ನಿನಗೊಂದು ಜಾಗದ ಬಗ್ಗೆ ಹೇಳುತ್ತೇನೆ ಆ ಸ್ಥಳದಲ್ಲಿ ಬದುಕಿನ ಎಲ್ಲಾ ಭಾವಗಳು ಜೊತೆಯಾಗುತ್ತವೆ. ಹಾಗೆ ಮೂರು ತಿರುವುಗಳನ್ನ ದಾಟಿ ದೊಡ್ಡದಾದ ಮೈದಾನ, ಪಕ್ಕದಲ್ಲಿ ನದಿ ಆ ಸ್ಥಳಗಳನ್ನು ಸುಡುವುದಕ್ಕೆಂತಲೇ ಪ್ರಸಿದ್ಧಿಯಾಗಿದೆ. ಅಲ್ಲಿಗೆ ಅನಾಥ ಹೆಣಗಳು ಬರುತ್ತವೆ, ಜೊತೆಗಿದ್ದ ಹೆಣಗಳು ಬರುತ್ತವೆ, ಜೊತೆ ಇದ್ದು ದೂರಾದ ಹೆಣಗಳು ಬರುತ್ತವೆ. ಸತ್ತ ಹೆಣಗಳಿಗೆ ತಮ್ಮ ಸಂಸ್ಕಾರದ ಬಗ್ಗೆ ಗೊತ್ತಿಲ್ಲ. ಕಳೆದುಕೊಂಡವರು ನೋವಿನ‌ ಕಣ್ಣೀರು ಇಳಿಸುತ್ತಾರೆ, ಸತ್ತವರು ಸ್ವರ್ಗ ಸೇರಿದ ಖುಷಿಗೆ ಸಂಭ್ರಮದ ನೃತ್ಯಗಳಾಗುತ್ತವೆ, ಇನ್ನು ಕೆಲವರು ನದಿಯಲ್ಲಿ ಮಿಂದೆದ್ದು ಶುದ್ಧರಾಗಿ ಹೊಸ ಬದುಕಿನ ಕಡೆಗೆ ಹೊರಟು ಹೋಗುತ್ತಾರೆ, ನೋವೆಲ್ಲವನ್ನ ಮಾಯ ಮಾಡಿಕೊಂಡ ಕೆಲವೊಂದು ದೇಹಗಳು ಅಗ್ನಿಯಲ್ಲಿ ಉರಿಯುತ್ತಾ ಹೊಗೆಯಾಗಿ ಆಕಾಶಕ್ಕೆ ಏರುತ್ತವೆ ಹೊಸ ಬದುಕಿನ ಜನನವಾಗುತ್ತದೆ ನೋವಿದೆ ಖುಷಿ ಇದೆ ಸಂಭ್ರಮವಿದೆ ಉತ್ಸಾಹವಿದೆ ಬದುಕಿನ ಎಲ್ಲದಿಕ್ಕುಗಳು ಒಂದು ಕಡೆಗೆ ಸೇರಿ ಬದುಕನ್ನ ಅರ್ಥೈಸುತ್ತಿದೆ. ಬದುಕೇನು ಅಂತ ಎಲ್ಲರಿಗೂ ತಿಳಿಸುತ್ತಿದೆ. ಹಾಗಾಗಿ ಒಂದು ಸಲ ಅಲ್ಲಿ ದಾಟಿಬಿಡು, ನಿನ್ನ ಬದುಕು ಇನ್ನೊಂದು ದಿಸೆಯನ್ನ ಪಡೆದುಕೊಳ್ಳುತ್ತದೆ. ಹೀಗೆಂದ ಬೈರಾಗಿ ಕಣ್ಣ ಮುಂದೆಯೇ ದಾಟಿಹೋದ ನನಗೆ ಆ ಸ್ಥಳಕ್ಕೆ ಹೋಗಲು ಭಯವಾಗುತ್ತಿತ್ತು.

-ಧೀರಜ್ ಬೆಳ್ಳಾರೆ                                 

ಚಿತ್ರ ಕೃಪೆ: ಇಂಟರ್ನೆಟ್ ತಾಣ