ಭಾವನೆಲೆ

“ಬದಲಾವಣೆ ಜಗದ ನಿಯಮ ಎಂದುಕೊಂಡರೂ ಕುಟುಂಬ ವ್ಯವಸ್ಥೆಯನ್ನು ಹಿಡಿದಿಡುವ ಭಾವನಾತ್ಮಕ ಸಂಬಂಧಗಳು ಇರದೆ ಹೋಗುವುದು ಇತ್ತೀಚಿನ ದುರಂತ ಕಾದಂಬರಿಯ ಶೀರ್ಷಿಕೆಯೇ ಹೇಳುವಂತೆ ಕೌಟುಂಬಿಕ ವ್ಯವಸ್ಥೆ ಮತ್ತು ಅದರೊಳಗಿರುವವರ ಭಾವನೆಗಳನ್ನೇ ಕೇಂದ್ರೀಕರಿಸಿ ಬರೆದಿರುವ ಕಾದಂಬರಿ 'ಭಾವನೆ' ಇಂತಹ ಸೂಕ್ತ ಎಳೆಗಳನ್ನೇ ಹೆಣೆದು ಕತೆಯಾಗಿಸುವುದರಲ್ಲಿ ಸಿರಿಮೂರ್ತಿಯವರು ನಿಪುಣರು. ದೇಶದ ಸಂಸ್ಕೃತಿಯು ಆಧುನಿಕತೆಯ ಹೆಸರಿನಲ್ಲಿ ಸವಕಲಾಗುತ್ತಿರುವುದು, ಹೊಸ ಪೀಳಿಗೆಯ ಸಾಗರದಾಚೆಗಿನ ಸೀಮೋಲ್ಲಂಘನ, ವಿದೇಶಿ ಸಂಸ್ಕೃತಿಯ ಪರಿಚಯ, ಭಾರತೀಯ ಸಂಸ್ಕೃತಿಯ ಪರಂಪರೆ, ಹಿರಿಮೆಯ ಪರಳ ವಿವರಣೆ, ಮನ ಮುಟ್ಟುವ ಪ್ರಸ್ತುತಿ ಕಾದಂಬರಿಯ ಭಾಗವಾಗುತ್ತಾ ಹೋಗುತ್ತದೆ. ಅಂತ್ಯದ ಬಗ್ಗೆ ಕುತೂಹಲ ಕಾಳಿಸಿಕೊಂಡೇ ಸಾಗುವ ಕತೆ ಎಲ್ಲವೂ ಕಾದಂಬರಿಯನ್ನು ಆಪ್ತವಾಗಿಸುತ್ತದೆ. ಎಲ್ಲರೂ ಓದಬೇಕಾದ ಕಾದಂಬರಿ.” ಎಂದು ಬೆನ್ನುಡಿಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಗೀತಾ ಕುಂದಾಪುರ.

‘ಭಾವನೆಲೆ’ ಕಾದಂಬರಿಗೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಕಾದಂಬರಿಕಾರ ಡಾ. ಕೆ ಎನ್ ಗಣೇಶಯ್ಯ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಸಾಲುಗಳು ಇಲ್ಲಿವೆ…

“ಸೃಷ್ಟಿ ಮತ್ತು ವಿನಾಶ, ಇವೆರಡೂ ಕಾಲದ ಚಲನೆಯ ಸುತ್ತ ಬೆಸುಗೆ ಹಾಕಿಕೊಂಡಿರುವ ಸುರುಳಿಗಳು. ಸದಾ ಅದರ ಜೊತೆಗೇ ಸಾಗುವ ಅನಿವಾರ್ಯತೆಗಳು. ಅವೆರಡರ ಸುಳಿವೇ ಇಲ್ಲದಿದ್ದರೆ ಸ್ತಬ್ಧವಾಗಿ ಸಾಗುವ ಜಗತ್ತಿನ ಲಯದಲ್ಲಿ ಚೇತನವೇ ಕಾಣದಾಗುತ್ತದೆ; ಕಾಲವೂ ನಿಶ್ಚಲವಾದಂತೆ ಕಂಡು ಮರಣಮೌನವೇ ಎಲ್ಲೆಡೆಯೂ ಸುಳಿದಾಡುತ್ತದೆ. ಹಾಗಾಗಿ ಸೃಷ್ಟಿ ಮತ್ತು ವಿನಾಶಗಳು ಕಾಲದ ಚಲನೆಯನ್ನು ಸೂಚಿಸುವ ಹೆಗ್ಗುರುತುಗಳು; ಜಗತ್ತಿಗೆ ಚೈತನ್ಯ ತುಂಬುವ ವೈರುಧ್ಯ ಶಕ್ತಿಗಳು. ಇದು ಕೇವಲ ಭೌತಿಕ ಜಗತ್ತಿನ ಸೃಷ್ಟಿಗೆ ಮತ್ತು ವಿನಾಶಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಾನವನ ನಾಗರಿಕತೆಗಳ ಉದ್ಭವ ಮತ್ತು ಸಾವು, ಸಂಸ್ಕೃತಿಯ ಹುಟ್ಟು ಮತ್ತು ಅಳಿವು ಎಲ್ಲವೂ ಕಾಲದೊಂದಿಗೆ ಬೆರೆತು ಸಾಗುತ್ತಿರುವ ಸತ್ಯಗಳು. ಹಾಗೆಯೇ 'ಪರಂಪರೆ'ಗಳು ಮತ್ತು ಅವುಗಳಲ್ಲಿನ ಪಲ್ಲಟಗಳು ಕೂಡ. ಎಲ್ಲವೂ ಕಾಲದ ಅನಿವಾರ್ಯತೆಗಳು ಎನ್ನುವುದು ಕಾಲಾತೀತವಾದ ಸತ್ಯ! ಈ ಅನಂತ ಸತ್ಯದ ಅನಾವರಣವೇ 'ಭಾವನೆಲೆ'ಯ ಕೇಂದ್ರವಸ್ತು ಮತ್ತು ಉದ್ದೇಶ.

ಯಾವುದೇ ಸಮುದಾಯದ ಸಂಸ್ಕೃತಿ ಹಳೆಯದಾದಂತೆಲ್ಲ ಕಾಲದ ಪ್ರವಾಹದ ಬಡಿತಕ್ಕೆ, ಅದರ ಸುಳಿಗೆ ಸಿಕ್ಕಿ ಛಿದ್ರವಾಗುತ್ತದೆ. ಬೆನ್ನಲ್ಲಿಯೇ ಹೊಸತು ಹುಟ್ಟುತ್ತದೆ. ಕಾಲ ಕಳೆದಂತೆ ಅದೂ ಹಳೆಯದಾಗಿ ಕೊಚ್ಚಿಹೋಗುತ್ತದೆ. ಮತ್ತೆ ಹೊಸದರ ಉದ್ಭವ, ಸಂಸ್ಕೃತಿಯ ಈ ನಿರಂತರತೆಯ ಒಂದು ವಿಶೇಷ ಎಂದರೆ 'ಹೊಸ'ದು 'ಹಳೆ'ಯದಾಗಿ ಸಾಯುವ ಮತ್ತು 'ಹಳೆ'ಯದೇ 'ಹೊಸ'ದಾಗಿ ಮತ್ತೆ ಹುಟ್ಟು ಪಡೆಯುವ ಕ್ರಿಯೆ ಚಕ್ರದಂತೆ ಮರುಕಳಿಸುತ್ತಲೇ ಇರುತ್ತದೆ. ಈ ಪುನರಾವರ್ತಿತ ಚಕ್ರವು ರಭಸವಾಗಿ ತಿರುಗಿ ಎಬ್ಬಿಸುವ ಸುಂಟರಗಾಳಿಯಲ್ಲಿ ಯಃಕಶ್ಚಿತ್ ಮಾನವರ ವೈಯುಕ್ತಿಕ ಜೀವನಗಳು ಹೇಗೆ ತರಗೆಲೆಗಳಂತೆ ಗಿರನೆ ಸುತ್ತಿ ಪೂರ್ಣಿಸುತ್ತವೆ ಎನ್ನುವುದನ್ನು ಕಥೆಯ ಮೂಲಕ ಹೆಣೆಯುವ ಪ್ರಯತ್ನ 'ಭಾವನೆಲೆ'. ಇಲ್ಲಿ ಪೂರ್ವ ಮತ್ತು ಪಶ್ಚಿಮದ ಎರಡೂ ಸಂಸ್ಕೃತಿಗಳನ್ನು ಎದುರೆದುರಿಗೆ ತರಲಾಗಿದೆ. ಒಂದಕ್ಕೆ ಮತ್ತೊಂದನ್ನು ಕನ್ನಡಿಯಾಗಿಸಲಾಗಿದೆ. ಎರಡೂ ಸಂಸ್ಕೃತಿಗಳು ತಮ್ಮ ಮೂರು ತಲೆಮಾರುಗಳ ಪರಂಪರೆಗಳಲ್ಲಿ ಕಾಣುವ ಪಲ್ಲಟಗಳನ್ನು ವೀಕ್ಷಿಸುವ, ಅದರಿಂದ ಕಲಿಯುವ, ಆ ಮೂಲಕ ಒಂದರಿಂದ ಮತ್ತೊಂದನ್ನು ತಿದ್ದುವ, ತಿದ್ದಿ(ಸಿ)ಕೊಳ್ಳುವ ಕ್ರಿಯೆಯ ನಿರೂಪಣೆಯೇ ಈ 'ಭಾವನೆಲೆ'ಯ ಕಥಾಹಂದರ. 

ಸುತ್ತಲಿನ ಮೌನ ಗಾಳಿಯಲ್ಲಿ, ಸರಳ ಪ್ರಾಣಾಯಾಮದಿಂದ ಸಿಗಬಹುದಾದ ಸುಖವನ್ನು ಅನುಭವಿಸುವ ಕಾತುರ ತೋರದೆ, ಆ ಶಾಂತಿಯನ್ನು ತಿರಸ್ಕರಿಸಿ, ಎತ್ತಲಿಂದಲೋ ಬೀಸುವ ಗಾಳಿಯಲ್ಲಿ ಮಾತ್ರವೇ ಸುಂದರ ಉಸಿರಾಟ ಸಾಧ್ಯ ಎಂಬ ಹುಸಿನಂಬಿಕೆಗೆ ಜೋತುಬಿದ್ದು, ತಮ್ಮ ಜೀವನಗಳನ್ನು ಭ್ರಮಾಸುಖಕ್ಕೆ ಒತ್ತೆಯಿಡುತ್ತಿರುವ ಯುವಜನಾಂಗವನ್ನು, ಯುವಜನಾಂಗವನ್ನು, ಆ ಕನಸಿನ ಲೋಕದಿಂದ ಹೊರಗೆಳೆಯಲು, ಅವರದೇ ಭಾಷೆಯಲ್ಲಿ ಎಚ್ಚರಿಸಲು ಮಾಡಿರುವ ಪ್ರಯತ್ನದಂತೆ 'ಭಾವನೆಲೆ' ಕಂಡರೂ, ಕಥೆಯ ವ್ಯಾಕರಣದಲ್ಲಿ 'ನಮ್ಮ ಸಂಸ್ಕೃತಿಯೇ ಭವ್ಯ, ಸತ್ಯ, ಸುಂದರ' ಎಂದು ಬೋಧಿಸುವ ಕುರುಡುತನ ಕಾಣದು. ನಮ್ಮದಲ್ಲದ ಜೀವನಕ್ರಮಗಳಲ್ಲಿನ ಟೊಳ್ಳು ಮಾತ್ರ ಹುಡುಕುವ ಸಂಕುಚಿತತೆ ಕಾಣದು. ಬದಲಿಗೆ, ಪೂರ್ವ ಅಥವಾ ಪಶ್ಚಿಮ, ಯಾವ ಸಂಸ್ಕೃತಿಯೇ ಆಗಲಿ ಆತ್ಮಗಳ ನಡುವಿನ ಅನುಸಂಧಾನದಿಂದ ಮತ್ತು ಪರಸ್ಪರ ಪ್ರೀತಿ, ಗೌರವಗಳಿಂದ ಮಾತ್ರವೇ ಸುಖ ನೆಲೆಯಾಗಲು, ಜೀವನ ಸ್ವರ್ಗವಾಗಲು ಸಾಧ್ಯ ಎಂಬ ನೇರ ಕಿವಿಮಾತನ್ನು ಸರಳವಾಗಿ ಹೇಳಲಾಗಿದೆ. ಧನಾತ್ಮಕ ಮತ್ತು ಋಣಾತ್ಮಕ ಗುಣಗಳು ಯಾವುದೇ ಸಂಸ್ಕೃತಿಗೆ ಅಥವಾ ಪ್ರಾಂತ್ಯಕ್ಕೆ ಮೀಸಲಾದ ವಿಶೇಷತೆಗಳಲ್ಲ; ಬದಲಿಗೆ ಅವು ಎಲ್ಲೆಡೆಯೂ ಹರಡಿರುವ ಮಾನವಸಹಜವಾದ ಹಾಗೂ ಬದಲಾಗುತ್ತಲೇ ಇರುವ ದ್ರವ್ಯಗಳು ಎಂಬ ತತ್ವ ಬಿಂಬಿಸುವ ಕಥೆ 'ಭಾವನೆಲೆ'

ಎರಡು ಸಂಸ್ಕೃತಿಗಳ ಜೀವನ ಕ್ರಮಗಳನ್ನು ಮತ್ತು ಮೂರು ತಲೆಮಾರಿನ ಆಶಾಭಾವಗಳನ್ನು ಆಯಾ ಕಾಲಘಟ್ಟದ ಮತ್ತು ಆಯಾ ಪ್ರಾಂತ್ಯಗಳ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕಟ್ಟಿಕೊಡುವುದು ದೊಡ್ಡಪ್ರಯಾಸವೇ ಸರಿ. ಅದನ್ನು ಸಫಲವಾಗಿ ನಿಭಾಯಿಸಿ, ಅದರಂತೆ ಪಾತ್ರಗಳನ್ನು ಮತ್ತು ಅವರ ಜೀವನ ರೀತಿಗಳನ್ನು ಕಟ್ಟಿಕೊಟ್ಟು, ಎರಡೂ ವಿಭಿನ್ನ ಸಂಸ್ಕೃತಿಗಳ ನಡುವೆ ಸೇತುವೆಯಾಗುವಂತೆ ಎರಡು ವಿಶೇಷ ಪಾತ್ರಗಳನ್ನು ಸೃಷ್ಟಿಸಿ, ಆ ಮೂಲಕ ಕಥೆಗೆ ಸೂಕ್ತ ನೆಲೆ ನಿರ್ಮಿಸಿರುವುದು ಲೇಖಕರ ಜಾಣೆಗೆ ಸಾಕ್ಷಿ. ಮೂರು ತಲೆಮಾರಿನ (ಒಟ್ಟಿಗೆ ನಾಲ್ಕು ತಲೆಮಾರು) ಜೀವನವನ್ನು ಒಟ್ಟಿಗೆ ತರುವ ಪ್ರಯತ್ನದಲ್ಲಿ ಕಥೆಯ ಓಘವು ಕೆಲವೊಮ್ಮೆ ಕಾಲವನ್ನೂ ಮೀರಿದ ರಭಸದಂತೆ ಕಂಡರೂ ಆಭಾಸವಾಗದಂತೆ ಕಾಪಾಡಿಕೊಳ್ಳಲಾಗಿದೆ ಮತ್ತು ಓದುಗನನ್ನು ಸೆರೆಹಿಡಿಯುವಲ್ಲಿ ಸಫಲವಾಗಿದೆ.

ತಲೆಮಾರುಗಳ ನಡುವೆ ಕ್ಷೀಣಗೊಳ್ಳುತ್ತಿರುವ ಪರಂಪರೆಗಳ ಬಗ್ಗೆ ತಮಗಿರುವ ವಿಶೇಷ ಕಾಳಜಿಯನ್ನು ಸಿರಿಮೂರ್ತಿ ಕಾಸರವಳ್ಳಿಯವರು ತಮ್ಮ ಹಿಂದಿನ ಕಾದಂಬರಿಯಂತೆಯೇ ಇಲ್ಲಿಯೂ ಬಿಡಿಸಿಟ್ಟಿದ್ದಾರೆ ಹಾಗೂ ಆ ಕಾಳಜಿಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಗೆದ್ದಿದ್ದಾರೆ ಕೂಡ.”