ಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತ, ಸೂಕ್ತ ಸಂತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ ಉತ್ತರಾಧಿಕಾರದ ದಾಹ, ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಸಂಗತಿ. ವಿಜಯನಗರದ ಈ ಗಲಭೆಗಳಿಂದ ದೂರದಲ್ಲಿಹ ಒಂದು ಹಳ್ಳಿ - ಮರಾವಳಿ. ಅಲ್ಲಿಯ ಭವ್ಯವಾದ ತೋಟದ ಮನೆ ಮಧುವನ. ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲ ಈ ಸಂಪತ್ತಿನ ಒಡೆಯ ಎಪ್ಪತ್ತು ವಯಸ್ಸಿನ ರಾಜಣ್ಣ ಅಕಾಲ ಮರಣಕ್ಕೆ ತುತ್ತಾಗಿದ್ದಾರೆ. ಕುಲದ ಗರಿಮೆಯನ್ನು ಕಾಪಾಡಲು, ಅವರ ಮೂರು ವಿಧವೆಯರಿಗೆ ಸತಿ ಪರಿಕ್ರಮ ಕೈಗೊಳ್ಳುವಂತೆ ಸದನದ ಹಿರಿಯರು ಆದೇಶಿಸಿದ್ದಾರೆ.
ಈ ಸಂದಿಗ್ಧತೆಯಲ್ಲಿ ಮೂರು ಪ್ರಧಾನ ಪಾತ್ರಗಳು ಕವಲು ದಾರಿಗಳಲ್ಲಿ ಎದುರಾಗುತ್ತವೆ: ಕಿರಿಯ ವಿಧವೆ, ರಾಜಣ್ಣನ ಏಕೈಕ ಪುತ್ರ ಸಂತಾನಕ್ಕೆ ಜನ್ಮವಿತ್ತ ಇನ್ನೂ ಇಪ್ಪತ್ತೆರಡರ ಮನಮೋಹಕ ಆದರ್ಶಿನಿ ಈ ಸತಿಯನ್ನು ಒಲ್ಲಳು. ಚಿಕ್ಕಂದಿನಿಂದ ರಾಜಣ್ಣನನ್ನು ತಂದೆಯಂತೆ ಗೌರವಿಸಿ ಅವರ ಅಂಗರಕ್ಷಕನಾಗಿದ್ದ ಅಜಮ್ ಖಾನ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ. ಮರಾವಳಿಯ ಪ್ರಭಾವಶಾಲಿ ಪುರೋಹಿತ, ಪ್ರಭಾಕರಸ್ವಾಮಿ, ಮೂರನೆಯವರು. ಈತ ಉರುಳಿಸಿದ ಒಂದು ದಾಳದಿಂದ ಭುಗಿಲೆದ್ದ ತಿರುವು-ಮುರುವುಗಳೇ ಈ ಕತೆಯ ಹಂದರ.
ಏಳು-ಬೀಳು, ಪ್ರೇಮ-ಕಾಮಗಳ ಸಂಘರ್ಷದಲ್ಲಿ ಹೊರಗಿನ ವೈರಿಗಳನ್ನಲ್ಲದೆ, ತನ್ನೊಳಗಿನ ಅರಿಯನ್ನೂ ಹತ್ತಿಕ್ಕಬೇಕಾದ ಪಣಗಳು. ತನ್ನ ಜೀವನ ದೃಷ್ಟಾಂತವನ್ನು ತಾನೇ ಚಿತ್ರಿಸುವ ದುಸ್ಸಾಹಸಗಳನ್ನು ಕೈಗೊಳ್ಳುತ್ತಾ ನಿಮ್ಮ ಕಥಾನಾಯಕಿಯಾಗುತ್ತಾಳೆ, ಆದರ್ಶಿನಿ. ಪುರುಷ ಪ್ರಧಾನ ಪಥದಲ್ಲಿ ಬೆಳೆಯುತ್ತಾ ತನ್ನ ಗುರಿಯತ್ತ ಸಾಗುತ್ತಾಳೆಯೆ? ಓದಿ ನೋಡಬೇಕು. ಇದೊಂದು ವಿಜಯನಗರ ಸಾಮ್ರಾಜ್ಯದ ಕತೆಯೋ? ಅಲ್ಲವೇ ಅಲ್ಲ.
ಇತಿಹಾಸ ಮತ್ತು ಕಲ್ಪನೆ ತೆಕ್ಕೆಹಾಕಿ ಸಪ್ತ ಪದಿ ಇಟ್ಟು ಮೈ ಪಡೆದಿರುವ ಸುಂದರ ರೋಚಕವಾದ ಕಾದಂಬರಿ ʻಚಂದಿರನಿಲ್ಲದ ಇರುಳುಗಳುʼ. ಕಥೆ ಸಾದ್ಯಂತವಾಗಿ ಓದುಗರ ಕುತೂಹಲ ಕೆರಳಿಸುವ ಪತ್ತೇದಾರಿ ಕಾದಂಬರಿ ರೀತಿಯ ಬೆಳವಣಿಗೆಯಿದೆ. ಅನುವಾದ ದೇಸಿ ಕನ್ನಡದ ಸೊಬಗು ಮತ್ತು ಸೊಗಡಿನಿಂದ ಆಕರ್ಷಕವಾಗಿ ಇದೆ. ಇದು ಎನ್.ಎಸ್. ವಿಶ್ವನಾಥ್ ಅವರ ಮೂಲ ಕೃತಿಯಾಗಿದ್ದು, ರವಿ ಬಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!