ವಯಸ್ಸೇನು ಹೆಚ್ಚು ಕಡಿಮೆ ಇಲ್ಲ. ಎಲ್ಲರದ್ದು ಒಂದೇ. ಅದೇ ವಯಸ್ಸಿನವರು ವೇದಿಕೆಯ ಮೇಲೆ ಕುಣಿಯುತ್ತಿದ್ದಾರೆ ನೋಡುಗರನ್ನು ರಂಜಿಸುತ್ತಿದ್ದಾರೆ ಹಾಗೆ ಕುಣಿದದ್ದಕ್ಕೆ ಅವರಿಗೆ ಗೌರವ ಜೊತೆಗೆ ಸಂಭಾವನೆಯೂ ಸಿಗುತ್ತದೆ. ಅದೇ ನೃತ್ಯವನ್ನು ನೋಡುವುದಕ್ಕೆಂದೇ ದುಡ್ಡು ಕೊಟ್ಟು ಬಂದು ಕುಳಿತವರು ಒಂದಿಷ್ಟು ಮಂದಿ ಹಾಗೆ ಕಾಲ ಮೇಲೆ ಕಾಲು ಹಾಕಿ ವೇದಿಕೆಯಲ್ಲಾಗುವ ನೃತ್ಯವನ್ನು ಗಮನಿಸುತ್ತಿದ್ದಾರೆ, ಇನ್ನೊಂದಷ್ಟು ಜನರಿಗೆ ಹೆಚ್ಚು ದುಡ್ಡು ಕೊಡುವುದಕ್ಕೆ ಸಾಧ್ಯವಾಗದ ಕಾರಣ ಹಿಂದೆ ಕುಳಿತು ತಲೆ ಏರಿಸಿ ವೇದಿಕೆ ಮೇಲಿನ ನೃತ್ಯ ನೋಡುತ್ತಿದ್ದಾರೆ ಅವರ ವಯಸ್ಸು ಅದೇ, ಆದರೆ ನನಗೆ ಇದು ಯಾವುದರ ಕಡೆಗೆ ಹೋಗುವುದಕ್ಕೆ ಮನಸ್ಸು ಆಗ್ತಾ ಇಲ್ಲ, ನಾನು ಕೈಯಲ್ಲಿ ಹಿಡಿದಿರುವ ಬಟ್ಟೆ ಇವತ್ತು ಮಾರಾಟವಾಗಲೇಬೇಕು. ನನ್ನದು ಅದೇ ವಯಸ್ಸು ಬೆಳಗ್ಗೆಯಿಂದ ಸಂಜೆಯಾದರೂ ಕೈಯಲ್ಲಿ ಹಿಡಿದ ಬಟ್ಟೆಯಲ್ಲಿ ಹತ್ತಷ್ಟೇ ಮಾರಾಟವಾಗಿದೆ, ಇದು ಪೂರ್ತಿ ಖಾಲಿಯಾಗದೆ ನಾಳೆಯ ಬದುಕಿಗೆ ಧೈರ್ಯ ಸಾಕಾಗುವುದಿಲ್ಲ, ಮನೆಯಲ್ಲಿ ಹೋಗಿ ಒಂದು ತುತ್ತು ಹೊಟ್ಟೆಗಿಳಿಸುವುದಕ್ಕೆ ಮನಸ್ಸು ಕೇಳುವುದಿಲ್ಲ, ದುಡಿಯಲೇ ಬೇಕು ಆಸೆಗಳೆಲ್ಲ ಇದೆ ಸಾರ್ ಅದನ್ನು ಇಟ್ಟುಕೊಂಡು ಮಾಡೋದೇನು, ಚಾಪೆ ಮೇಲೆ ಮಲಗಿದ್ರೆ ನಿದ್ದೆ ಹತ್ತಬೇಕು ಭಯ ಮನಸ್ಸಿಗೆ ಹತ್ತಿದ್ರೆ ಬದುಕು ಮಾಡೋದು ಹೇಗೆ ಸರ್ ಕೆಲವೊಂದು ಹೇಳುವುದಕ್ಕೆ ಸುಲಭ ಆದರೆ ಅದನ್ನ ಅನುಭವಿಸುವವರಿಗೆ ಮಾತ್ರ ಬದುಕಿನ ಎಲ್ಲ ಸ್ಥಿತಿಗಳು ಅರ್ಥವಾಗುತ್ತವೆ, ಅವಳ ಪರಿಸ್ಥಿತಿ ನೋಡಿ ಅಗತ್ಯವಿಲ್ಲದಿದ್ದರು ಖರೀದಿಸಿದೆ. ಅವಳ ಆಸೆಯ ಕಣ್ಣುಗಳಿಂದ ಇನ್ನೊಂದಷ್ಟು ಜನರಿಗೆ ಮಾರಾಟ ಮಾಡುವುದಕ್ಕೆ ಜನಜಂಗುಳಿಯ ಮಧ್ಯೆ ಸಾಗಿಬಿಟ್ಟಳು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ