ವೇದಿಕೆ ಮೇಲೆ ಮಾತಿನ ಸ್ವರ ಏರುತ್ತಲೆ ಇತ್ತು. ಎಲ್ಲರಿಗೂ ಸಮಾನತೆ ಸಿಗಲೇಬೇಕು ಯಾರೋ ಒಬ್ಬನ ಬಳಿ ಶ್ರೀಮಂತಿಕೆ ಏರುತ್ತಾ ಹೋಗಬಾರದು, ದುಡ್ಡು ಸಂಪಾದಿಸಿದವನ ಬಳಿಯಿಂದ ನಿಜವಾದ ಬಡವನ ಬಳಿಗೆ ದುಡ್ಡು ಹೋಗಿ ತಲುಪಬೇಕು, ಪ್ರತಿಯೊಬ್ಬರೂ ಕಷ್ಟಪಟ್ಟು ಮೇಲೆ ಬರುವಂತಾಗಬೇಕು ಮೋಸದಿಂದ ಮಾಡಿದ ದುಡ್ಡು ಸಮಾಜಕ್ಕೆ ವಾಪಸ್ಸು ನೀಡುವಂತಾಗಬೇಕು, ಉಗ್ರ ಮಾತಿಗೆ ಬಂದವರೆಲ್ಲರೂ ಚಪ್ಪಾಳೆಯನ್ನು ಹೊಡೆದರು. ಹಾಗೆ ತಿರುಗಿ ವಾಪಸು ಅವರ ಊರಿನ ಕಡೆಗೆ ಹೋಗಿಬಿಟ್ರು. ಅಲ್ಲಿ ಕಟ್ಟುತ್ತಿದ್ದ ನಾಲ್ಕು ಅಂತಸ್ತಿನ ಅವರ ಮನೆ ಸುಂದರವಾಗಿ ನಿರ್ಮಾಣವಾಗುತ್ತಿತ್ತು, ಲಕ್ಷಗಳಲ್ಲಿದ್ದವರು ವರ್ಷಗಳ ಒಳಗೆ ಕೋಟಿಯಲ್ಲಿ ಮಾತನಾಡುವಂತಾಗಿತ್ತು. ದೊಡ್ಡ ದೊಡ್ಡ ಕಾರುಗಳು ಅವರ ಮನೆಯಂಗಳದಲ್ಲಿ ಸಾಲಾಗಿ ನಿಂತುಬಿಟ್ಟಿದ್ದವು. ಅವರ ಜೊತೆಗೆ ಮನೆಯವರು ಕುಟುಂಬದವರೆಲ್ಲರೂ ಕೂಡ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದರು. ಮತ್ತೆ ಮುಂದಿನ ಊರಲ್ಲಿ ಸಮಾನತೆಯ ಕುರಿತು ಭಾಷಣ ಮಾಡುವುದಕ್ಕೆ ತಮ್ಮ ಕೊಠಡಿಯಲ್ಲಿ ಎಸಿ ಹಾಕಿ ಬರೆಯುವುದಕ್ಕೆ ಪ್ರಾರಂಭ ಮಾಡಿದ್ರು.

-ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ