ಅವನ ಹೆಗಲು ದಿನದಿಂದ ದಿನಕ್ಕೆ ಭಾರವಾಗ್ತಾಯಿದೆ. ಆತನ ತಲೆಯ ಮೇಲೆ ಅಷ್ಟೇನು ಹೆಚ್ಚು ಭಾರವನ್ನು ಹೊತ್ತವನಲ್ಲ ಆದರೆ ಜವಾಬ್ದಾರಿಯ ಭಾರ ಹೆಚ್ಚಾದಾಗ ಆತನ ಹೆಗಲು ಕುಸಿಯುವುದಕ್ಕೆ ಆರಂಭವಾಗಿದೆ. ಪುಟ್ಟದಾಗಿದ್ದ ಗೂಡನ್ನ ಗಟ್ಟಿಯಾಗಿಸುವುದಕ್ಕೆ ನಿರ್ಧಾರ ಕೈಗೊಂಡ ಹೆಗಲು ಭಾರವಾಗಲು ಆರಂಭವಾಯಿತು. ಅಕ್ಕಂದಿರ ಮದುವೆ ಮುಗಿಯಿತು ಹೆಗಲು ನಿಧಾನವಾಗಿ ಕೆಳಗೆ ಹೋಯ್ತು. ಆತನ ಕನಸುಗಳನ್ನು ಎಲ್ಲಾ ಗಂಟು ಕಟ್ಟಿ ಬದಿಗಿಟ್ಟು ತಲೆ ಕೆಳಗೆ ಹಾಕಿ ದುಡಿಯೋದಕ್ಕೆ ಪ್ರಾರಂಭಿಸಿದ. ನಿದ್ದೆ ಊಟ ಎಲ್ಲವನ್ನು ಬಿಟ್ಟು ದುಡಿಮೆಯೊಂದನ್ನೇ ನಂಬಿಕೊಂಡು ಹೆಜ್ಜೆ ಇಟ್ಟ. ಎಲ್ಲರಿಗೂ ಎಲ್ಲವೂ ಚೆನ್ನಾಗಿತ್ತು ಆತನ ಒಳಗಿನ ಬೇಗುದಿ ಆತನೊಬ್ಬನಲ್ಲಿ ಪ್ರತಿದಿನ ರಾತ್ರಿ ಮಾತನಾಡುತ್ತಿತ್ತು. ನಿದ್ದೆ ಅನ್ನೋದು ಅವನ ಕೋಣೆಯೊಳಗೆ ಪ್ರವೇಶಿಸದೆ ವರ್ಷಗಳೇ ದಾಟಿ ಹೋಗಿದ್ದವು. ಆತನ ಬದುಕಿನ ಕನಸುಗಳೆಲ್ಲವೂ ಮನೆಯ ಹೊರಗಡೆಯೇ ನಿಂತ್ತಿದ್ದವು. ಕನಸುಗಳು ಆಗಾಗ ಮನೆಯ ಕದವನ್ನು ತಟ್ಟಿ ಇವನ ಮನಸ್ಸು ಒಳಗೆ ಬಂದು ಕುಳಿತು ನಾವು ನಿನ್ನ ಜೊತೆ ಬದುಕುತ್ತೇವೆ ಅಂತ ಅಂದುಕೊಂಡರು ಕೂಡ ಆತನಿಗೆ ಅವುಗಳನ್ನು ತನ್ನೊಳಗೆ ತನ್ನ ಜೊತೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಸ್ಥಿತಿ...ಬದುಕು ಸಾಗಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ