ಆಸೆಯು ಮೂಗಿನ ತುದಿಯಲ್ಲಿತ್ತು. ದೇಹವು ಬಿಸಿಯೇರಿದಾಗ ಕಣ್ಣಿಗೆ ಕಂಡದ್ದು ಕಿವಿಗೆ ಕೇಳಿದ್ದೆಲ್ಲವೂ ಸತ್ಯ ಅನ್ನುವ ಸ್ಥಿತಿ ಅವಳದ್ದಾಗಿತ್ತು. ಆತನ ಪೂರ್ವಾಪರಗಳ ಬಗ್ಗೆ ಯೋಚನೆ ಇರಲಿಲ್ಲ, ಆತನ ಬಣ್ಣದ ಮಾತಿಗೆ ಮರುಳಾಗಿ ಕತ್ತಲೆಯ ಕೋಣೆಯೊಳಗೆ ಆತನಿಗೆ ದೇಹವನ್ನು ಅರ್ಪಿಸಿದ್ದಳು. ಆತನೋ ಮನಸೋ ಇಚ್ಚೆ ತಿಂದು ಬಿಟ್ಟಿದ್ದ. ಅದರ ಫಲವಾಗಿಯೇ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವ ಸೂಚನೆಯೂ ಸಿಕ್ಕಿತು. ಬದುಕು ತುಂಬಾ ದೊಡ್ಡದಿದೆ ನಮ್ಮ ಕನಸನ್ನ ಸಾಕಾರ ಮಾಡಿಕೊಳ್ಳುವುದಕ್ಕೆ ಹೊಟ್ಟೆಯೊಳಗಿನ ಮಗು ಅಡೆತಡೆಯಾಗುತ್ತದೆ ಅನ್ನುವ ಅವನ‌ ಮಾತನ್ನು ನಂಬಿ ಅದನ್ನ ಸಾಯಿಸಿಬಿಟ್ಟಿದ್ದಳು. ಮತ್ತೆ ಆತನೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುವ ಭರವಸೆ ಅವಳಿಗಿತ್ತು. ಆದರೆ ಆತ ಮೌನಿಯಾಗಿದ್ದ ಆಕೆಯನ್ನು ಮರೆತು ಹೊಸತೊಂದು ದೇಹಕ್ಕಾಗಿ ಕತ್ತಲೆ ಕೋಣೆಯ ಹುಡುಕಾಟದಲ್ಲಿದ್ದ. ಆಕೆ ಬೇಡಿಕೊಂಡರೂ ಆತ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ತನ್ನ ದೇಹವನ್ನ ಮತ್ತೆ ಬೇರೊಬ್ಬರಿಗೆ ಒಪ್ಪಿಸುವ ಯೋಚನೆಯು ಅವಳಲ್ಲಿ ಇರಲಿಲ್ಲ. ಹಾಗಾಗಿ ದೇವರ ಹತ್ತಿರಕ್ಕೆ ಓಡಿಬಿಟ್ಟಿದ್ದಳು. ಎಲ್ಲರಲ್ಲೂ ಕ್ಷಮೆಯನ್ನು ಕೋರಿ ಉದ್ದ ಪತ್ರವನ್ನು ಬರೆದು ಕಣ್ಣೀರಿಳಿಸಿ ಉಸಿರು ನಿಲ್ಲಿಸಿದ್ದಳು. ಮನೆ ಅನಾಥವಾಗಿತ್ತು ತಪ್ಪು ನಿರ್ಧಾರ ಬದುಕನ್ನ ಕೊನೆಗಾಣಿಸಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ