ಬನ್ನಿ ಬನ್ನಿ, ನಾವು ಖಂಡಿತ ಮೆರವಣಿಗೆ ಮಾಡುತ್ತೇವೆ. ನಿಮ್ಮ ಸಾಧನೆಯನ್ನು ಕೊಂಡಾಡುತ್ತೇವೆ. ಟಿವಿಗಳಲ್ಲಿ ಮೊಬೈಲ್ ಗಳಲ್ಲಿ ನಿಮ್ಮ ಬಗ್ಗೆ ಜಾಹಿರಾತುಗಳನ್ನ ಲಗತ್ತಿಸುತ್ತೇವೆ, ನೀವು ಬಂದಿಳಿದಲ್ಲಿಂದ ಮೈದಾನದವರೆಗೂ ನಿಮ್ಮನ್ನ ದೊಡ್ಡ ಗಾಡಿಯಲ್ಲಿ ಮೆರವಣಿಗೆ ಮಾಡಿ ಜೈಕಾರ ಹಾಕಿ ಹೂಗಳನ್ನ ನಿಮ್ಮ ಮೇಲೆ ಎರಚತ್ತೇವೆ. ದೊಡ್ಡ ದೊಡ್ಡ ಶಾಲುಗಳನ್ನ ನಿಮ್ಮ ಮೇಲೆ ಹಾಕುತ್ತೇವೆ. ಫಲಕಗಳನ್ನು ಕೊಡುತ್ತೇವೆ ದೊಡ್ಡ ಬಿರುದು ಬಾವಲಿಗಳನ್ನು ದಾಖಲಿಸುತ್ತೇವೆ. ನಿಮ್ಮ ಸಾಧನೆ ನಮ್ಮ ಸಾಧನೆ ಎಂಬಂತೆ ಬಿಂಬಿಸುತ್ತೇವೆ. ಹೀಗೆ ಸಾಧಕರನ್ನ ಗುರುತಿಸುವಂತಹ ದೊಡ್ಡ ಕೆಲಸ ಮಾಡ್ತಾ ಇದ್ರು. ಈ ಸಾಧನೆ ಮುಗಿತು ಮನೆ ಕಡೆ ಹೊರಟಾಗ ತಿಂಗಳಂತ್ಯಕ್ಕೆ ಬೇಕಾಗುವ ಖರ್ಚಿಗೆ ಹಣವಿಲ್ಲದೆ ಹಣ ಹೊಂದಾಣಿಕೆಯ ಬಗ್ಗೆ ಆ ಸಾಧಕರು ಯೋಚಿಸ್ತಾ ಇದ್ರು, ಮಾಡಿರುವ ಸಾಲಗಳನ್ನು ತೀರಿಸುವುದು ಹೇಗೆ ಅನ್ನುವ ಚಿಂತೆಯಲ್ಲಿದ್ದರು .ತನ್ನ ಸಂಭ್ರಮಕ್ಕಾದ ಖರ್ಚುಗಳನ್ನು ಕೈಯಲ್ಲಿ ನೀಡಿದ್ದಿದ್ದರೆ ಮನೆಯ ಬದುಕು ಸುಧಾರಿಸುತ್ತಿತ್ತು ಅನ್ನೋದು ಅವರ ಆಸೆ. ಇಷ್ಟು ದಿನ ಸಣ್ಣಪುಟ್ಟ ವೇದಿಕೆಗಳಲ್ಲಿ ಸಾಧನೆಗಳನ್ನ ಮಾಡುತ್ತಿದ್ದಾಗ ಯಾರೂ ಗುರುತಿಸಿರಲಿಲ್ಲ ,ಯಾರೋ ಒಬ್ಬರು ಹಣ ಸಹಾಯಕ್ಕೂ ಬರಲಿಲ್ಲ .ಸಾಧನೆ ದೊಡ್ಡದಾದಾಗ ಮುಖ ಪರಿಚಯವಾದಾಗ  ಎಲ್ಲರೂ ಜೊತೆ ನಿಂತರು. ನಾಳೆಯಿಂದ ಹೊಸ ಕೆಲಸವನ್ನು ಹುಡುಕಿಕೊಳ್ಳಲೇಬೇಕು ಮನೆ ನಡಿಬೇಕಲ್ವಾ ಸಾಧಕರು ಕೆಲಸದ ಅನ್ವೇಷಣೆಯಲ್ಲಿ ಹೊರಟುಬಿಟ್ರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ