ನನ್ನ ಕೂಗು ನಿಮಗೆ ಕೇಳುತ್ತಿಲ್ಲವೇ? ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಇಷ್ಟು ದಿನದವರೆಗೆ ನೀವೆಲ್ಲರೂ ಜಾತಿ ಧರ್ಮ ಪಂಗಡ ಭಾಷೆ ಹೀಗೆ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ ಬದುಕ್ತಾ ಇದ್ದೀರಾ? ಎಲ್ಲರೂ ಒಟ್ಟಾಗಿ ಗಟ್ಟಿಯಾಗಿ ಎಲ್ಲೂ ಧ್ವನಿ ಸೇರುತ್ತಾ ಇಲ್ಲ. ಈಗಲಾದರೂ ನೀವು ಧ್ವನಿ ಗಟ್ಟಿಯಾಗಿಸಿಕೊಳ್ಳದೆ ಹೋದರೆ ನಾನು ಸಾಯ್ತೇನೆ ನನ್ನ ಜೊತೆಗೆ ನೀವೆಲ್ಲರೂ ಬದುಕನ್ನ ಕಳೆದುಕೊಳ್ಳುತ್ತೀರಾ? ನಾನು ಪುಟ್ಟದಾಗಿ ಹುಟ್ಟಿ ನಿಮ್ಮೂರಿಗೆ ಒಳಿತನ್ನ ಬಯಸುತ್ತಿರುವ ಶರಾವತಿ ನದಿ. ನನ್ನ ಹರಿವು ಹಲವು ಜೀವ ಸಂಕುಲಗಳಿಗೆ ಆಧಾರವಾಗಿದೆ. ಬೆಳೆಯುವ ಮರಗಳು ನೆಲವನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ಈಗ ಸರಕಾರದವರು ಯೋಜನೆಯೊಂದನ್ನು ರೂಪಿಸಿದ್ದಾರೆ ಹರಿಯುತ್ತಿರುವ ನನ್ನನ್ನು ತಡೆದು ನಿಲ್ಲಿಸಿ ಕಾಡುಗಳನ್ನ ಕಡಿದು ಸುರಂಗಗಳನ್ನ ಮಾಡಿ ಮತ್ತೆ ಮೇಲಕ್ಕೆ ಏರಿಸಿ ಅಲ್ಲಿಂದ ವೇಗವಾಗಿ ಕೆಳಗಿಳಿಯುವಂತೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಬೇಕೆಂದು ಯೋಜನೆ ರೂಪಿಸಿದ್ದಾರೆ .ಇದು ಪರಿಸರಕ್ಕೂ ವಿರೋಧ ವೈಜ್ಞಾನಿಕವಾಗಿಯೂ ಆಗುವಂತದ್ದಲ್ಲ. ಇದೇ ರೀತಿ ಹಲವು ನದಿಗಳನ್ನು ಮಾಡಿ  ಪರಿಸರ ನಾಶಕ್ಕೆ ಕಾರಣವಾಗಿದ್ದಾರೆ. ನಾನು ನಾಶವಾಗಿ ಬಿಟ್ಟರೆ ನಿಮ್ಮಗಳ ಬದುಕು ತುಂಬಾ ಶೋಚನೀಯವಾಗುತ್ತದೆ. ಭೂಕುಸಿತಗಳಾಗುತ್ತದೆ . ನೀವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಿದರೆ ನಾನು‌ ಉಳಿಯುತ್ತೇನೆ, ನಾಡು ಉಳಿಯುತ್ತದೆ, ನಾವು ಉಳಿಯುತ್ತೇವೆ. ನಾನು ನಿಮ್ಮವಳು. ನಿಮ್ಮ ಮಾತಿಗೆ ಬೆಲೆ ಇದೆ. ನೀವು ಇದ್ದೀರಿ ಅನ್ನುವ ಭರವಸೆಯನ್ನ ಕೊಡಿ ಇನ್ನು ಮೈದುಂಬಿ ಈ ನೆಲವನ್ನ ಕೊನೆಯವರೆಗೂ ಹಸಿರಿನ ತಾಣವಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಶರಾವತಿ ನದಿಯ ಬೇಡಿಕೆ ನನ್ನ ಮುಂದಿತ್ತು, ನಾನು ಶರಾವತಿಯ ಜೊತೆಗೆ ನಿಲ್ತೇನೆ ಸುದ್ದಿಯನ್ನು ನಿಮಗೂ ದಾಟಿಸಬೇಕು ಅನ್ನುವ ಕಾರಣಕ್ಕೆ ತಲುಪಿಸಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ