಒಂದಕ್ಕೆರಡು ಹಣ ಕೊಟ್ಟು ತಾರದೆ, ಇರುವುದರಲ್ಲಿಯೇ ಪೌಷ್ಟಿಕ ಆಹಾರ ತಯಾರಿಸುವ ಬಗ್ಗೆ ಪ್ರತಿ ಮನೆಯ ಹೆಣ್ಣು ಮಕ್ಕಳು ಯೋಚಿಸುವುದು ಇಂದಿನ ಪ್ರಸಕ್ತ ಕಾಲಘಟ್ಟಕ್ಕೆಒಳ್ಳೆಯದು. ಕುಡಿಯುವ ನೀರಿನ ಬಗ್ಗೆಯೂ ಜಾಗ್ರತೆ ವಹಿಸಬೇಕು. ಹಸಿರು, ಹಳದಿ ತರಕಾರಿಗಳು ಶರೀರಕ್ಕೆ ಉತ್ತಮ. ಬಾಳೆಕಾಯಿ, ಬಾಳೆಎಲೆ (ಎಳೆಯದು) ಬಾಳೆದಿಂಡು ಅತ್ಯುತ್ತಮ ಆಹಾರವಾಗಿದೆ. ಎಳೆಯ ಮಕ್ಕಳಿಗೆ ಉತ್ತಮ ಪೋಷಕಾಂಶ ಸಿಗಲು ಎದೆಹಾಲು ಸಹಕಾರಿ, ತಪ್ಪದೆ ತಾಯಂದಿರು ನೀಡಬೇಕು. ಜೊತೆಗೆ ಶರೀರ ಸ್ವಚ್ಛತೆಯನ್ನೂ ಕಲಿಸಿ,ಎಲ್ಲರೂ ಆರೋಗ್ಯವಾಗಿರುವಂತೆ ಪ್ರತಿಯೋರ್ವರೂ ಕೈಜೋಡಿಸೋಣ.

-ರತ್ನಾ ಕೆ ಭಟ್,ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ