ನಿಲ್ಲು ನಿಲ್ಲೇ ಪತಂಗ

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಹರೀಶ್ ಕೇರ ಇವರು ‘ನಿಲ್ಲು ನಿಲ್ಲೇ ಪತಂಗ’ ಎನ್ನುವ ಕಾಡಿನ ರಹಸ್ಯಗಳನ್ನು ಹೇಳುವ ಕಾದಂಬರಿಯನ್ನು ಬರೆದಿದ್ದಾರೆ. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದ್ದು ಹುರಿದುಂಬಿಸಿದ್ದಾರೆ ಲೇಖಕ, ಅಂಕಣಕಾರ ಜೋಗಿ. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು …”ನಿಲ್ಲು ನಿಲ್ಲೇ ಪತಂಗ ಕಾದಂಬರಿ ನಿಮ್ಮನ್ನು ಒಂದೇ ಸಲಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಊರಿಗೆ ಹೊತ್ತೊಯ್ಯುತ್ತದೆ. ಅಲ್ಲಿ ಕರ್ವಾಲೋ ಚಿಕ್ಕಪ್ಪನಂತೆ ಕಾಣುವ ಪಣಿಕ್ಕರ್ ನಿಮಗೆ ಸಿಗುತ್ತಾರೆ. ಅವರ ಹುಡುಕಾಟದ ಹಾದಿಯಲ್ಲಿ ನೀವು ಊಹಿಸಿರದ ಅಪೂರ್ವ ಘಟನೆಯೊಂದು ನಡೆದು ಮೈತುಂಬ ಚಿಟ್ಟೆ ಮೂಡಿದಂತೆ ರೋಮಾಂಚನವಾಗುತ್ತದೆ. ಹರೀಶ್ ಕೇರ ಪುರುಸೊತ್ತು ಸಿಕ್ಕಾಗೆಲ್ಲಾ ಕಾಡು ಸುತ್ತುತ್ತಿರುತ್ತಾರೆ. ಅವರಿಗೆ ಮನುಷ್ಯರಿಗಿಂತ ಮರಗಳೇ ಪ್ರಿಯ. ಮಾತಿಗಿಂತ ಮೌನವೇ ಅಪ್ಯಾಯಮಾನ. ಈ ಕತೆಯುದ್ದಕ್ಕೂ ಕಾಡಿಗಷ್ಟೇ ವಿಶಿಷ್ಟವಾಗಿರುವ ನೀರವ, ನಿಗೂಢ, ವಿಸ್ಮಯ ಮತ್ತು ವಿನೀತಗೊಳಿಸುವ ಗುಣ ದಟ್ಟ ಕಾಡಿನಂತೆ ಹಬ್ಬಿಕೊಂಡಿದೆ.

ತಿಳಿನೀರಿನಂಥ ಭಾಷೆ, ಆಪ್ತರಂತೆ ಬಂದುಹೋಗುವ ಪಾತ್ರಗಳು, ಬೆರಗಿನ ಜತೆಗೇ ಎದುರಾಗುವ ಭಯವಿಹ್ವಲ ಸಂಗತಿಗಳು ಈ ಕಥನವನ್ನು ದೈನಿಕದ ಯಾತನಾಮಯ ಚಕ್ರಸುಳಿಯಿಂದ ಹೊರಗಿಟ್ಟಿದೆ. ಮುಟ್ಟಿದರೆ ಥಟ್ಟನೆ ನೀರಾಗಿಬಿಡುವ ಮಂಜುಹನಿ ನೆಲೆಸಿರುವ ಹುಲ್ಲುಹಾದಿಯಲ್ಲಿ ಮುಂಜಾನೆ ಹೆಜ್ಜೆ ಹಾಕುತ್ತಾ ಹೋದಹಾಗೆ, ಎದುರಿನ ಕಣಿವೆಯಿಂದ ಇಷ್ಟಿಷ್ಟೇ ಮೂಡುವ ಸೂರ್ಯ ನಮ್ಮ ಚೈತನ್ಯವನ್ನು ಬೆಳಗುವಂತೆ, ಈ ಕತೆ ತೆರೆದುಕೊಳ್ಳುತ್ತಾ ಹೋದಂತೆ ಇನ್ನೊಂದು ಜಗತ್ತು ಸ್ವಾಗತಿಸುತ್ತದೆ.

ಈ ಮರುಳುಗೊಳಿಸುವ ಕಥನಕ್ಕಾಗಿ ನಾನು ಹರೀಶ್ ಕೇರ ಅವರನ್ನು ಅಭಿನಂದಿಸುತ್ತೇನೆ. ಪೂರ್ಣಚಂದ್ರ ತೇಜಸ್ವಿ ನಮ್ಮನ್ನು ಅಷ್ಟೊಂದು ಪ್ರಭಾವಿಸದೇ ಹೋಗಿದ್ದರೆ ಇಂಥದ್ದೊಂದು ಕಾದಂಬರಿಯೇ ಸಾಧ್ಯವಾಗುತ್ತಿರಲಿಲ್ಲ. ಸಾಹಿತ್ಯ ಪರಂಪರೆಗೂ ಸಾಹಿತ್ಯಕ್ಕೂ ಇರುವ ಸಂಬಂಧವೇ ಅಂಥದ್ದು. ಇಂದು ಅರಳಿದ ಹೂವು, ನಾಳೆ ಹುಟ್ಟಲಿರುವ ಹೂವಿನ ಗಿಡಕ್ಕೆ ಸಹಜಸ್ಪೂರ್ತಿ.”

ಕಾದಂಬರಿಕಾರ ಹರೀಶ್ ತಮ್ಮ ಕಾದಂಬರಿಯ ಬಗ್ಗೆ “ತೇಜಸ್ವಿಯವರನ್ನು ನೆನೆಯುತ್ತಾ ಕೆಲವಾರು ವರ್ಷಗಳ ಹಿಂದೆ ಪರಿಸರಪ್ರೇಮಿ ದಿನೇಶ್‌ ಹೊಳ್ಳರ ಜೊತೆಗೆ ಚಾರ್ಮಾಡಿ ಕಾಡಿನೊಳಗಿನ ಬಿದಿರುತಳ ಎಂಬ ಹಳ್ಳಿಗೆ ರಾತ್ರಿ ಚಾರಣ ಮಾಡಿದ್ದೆ. ಆಗಿನ್ನೂ ಅಲ್ಲಿಗೆ ಕಾಲ್ನಡಿಗೆ ಮಾತ್ರವಿತ್ತು. ಒಂದು ರಾತ್ರಿ ಒಂದು ಹಗಲು ಅಲ್ಲಿ ಕಳೆದ ಬಳಿಕ ಅನ್ನಿಸಿದ್ದು ಮಿಶ್ರ ಭಾವನೆ.

ಕಾಡಿನೊಳಗಿನ ಬದುಕು ರುದ್ರಮನೋಹರ. ಅದು ಮೌನ, ಸೌಂದರ್ಯ, ಕ್ರೌರ್ಯ, ಹತಾಶೆ ಎಲ್ಲ ಸೇರಿದ ಜೀವನ. ಅದು ನನ್ನೊಳಗೆ ಅರಳಿ ಈ ರೂಪದಲ್ಲಿ ಮರಳಿದೆ. ಇದರ ಜೊತೆಗೇ ಈ ಕಾದಂಬರಿ ನಾನು ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಲ್ಲಿಸುತ್ತಿರುವ ಗೌರವ. ತೇಜಸ್ವಿಯವರೂ ಈ ಕಾದಂಬರಿಯ ಒಂದು ಪಾತ್ರ. ಎಲ್ಲ ರೀತಿಯಲ್ಲೂ ನನ್ನ ಮೇಲೆ ಅಗಾಧ ಪರಿಣಾಮ ಬೀರಿರುವ ಅವರಿಗೆ ಟ್ರಿಬ್ಯೂಟ್‌ ಸಲ್ಲಿಸಲು ಇದಕ್ಕಿಂತ ಉತ್ತಮವಾದ ಬೇರೆ ದಾರಿ ನನಗೆ ಕಂಡಿಲ್ಲ. ಅವರು ಓಡಾಡಿದ, ಬದುಕಿದ್ದ ಚಾರ್ಮಾಡಿಯ ಪರಿಸರವೇ ಇಲ್ಲಿದೆ. ಅವರೂ, ಅವರ ಕಾದಂಬರಿಯ ಒಂದು ಪಾತ್ರದ ನೆರಳೂ ಇಲ್ಲಿರುವುದರಿಂದ ಇದನ್ನು ʼಫ್ಯಾನ್‌ ಫಿಕ್ಷನ್‌ʼ ಎಂದು ಕರೆದುಕೊಳ್ಳುತ್ತೇನೆ.

ʻಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಜಗತ್ತು ಸ್ಮಶಾನಕ್ಕಿಂತ ಭೀಕರʼ ಎನ್ನುವ ತೇಜಸ್ವಿಯವರ ಮಾತು ಇದರ ಹಿನ್ನೆಲೆಯಲ್ಲಿದೆ. ಬೇರೆಲ್ಲ ಸಿದ್ಧಾಂತಗಳಿಗಿಂತಲೂ, ಇಕಾಲಜಿ ಮತ್ತು ವಿಕಾಸವಾದ ಇಂದಿನ ಬರಹಗಾರರ ವಸ್ತು ಆಗುವುದು ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು. ಅದನ್ನಿಲ್ಲಿ ಪ್ರಯತ್ನಿಸಿದ್ದೇನೆ. ಇನ್ನುಳಿದಂತೆ ನೀವುಂಟು, ಕಾದಂಬರಿಯುಂಟು.” ಎಂದು ಬರೆದು ಕಾದಂಬರಿಯನ್ನು ಓದಲು ಪ್ರೇರೇಪಿಸಿದ್ದಾರೆ.