ಆ ಟೊಮ್ಯಾಟೊ ಗಿಡಕ್ಕೆ ಬದುಕುವ ಯಾವ ಖಾತ್ರಿಯೂ ಇರಲಿಲ್ಲ. ಮನೆಯವರು ಬಿಸಾಕಿದ ಸ್ಥಳದಲ್ಲಿ ಬೇರನ್ನ ಇಳಿಸಿ ಇದ್ದ ಮಣ್ಣಿನಲ್ಲಿ ನೀರಿನ ತೇವಾಂಶವನ್ನು ಪಡೆದುಕೊಂಡು ಬೆಳೆಯುದಕ್ಕೆ ಪ್ರಾರಂಭವಾಯಿತು. ಸಣ್ಣದಾಗಿ ಬೆಳೆದಾಗ ಯಾರು ಅದನ್ನ ಗಮನಿಸಲೇ ಇಲ್ಲ. ಹಾಗೇ ನಿಧಾನವಾಗಿ ಬೆಳೆಯುತ್ತಾ ಆಗಾಗ ಬಿದ್ದ ಹನಿ ನೀರುಗಳನ್ನು ಪಡೆದುಕೊಂಡು ಬೇರನ್ನ ಎಲ್ಲೆಲ್ಲಿಗೋ ಕಳಿಸಿ ಗೊಬ್ಬರಗಳನ್ನ ಪಡೆದು ಗಿಡವನ್ನ ಸೊಂಪಾಗಿ ನಿಲ್ಲುವಂತೆ ಮಾಡಿತು. ಯಾವಾಗ ಸಣ್ಣದಾಗಿ ಫಲ ಕೊಡುವುದಕ್ಕೆ ಆರಂಭವಾಯಿತೋ ಆಗ ಮನೆಯವರ ಗಮನ ಟೊಮೇಟೊ ಗಿಡದ ಹತ್ತಿರ ಬಂತು. ಈ ಟೊಮೆಟೊ ಗಿಡವನ್ನು ಇನ್ನು ತುಂಬಾ ಅದ್ಭುತವಾಗಿ ಬೆಳೆಸಬೇಕು ಅನ್ನುವ ಕಾರಣಕ್ಕೆ ಆ ಸ್ಥಳದಿಂದ ಕಿತ್ತು ಅವರೇ ತಯಾರಿಸಿದ ದೊಡ್ಡದಾದ ಬುಟ್ಟಿಯಲ್ಲಿ ತುಂಬಿಸಿಟ್ಟ ಮಣ್ಣಿನೊಳಗೆ ಬೀರು ಬಿಡಲು ತಯಾರಿ ನಡೆಸಿದರು. ತಾನು ಸ್ವತಂತ್ರವಾಗಿ ನಿಂತ ಜಾಗದಲ್ಲಿ ಗಟ್ಟಿಯಾಗಿ ನಿಂತ ಗಿಡಕ್ಕೆ ಬದುಕುವ ರೀತಿ ಗೊತ್ತಿತ್ತು ಆದರೆ ನನಗೆ ಪರಿಚಯವಿಲ್ಲದ ಸ್ಥಳದಲ್ಲಿ ಬೇರನ್ನ ಇಳಿಸಿ  ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಅಷ್ಟು ಸುಲಭವಿರಲಿಲ್ಲ. ನೀರು ಗೊಬ್ಬರಗಳು ಯಥೇಚ್ಛವಾಗಿ ಸಿಕ್ಕರೂ ಸ್ವಾತಂತ್ರ್ಯವಿಲ್ಲ, ಸ್ವಂತಿಕೆಯಿಲ್ಲದೆ ಹೆಚ್ಚು ಬಾಳ್ವಿಕೆ ಬರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನೆಲದಲ್ಲಿದ್ದರೆ ಇನ್ನೊಂದಷ್ಟು ಹೆಚ್ಚು ದಿನ ಬದುಕುವ ಸಾಧ್ಯತೆ ಏನೋ ಇತ್ತು. ಆದರೆ ಸ್ಥಳ ಬದಲಾವಣೆ ಆದ ಕಾರಣ ಆದಷ್ಟು ಬೇಗ ನನ್ನ ಉಸಿರನ್ನು ನಿಲ್ಲಿಸಲು ಕಾಯುತ್ತಿತ್ತು... ಫಲ ಕೊಟ್ಟಾಗ ಗಮನ, ಸ್ವಂತ‌ ನೆಲದಲ್ಲಿ ಮಾತ್ರ ಬದುಕು ಶಾಶ್ವತ ಅನ್ನೋದು ಅರ್ಥವಾಗಿರಬೇಕು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ