‘ಸಂಜೆಯ ವೇಳೆಯ ಕಥೆಗಳು’ ಮನಸ್ಸಿಗೆ ಮುದನೀಡುವ, ಹಿತವಾದ ಅನುಭವವನ್ನು ನೀಡುವ ಸಣ್ಣ ಕಥೆಗಳಾಗಿವೆ. ಇವು ಸಾಮಾನ್ಯವಾಗಿ ದಿನದ ಕೆಲಸದ ನಂತರದ ವಿಶ್ರಾಂತಿ, ಪ್ರಕೃತಿಯ ಸೌಂದರ್ಯ, ಹಳೆಯ ನೆನಪುಗಳು ಅಥವಾ ಮಧುರವಾದ ಪ್ರೇಮ ಸಂದರ್ಭಗಳನ್ನು ವರ್ಣಿಸುತ್ತವೆ. ಈ ಕಥೆಗಳು ಓದುಗರಿಗೆ ಶಾಂತಿಯುತ ಸಂಜೆಯ ಅನುಭವವನ್ನು ನೀಡುವ ಗುರಿ ಹೊಂದಿವೆ. ಖ್ಯಾತ ಬರಹಗಾರ ರಸ್ಕಿನ್ ಬಾಂಡ್ ಅವರ ಈ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಶ್ಯಾಮಸುಂದರ ಹಾಗೂ ಅನ್ನಪೂರ್ಣ.
ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ ಹಾಗೂ ವಿಮರ್ಶಕರಾದ ಪ್ರೊ. ಎಲ್.ಎಸ್.ಶೇಷಗಿರಿ ರಾವ್. ಅವರು “ಮಕ್ಕಳ ಮನಸ್ಸನ್ನು ಅರಳಿಸುವ ಶಕ್ತಿಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ಬೆಳೆಯುವ ಮಗು ಸುತ್ತಲಿನ ಜಗತ್ತನ್ನು ಖುಷಿಯಾಗಿ ಪರಿಚಯ ಮಾಡಿಕೊಳ್ಳುವ ಸಾಧನಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ತನ್ನ ತಂದೆ, ತಾಯಿ, ಹತ್ತಿರದವರು, ಪ್ರಾಣಿಗಳು, ಸೂರ್ಯ, ಚಂದ್ರ, ನಕ್ಷತ್ರ, ಹೂವು, ಭಾಷೆ ಎಲ್ಲ ಈ ಸಾಹಿತ್ಯದಿಂದ ಮಗುವಿಗೆ ಹತ್ತಿರವಾಗುತ್ತಾರೆ. ಸಂತೋಷದ ಮೂಲಕ ಮಗುವಿನ ಮನಸ್ಸನ್ನು ಅರಳಿಸುವ ಸಾಹಿತ್ಯವು ಮಗುವಿನ ವಯಸ್ಸು, ಕಲ್ಪನೆ, ಕಲಿಯುವ ರೀತಿ, ಎಲ್ಲಕ್ಕೆ ಪಡುವ ಹೊಂದಿಕೊಳ್ಳಬೇಕು. ಆದುದರಿಂದಲೇ ಮಕ್ಕಳ ಸಾಹಿತ್ಯವು, ಸಾಹಿತ್ಯದ ಒಂದು ವಿಶಿಷ್ಟ ರೂಪವಾಗಿದೆ. ಇಂತಹ ಸಾಹಿತ್ಯದ ಒಂದು ಸಮರ್ಥ, ಸೊಗಸಾದ ಕೃತಿ ಇಲ್ಲಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಪ್ನ ಬುಕ್ ಹೌಸ್ ನವರು ಮಕ್ಕಳಲ್ಲಿ ಓದಿನ ಅಭಿರುಚಿ ಮೂಡಿಸುವ ದೃಷ್ಟಿಯಿಂದ ‘ಚಿಣ್ಣರ ಮಾಲೆ’ ಅಭಿಯಾನದಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ರಸ್ಕಿನ್ ಬಾಂಡ್ ಅವರ ಈ ಪುಟ್ಟ ಮಕ್ಕಳ ಪುಸ್ತಕದಲ್ಲಿ ‘ಗಿರಿಯ ಮೇಲಿನ ಸರೋವರ’, ರಾಜಕುಮಾರ ಷಂಷೇರ್ ಜಂಗ್ ಮತ್ತು ಸೇಠಜೀ ಮತ್ತು ರೈತ ಎನ್ನುವ ಮೂರು ಕಥೆಗಳಿವೆ. ಸುಮಾರು ೫೦ ಪುಟಗಳ ಈ ಪುಸ್ತಕವನ್ನು ಸಣ್ಣ ಮಕ್ಕಳು ಸರಾಗವಾಗಿ ಓದಲು ಅನುಕೂಲವಾಗುವಂತೆ ದೊಡ್ದ ದೊಡ್ದ ಅಕ್ಷರಗಳಲ್ಲಿ ಮುದ್ರಿಸಲಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!