ನೆರಳಿಗೆ ಹಾಕಿದ್ದಾರೆ ಶಾಮಿಯಾನ. ಆದರೆ ಆ ನೆರಳಿನ ಕೆಳಗೆ ನಿಂತು ನೆರಳನ್ನ ಆಸ್ವಾದಿಸುವ ಹಾಗಿಲ್ಲ. ನೆರಳಿದೆ ಎಂದು ಹಾಕಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಬಿಸಿಲಲ್ಲಿ ಓಡಾಡಿ ನೆರಳಲ್ಲೊಂದಿಷ್ಟು ವಿಶ್ರಾಂತಿ ಪಡೆಯುವ ಹಾಗಿಲ್ಲ. ಕಾರಣವಿಷ್ಟೇ ಹಾಕಿದ ಶಾಮಿಯಾನ ಸಾವಿನ ಮನೆಯ ಮುಂದೆ. ಶಾಮಿಯಾನಕ್ಕೂ ತಾನು ಎಲ್ಲೆಲ್ಲಿ ಬಳಕೆಯಾಗುತ್ತಿದ್ದೇನೆ ಅನ್ನೋದ್ದಕ್ಕೆ ಹೆಮ್ಮೆ ಇದೆ. ಎಲ್ಲಾ ಕಡೆಗೂ ಸೂರ್ಯನ ಬೆಳಕನ್ನು ತಡೆಹಿಡಿದು ನೆರಳನ್ನ ನೀಡುವುದೊಂದೇ ಕೆಲಸ. ಆ ನೆರಳೊಳಗೆ ನಿಂತಿರುವವನ ವಸ್ತು ಸ್ಥಿತಿಗಳು ಬೇರೆ ಬೇರೆಯಾಗಿರುತ್ತವೆ ಅಷ್ಟೇ. ಬದುಕು ಶಾಮಿಯಾನವಾದರೆ ತೊಂದರೆ ಇಲ್ಲ, ಆದರೆ ಬದುಕು ಸಾವಿನ ಮನೆಯ ಮುಂದಿನ ಶಾಮಿಯಾನದ ತರಹ ಆಗುವುದು ಬೇಡ. ನೆರಳಿದ್ದರೂ ನೆಮ್ಮದಿ ಕಳೆದುಕೊಂಡ ಆ ಮನೆಯವರ ಪರಿಸ್ಥಿತಿಯ ರೀತಿ? ಹೀಗೆಂದು ಸುಮ್ಮನೆ ಕುಳಿತು ಯೋಜಿಸುತ್ತಿದ್ದಾನೆ ಬದುಕಿನ ಪರಿಸ್ಥಿತಿಗಳು ಆತನನ್ನ ಕರೆದು ಕರೆದು ಮಾತನಾಡಿಸುತ್ತಿದೆ...ಆತ ಮೌನವಾಗಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ