ಸುಂದರ ಬಂಗೇರಾ ಅವರ "ಈಗಲ್"
ಮೂಲತಃ ತುಳುನಾಡಿನವರಾಗಿದ್ದು ಕಳೆದ ಅನೇಕ ವರ್ಷಗಳಿಂದ ಮಲೆನಾಡು ಮೂಡಿಗೆರೆಯಲ್ಲಿ ಖಾಯಂ ವಾಸವಾಗಿರುವ ಕವಿ, ಲೇಖಕ ಸುಂದರ ಬಂಗೇರಾ ಅವರು ನಡೆಸುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿದೆ "ಈಗಲ್".
೨೦೦೫ರಲ್ಲಿ ಆರಂಭವಾದ ಎಂಟು ಪುಟಗಳ ಟ್ಯಾಬ್ಲಾಯ್ಡ್ ಮಾದರಿಯ "ಈಗಲ್" ಕಳೆದ ಕೆಲ ತಿಂಗಳ ಹಿಂದಿನವರೆಗೂ ಪ್ರಕಟವಾಗುತ್ತಿತ್ತು. ಸಂಪಾದಕರು, ಪ್ರಕಾಶಕರು, ಮುದ್ರಕರು ಆದ ಬಂಗೇರಾ ಅವರು ಅಸೌಖ್ಯದಲ್ಲಿರುವ ಕಾರಣಕ್ಕೆ ಇತ್ತೀಚೆಗೆ ಪ್ರಕಟವಾಗುತ್ತಿಲ್ಲ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಿಳಗುಳದ ಕೆ. ಎಂ. ಮಾರ್ಗದಲ್ಲಿ ಕಾರ್ಯಾಲಯ ಹೊಂದಿರುವ ಈಗಲ್ ನ ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿಗಳು. ವಿಶೇಷ ವರದಿಗಳ ಜೊತೆಗೆ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಬರಹಗಳಿಗೂ ಆದ್ಯತೆ ನೀಡುತ್ತಾ, ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಮೂಡಿಗೆರೆ ತಾಲೂಕಿನಾದ್ಯಂತ ಪ್ರಸಾರ ಹೊಂದಿದೆ.
ರಾಜಕೀಯ ವಿಮರ್ಶೆ, ವಿಶ್ಲೇಷಣೆ, ಕಾರ್ಮಿಕರ ಸಮಸ್ಯೆಗಳ ಸಹಿತ ವೈವಿಧ್ಯಮಯ ಲೇಖನಗಳು ಈಗಲ್ ನಲ್ಲಿ ಪ್ರಕಟವಾಗುತ್ತಿತ್ತು. ಪತ್ರಿಕೆಯಲ್ಲಿ ಬರೆಯುತ್ತಿದ್ದ ಸಂಪಾದಕೀಯಗಳನ್ನು ಹಳೇಕೋಟೆ ಸುಂದರ ಬಂಗೇರಾ ನವರು ಸಂಕಲನಗೊಳಿಸಿ ಪುಸ್ತಕವಾಗಿಯೂ ಪ್ರಕಟಿಸಿದ್ದರು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!