‘ನಾನಲ್ಲ ಮತ್ತು ಇತರ ಕತೆಗಳು’ ಕೃತಿಯು ಪಿ. ಲಂಕೇಶ್ ಅವರ ಕಥಾ ಸಂಕಲನವಾಗಿದೆ. ಇಲ್ಲಿ ಲೇಖಕ ತನ್ನ ಅರಿವಿಗೆ ಬಂದಿರುವಂತಹ ವಿಚಾರಗಳನ್ನು ಕತಾರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಕತೆಯು ಕೂಡ ಭಿನ್ನವಾಗಿದ್ದು ಹೊಸತನವನ್ನು ರೂಪಿಸುವಂತಿದೆ- ’ನಾನಲ್ಲ’ ಎನ್ನುವುದೇ ಇಲ್ಲಿನ ಪ್ರಮುಖ ವಿಚಾರವಾಗಿದ್ದು ಲೇಖಕ ಇದರ ಸುತ್ತಲೇ ಕತೆಯನ್ನು ಕಟ್ಟಿರುವುದನ್ನು ಕಾಣಬಹುದು.
ಪಿ. ಲಂಕೇಶ್ ಅವರ "ನಾನಲ್ಲ" ಎಂಬ ಕಥಾ ಸಂಗ್ರಹವು ೧೯೭೦ರಲ್ಲಿ ಬಿಡುಗಡೆಯಾದದ್ದು. ಹತ್ತು ಕಥೆಗಳನ್ನು ಹೊಂದಿರುವ ಕೃತಿ, ಅದರ ಅನನ್ಯ ಗದ್ಯ ರೂಪ ಮತ್ತು ನವೀನ ಕಥನ ವಿಧಾನದಿಂದ ಗಮನಾರ್ಹವಾಗಿದೆ. ಅಸಹಾಯಕತೆ, ಉದಾಸೀನತೆ, ಆತಂಕ, ಜವಾಬ್ದಾರಿಗಳು, ಹಸಿವು, ಬಡತನ, ಶೋಷಣೆ, ಅಸಹ್ಯ ಮತ್ತು ಇತರ ಸಮಾಜದ ಸಮಸ್ಯೆಗಳನ್ನು ಇದು ಚಿತ್ರಿಸುತ್ತದೆ. ಇದರಲ್ಲಿ "ರೊಟ್ಟಿ" ಕಥೆಯು ವ್ಯಾಪಕ ಮನ್ನಣೆ ಪಡೆದಿದೆ. ಹಸಿವಿನಿಂದ ರೊಟ್ಟಿ ಕದ್ದ ಚೋರನನ್ನು ಎದುರಿಸಲು ಹೋದ ಮಹಿಳೆ ಸ್ವತಃ ಸಂಕಷ್ಟಕ್ಕೆ ಸಿಲುಕುತ್ತಾಳೆ. ಆತನ ಮುಖ ನೋಡಿ ರೊಟ್ಟಿ ನೀಡಬೇಕೆಂದು ಮನಸ್ಸು ಹೇಳುತ್ತಿರುವಾಗಲೇ ಅವನು ಕದ್ದು ತಪ್ಪಿಸಿಕೊಳ್ಳುತ್ತಾನೆ. ಅಲ್ಲಿಗೆ ಬರುವ ಪೊಲೀಸ್ ಚೋರನನ್ನು ಬಂಧಿಸಿ, ಆಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಸುರಕ್ಷತೆಯ ಹೆಸರಿನಲ್ಲಿ ಆಕೆಯನ್ನು ಶೋಷಣೆಗೆ ಒಳಪಡಿಸುತ್ತಾನೆ. ಕಳ್ಳ ಮತ್ತು ಮಹಿಳೆ ಇಬ್ಬರೂ ಪರಿಸ್ಥಿತಿಯ ಗೊಂಬೆಗಳಾಗಿ ಬದಲಾಗುತ್ತಾರೆ.
"ಆಕ್ಟೋಪಸ್" ಕಥೆಯು ಈಗಲೂ ಸಾಕಷ್ಟು ಪ್ರಸ್ತುತವಾಗಿರುವ ಕಥೆ. ಕೆಲವು ವಿದ್ಯಾವಂತರು ಮತ್ತು ಜ್ಞಾನಿಗಳು ತಮ್ಮ ಮೇಲಧಿಕಾರಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ವಿದ್ಯೆಯು ಯಾವಾಗಲೂ ಸೂಕ್ತ ಹುದ್ದೆಗಳನ್ನು ತರುವುದಿಲ್ಲ ಎಂಬುದು ಇದರ ಮುಖ್ಯ ಸಂದೇಶ. "ಒಂದು ಘಟನೆ" ಕಥೆಯಲ್ಲಿ ಲೇಖಕನು ತನ್ನ ಪ್ರಕಟಿತ ಲೇಖನಕ್ಕೆ ಸಿಗಬೇಕಾದ ಗೌರವಧನವನ್ನು ಪಡೆಯಲು ಪ್ರಯತ್ನಿಸುತ್ತಾನೆಯಾದರೂ ವಿಫಲನಾಗುತ್ತಾನೆ. ಅಂತಿಮವಾಗಿ, ಹುಚ್ಚು ಬರಹಗಳು ಕೇವಲ ಪತ್ರಿಕೆಗಳ ಖಾಲಿ ಸ್ಥಳಗಳನ್ನು ತುಂಬುವುದಕ್ಕಷ್ಟೇ ಸೀಮಿತ ಎಂದು ನಿರ್ಧರಿಸುತ್ತಾನೆ.
ತನ್ನದೇ ದೇಹದ ವಾಸನೆಯಿಂದ ಬೇಸರಗೊಂಡ ವ್ಯಕ್ತಿಯೊಬ್ಬ ಇತರರನ್ನು ವಾಸನೆಯಿಂದ ಕಾಡುವುದು ತಪ್ಪು ಎಂದು ಭಾವಿಸಿ, ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. "ವಾಸನೆ" ಕಥೆಯಲ್ಲಿ ವಾಸನೆಯನ್ನು ವಿವಿಧ ವಸ್ತುಗಳು ಮತ್ತು ಸನ್ನಿವೇಶಗಳೊಂದಿಗೆ ಹೋಲಿಸಿ ಚಿತ್ರಿಸಲಾಗಿದೆ. "ಸೆಪ್ಟೆಂಬರ್ ನಲ್ಲಿ ಪ್ರಥಮ ರಾತ್ರಿ" ಕಥೆಯಲ್ಲಿ ಅರಿಯದೆ ವೇಶ್ಯೆಯೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಯು ಪೊಲೀಸರ ಹೊಡೆತಕ್ಕೆ ತುತ್ತಾಗುತ್ತಾನೆ. ಮಳೆ, ಗಾಳಿ, ಚಳಿ, ಮಹಿಳೆಯ ಭೇಟಿ ಮತ್ತು ಯೌವನದ ಆಸೆಗಳಿಗೆ ಮಣಿದು ಅವನು ತೊಂದರೆಗೆ ಸಿಲುಕುತ್ತಾನೆ.
"ನಾನಲ್ಲ" ಕಥೆಯು ಬಹುಮುಖಿ ಆಯಾಮಗಳನ್ನು ಹೊಂದಿದ್ದು, ಹೆಣ್ಣಿನ ವಿವರಣೆಯೊಂದಿಗೆ ಆರಂಭವಾಗುತ್ತದೆ. ಆ ಹೆಣ್ಣು ಯಾರದು? ಅದು ಹೇಗೆ ಅಲ್ಲಿತ್ತು? ಏನು ಸಂಭವಿಸಿತು? ಯಾರು ಕೊಂದರು? ಯಾರು ಸಹಾಯ ಮಾಡುತ್ತಿಲ್ಲ? ಇಂತಹ ಹಲವು ಪ್ರಶ್ನೆಗಳೊಂದಿಗೆ ಲೇಖಕನು ಉತ್ತರ ಹುಡುಕುತ್ತಾ ಹೋಗಿ, ಅದು ಕೇವಲ ತನಗೆ ಮಾತ್ರ ಕಾಣುತ್ತಿರಬಹುದು ಅಥವಾ ಭ್ರಮೆಯೇ ಇರಬಹುದು ಎಂಬುದರಲ್ಲಿ ಕಥೆಯು ಮುಗಿಯುತ್ತದೆ. ಸುಮಾರು ೯೦ ಪುಟಗಳ ಈ ಪುಟ್ಟ ಕಥಾ ಸಂಕಲನವನ್ನು ಒಂದೇ ಗುಟುಕಿಗೆ ಓದಿ ಮುಗಿಸಬಹುದಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!