ಮನೆಯೊಳಗೆ ಕುಳಿತು ಕಿಟಕಿಯಿಂದ ನೋಡಿದರೆ ಜಗತ್ತು ಅರ್ಥವಾಗುವುದಿಲ್ಲ ಅಥವಾ ಕಿಟಕಿಯಿಂದ ಕಾಣುತ್ತಿರುವುದು ಮಾತ್ರ ಜಗತ್ತಲ್ಲ, ಬಾಗಿಲಿದೆ ಬಾಗಿಲನ್ನು ತೆರೆದು ನೋಡಿದಾಗ ಕಾಣುವುದು ಮಾತ್ರ ಜಗತ್ತಲ್ಲ, ಕೆಲವೊಂದು ಸಲ ಮನೆಯ ಅಲ್ಲಲ್ಲಿ ಸಣ್ಣಪುಟ್ಟ ಕಿಂಡಿಗಳಿರಬಹುದು ಅದರ ಮೂಲಕವೂ ಜಗತ್ತನ್ನ ನೋಡುವುದಕ್ಕೆ ಸಾಧ್ಯ ಇದೆ ಮನೆಯನ್ನ ತೊರೆದು ಹೊರಗೆ ಬಂದು ಒಮ್ಮೆ ವೀಕ್ಷಿಸಬೇಕು ಆಗ ಹೊಸತೊಂದು ಜಗತ್ತು ಕಾಣಿಸುತ್ತದೆ, ಮನೆಯ ಮೇಲಿನ ಅಟ್ಟವನ್ನೇರಿ ಅಲ್ಲಿ ಇಣುಕಿದಾಗಲೂ ಇನ್ನೊಂದು ಜಗತ್ತು ಕಾಣಿಸಲಾರಂಭಿಸುತ್ತದೆ, ಎಲ್ಲ ಕಿಟಕಿ ಬಾಗಿಲುಗಳನ್ನ ಮುಚ್ಚಿ ಮನೆ ಒಳಗೆ ಕುಳಿತಾಗಲು ಜಗತ್ತು ಕಾಣಿಸುತ್ತದೆ, ಹೀಗೆ ಜಗತ್ತನ್ನ ನಿನಗೆ ಯಾವ ರೂಪದಲ್ಲಾದರೂ ನೋಡುವುದಕ್ಕೆ ಸಾಧ್ಯ ಇದೆ ನೀನು ಯಾವುದೋ ಒಂದೇ ದಿಕ್ಕಿನಿಂದ ನೋಡಿದ್ದು ಮಾತ್ರ ಸತ್ಯ ಅಂತಂದು ಕೊಳ್ಳುವುದು ತಪ್ಪು. ಮನೆಯ ಹಿತ್ತಲಲ್ಲೂ ಅದ್ಭುತವಾದ ಜಗತ್ತು ಪರಿಚಯವಾಗಬಹುದು. ಹಾಗಾಗಿ ನಿನ್ನ ಕಣ್ಣಿಗೆ ಕಂಡದ್ದು ಸತ್ಯ ಉಳಿದದ್ದೆಲ್ಲ ಮಿಥ್ಯ ಅನ್ನುವ ಸಮಜಾಯಿಸಿಗೆ ಬರಬೇಡ .ಒಮ್ಮೆ ಕಣ್ಮುಚ್ಚಿ ನಿನ್ನಂತರಂಗವನ್ನು ಪ್ರಶ್ನಿಸು ಹೀಗೆಂದು ಗೋಡೆಯ ಪಕ್ಕದಲ್ಲ್ಯಾರೋ ಮಾತನಾಡಿದಂತಾಯಿತು, ಇಷ್ಟು ದಿನದವರೆಗೆ ಕಣ್ಣಿಗೆ ಕಂಡದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಿದ್ದವನು, ಈ ಮಾತನ್ನು ಕೇಳಿದ ಮೇಲೆ ಬದಲಾಗುವ ನಿರ್ಧಾರ ಮಾಡಿದ್ದೇನೆ. ಹೊಸ ದಿಷೆಯಲ್ಲಿ ಯೋಚಿಸಲಾರಂಭಿಸಿದ್ದೇನೆ. ಅವನು ನಿಮ್ಮ ಮನೆಯ ಗೋಡೆಯ ಪಕ್ಕದಲ್ಲಿ ಮಾತನಾಡಬಹುದು ಆಗಾಗ ಗೋಡೆಗೆ ಕಿವಿಯಾನಿಸಿ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ