ಅವನು ಮತ್ತೆ ಮತ್ತೆ ಎಣಿಸುತ್ತಿದ್ದ. ಎಷ್ಟು ಎಣಿಸಿದರೂ ಮಗಳಿಗೆ ಪ್ರೀತಿಯಿಂದ ಕೊಡಿಸಬೇಕೆಂದಿದ್ದ ಬಟ್ಟೆಯ ಬೆಲೆಗೆ ಹತ್ತಿರ ತಲುಪಲು ಸಾದ್ಯವಾಗುತ್ತಿಲ್ಲ. ಅವಳಿಗೆ ಇಷ್ಟವಾದದ್ದನ್ನ ಖರೀದಿಸಲೇ ಬೇಕೆಂದು ಹಲವು ವಾರಗಳಿಂದ ರಾತ್ರಿ ಹಗಲೆನ್ನದೆ ಆಟದಲ್ಲಿ ‌ದುಡಿಯುತ್ತಿದ್ದ. ಖರ್ಚು ಕಳೆದು ಸಾಲ ತೀರಿಸಿ ವಾರದಂತ್ಯವಾಗುವಾಗ ಅವಳ ಆಸೆಯ ಬಟ್ಟೆಗೆ ದುಡ್ಡು ಹೊಂದಾಣಿಕೆ ಆಗಲೇ ಇಲ್ಲ. ಮುಂದಿನ ವಾರದಲ್ಲಾದರೂ ಕೊಡಿಸೋಣವೆಂದು ಮನೆಗೆ ತಲುಪಿದಾಗ ಕಾಯುತ್ತಿದ್ದ ಮಗಳು ಅಪ್ಪನಿಗೆ ಊಟ ಬಡಿಸಿ ಮಲಗೋದ್ದಕ್ಕೆ ಚಾಪೆ ನೀಡಿ, ಪಕ್ಕದಲ್ಲಿ ಕುಳಿತು ಲಾಲಿ ಹಾಡಿದಳು. ಅವಳಿಗೆ ಅಪ್ಪನ ಅವಿರತ ದುಡಿಮೆ ಕಂಡಿತ್ತು. ನಿಧಾನವಾಗಿ ಮಗಳ ಮಾತು ಅಪ್ಪನ‌ ಕಿವಿಗೆ ಬಿತ್ತು  ಅಪ್ಪಾ ನನ್ನ ಆಸೆಗಳೆಲ್ಲಾ ಗಟ್ಟಿಯಾಗಿ ಹಾಗೇ ಉಳಿದಿರುತ್ತದೆ, ನನ್ನ ಕನಸು ನೀನಪ್ಪ ಆರೋಗ್ಯ ಕೆಡಿಸಿಕೊಂಡು ದುಡಿಬೇಡ. ನಿನಗಿಷ್ಟವಾದದ್ದನ್ನ ಇದ್ದ ಹಣದಲ್ಲಿ‌ ನೀಡು ನಾನು ಅರ್ಥಮಾಡಿಕೊಳ್ತೇನೆ. ಬಿಟ್ಟು ಹೋಗುವುದ್ದಕ್ಕೆ ನಾನು ಅಮ್ಮ ಅಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ