ಅಲ್ಲೊಂದು ಕಿಟಕಿಯ ಹಿಂದೆ ಪ್ರೀತಿಯೊಂದು ಹುಟ್ಟಿಕೊಂಡಿದೆ. ಮಾತುಗಳು ತುಟಿಯಿಂದ ಹೊರಗೆ ಬರುತ್ತಿಲ್ಲ, ಗೋಡೆಗಳಿಗೆ ಕೇಳಿದರೂ ಊರು ಹೊತ್ತಿ ಉರಿಯಬಹುದು. ಕಿಟಕಿಯನ್ನ ದಾಟಿ ಎದುರು ಮನೆಯ ರಸ್ತೆಯನ್ನು ಹಾದಿ ಮುಂದಿನ ಮನೆಗೆ ಸುದ್ದಿ ತಲುಪಲು ಸಾದ್ಯವಾಗುತ್ತಿಲ್ಲ. ಎದುರು ಮನೆಯ ಹೃದಯಕ್ಕೆ ವಿಷಯವೇ ತಿಳಿದಿಲ್ಲ. ಆ ಮನಸಿನ ಒಳಗೂ ಹೂವು ಅರಳಿತ್ತು. ಆದರೆ ಅದಕ್ಕೆ‌ ನೀರೆರೆಯುವ ಸೂಚನೆ ಸಿಗದ ಕಾರಣ ಆ ಹೂವು ಬಾಡಿ ಹೋಗಿತ್ತು. ಎಲ್ಲೂ ಮಾತಿಗೆ ಅವಕಾಶ ಸಿಕ್ಕಿರಲಿಲ್ಲ. ಮಾತು ಆಡಿದ್ದರೆ ಪ್ರೀತಿಯ ಹೂವನ್ನ ಅರಳಿಸಬಹುದಿತ್ತು. ಗೋಡೆ, ಕಿಟಕಿ ಬಾಗಿಲು ಎಲ್ಲಾ ಕಡೆಯಲ್ಲಿ ತಡೆಗಳು ಎದ್ದು ನಿಂತ ಕಾರಣ ಮನಸ್ಸುಗಳು ಮಾಗಲೇ ಇಲ್ಲ. ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿದ್ದ ಕಾರಣ ರಸ್ತೆ ದಾಟುವುದೇ ಕಷ್ಟವಾಗಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ