ಭಗವಂತ ಸುಮ್ಮನೆ ನಕ್ಕುಬಿಟ್ಟ, ನಗುವುದ್ದಕ್ಕೂ ಕಾರಣವಿತ್ತು. ತನ್ನ ನಂಬಿದವರ ಆಡುವ ರೀತಿಯನ್ನ ನೆನೆದು ಸುಮ್ಮನಾದ. ಒಂದು ಬಸ್ಸು ದೂರದ ಊರಿಗೆ ಪಯಣ ಹೊರಟಿತ್ತು. ಇಡೀ ಬಸ್ಸಿನೊಳಗೆ ಪಯಣವನ್ನ ಆಸ್ವಾದಿಸುವವರು ಕೆಲವರು, ದೂಷಿಸುವವರು ಕೆಲವರು ಹೀಗೆ ಎಲ್ಲ ಮಿಶ್ರಣಗಳ ಒಟ್ಟು ಸೇರುವಿಕೆಯ ಪಯಣ ಸಾಗಿತ್ತು. ಅಲ್ಲೊಂದು ಕಡೆ ಗಾಡಿಯ ಚಕ್ರ ಒಡೆದು ಹೋಗಿ ಬಸ್ಸು ಕಂಬಕ್ಕೆ ಗುದ್ದಿ ನಿಂತಾಗ ಎಲ್ಲರೂ ತಮ್ಮ ಪಯಣವನ್ನ ಶಪಿಸುವವರೇ, ಭಗವಂತನ ಈ ದುಷ್ಟ ಕೆಲಸವನ್ನ ನಿಂದಿಸುವವರೇ, ಇಲ್ಲಿ ಎಲ್ಲ ಜಾತಿ ಧರ್ಮಗಳ ಮಿಶ್ರಣವಿತ್ತಲ್ಲ ಯಾರೊಬ್ಬರ ಬಾಯಿಯಲ್ಲೂ ಒಳಿತಿನ ಉಸಿರಾಟವಿರಲಿಲ್ಲ. ಮತ್ತೆ ಸರಿಯಾಗಿ ನಿಂತ ಬಸ್ಸು ಪಯಣ ಹೊರಟು ಗಕ್ಕನೆ ಬ್ರೇಕು ಒತ್ತಿ ರಸ್ತೆ ಮದ್ಯೆ ನಿಂತಿತು. ಎದುರುಗಡೆ ಗುಡ್ಡ ಕುಸಿದು ಮುಂದಿನ ಪಯಣ ಅಸಾಧ್ಯವಾಗಿತ್ತು. ಬಸ್ಸು ತಡವಾಗಿ ಬಂದದ್ದಕ್ಕೆ ಎಲ್ಲರ ಪ್ರಾಣ ಉಳಿತಾಯವಾಗಿತ್ತು. ಎಲ್ಲರೂ ಮತ್ತೆ ಕೈ ಮುಗಿದರು, ಬೇಡಿದರು, ಹಾರೈಸಿದರು, ಭಗವಂತನ ಕೊಂಡಾಡಿದರು. ಅವನಿಂದಲೇ ಎಲ್ಲವೂ ಎಂದರೂ ಒಬ್ಬೊಬ್ಬರ ಬಾಯಲ್ಲಿ ಬೇರೆ ಬೇರೆ ದೇವರ ನಾಮ ಕುಣಿದಾಡಿತು. ಎತ್ತರದಲ್ಲಿ ನಿಂತ ನಿರಾಕಾರ ಸುಮ್ಮನೆ ನಕ್ಕು ಬಿಟ್ಟ. ನಾನೊಬ್ಬನೇ ಎಂದರೂ ಅರ್ಥಮಾಡಿಕೊಳ್ಳಲಾರದ ಸ್ಥಿತಿಗೆ ತಲುಪಿದ್ದಾನೆ ಮಾನವ ಇನ್ನೇನು ಹೇಳಲಿ. ಅವನಂದುಕೊಂಡಂತೆ ಬದುಕಲಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!