ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ "ವಿಪ್ರನುಡಿ"

ಬೆಂಗಳೂರು ಬನಶಂಕರಿಯ ಗಾಯತ್ರಿ ಭವನದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ತ್ರಿಮತಸ್ಥ ಬ್ರಾಹ್ಮಣರ ಸಂಘಟನೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ದ ಮುಖವಾಣಿ ಮಾಸಪತ್ರಿಕೆಯಾಗಿದೆ "ವಿಪ್ರನುಡಿ".

ಮಹಾಸಭಾದ ಅಧ್ಯಕ್ಷರಾಗಿರುವವರು "ವಿಪ್ರನುಡಿ"ಯ ಪ್ರಕಾಶಕರು ಮತ್ತು ಮಾಲಕರಾಗಿರುತ್ತಾರೆ. ಹಾಗಾಗಿ ಪತ್ರಿಕೆಯ ಪ್ರಕಾಶಕರು ಮತ್ತು ಮಾಲಕರು ಬದಲಾಗುತ್ತಿರುತ್ತಾರೆ. ಡಾ. ಬಿ. ಎನ್. ವಿ. ಸುಬ್ರಹ್ಮಣ್ಯ, ಅಶೋಕ ಹಾರನಹಳ್ಳಿ ಮುಂತಾದವರು ವಿವಿಧ ಅವಧಿಗಳಲ್ಲಿ ಅಧ್ಯಕ್ಷರಾಗಿದ್ದರು. ಬೆಂಗಳೂರು ಹನುಮಂತನಗರದಲ್ಲಿರುವ ಪರಿಮಳಾ ಮುದ್ರಣಾಲಯದಲ್ಲಿ ಮುದ್ರಣವಾಗುವ ವಿಪ್ರನುಡಿಯ  ಸಂಪಾದಕರು ಡಾ. ಎಂ. ಕೆ. ಶ್ರೀಧರ್. ಇವರಿಗಿಂತ ಮೊದಲು ಡಾ. ಎಂ. ಸೂರ್ಯ ಪ್ರಸಾದ್ ಸಂಪಾದಕರಾಗಿದ್ದರು. ಎಂ. ಕೆ. ಭಾಸ್ಕರ ರಾವ್ ಹಾಗೂ ಡಾ. ಎಂ. ಸೂರ್ಯಪ್ರಸಾದ್ ಗೌರವ ಸಲಹೆಗಾರರು.

ಮೂವತ್ತೇಳು ವರ್ಷಗಳ ಹಿಂದೆ ಆರಂಭಗೊಂಡ "ವಿಪ್ರನುಡಿ", ಪ್ರಸ್ತುತ ಮೂವತ್ತೆಂಟು ಪುಟಗಳಲ್ಲಿ ಹೊರಬರುತ್ತಿದೆ. ೨೦೧೬ - ೨೦೨೨ರ ನಡುವೆ ಒಮ್ಮೆ ಪತ್ರಿಕೆ ಸ್ಥಗಿತಗೊಂಡಿತ್ತು. ಸ್ಥಗಿತಗೊಂಡಿದ್ದ ಪತ್ರಿಕೆ ಮತ್ತೆ ಆರಂಭಗೊಂಡಿದ್ದು ೨೦೨೨, ಫೆಬ್ರವರಿ ೧೧ರಂದು (ಸಂಪುಟ ೩೪, ಸಂಚಿಕೆ ೯ / ಡಿಸೆಂಬರ್ ೨೦೨೨). ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿ. ೨೦೨೨ರ ಮೊದಲು ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಯಾಗಿತ್ತು.

ವಿಪ್ರನುಡಿ, ಅಖಿಲ ಕರ್ನಾಟಕ ಬ್ರಾಹ್ನಣ ಮಹಾಸಭಾ (ತ್ರಿಮತಸ್ಥ ಬ್ರಾಹ್ಮಣರ ಸಂಘಟನೆ)ದ ಮುಖವಾಣಿಯಾದುದರಿಂದ, ಪತ್ರಿಕೆಯಲ್ಲಿ ಸಂಘಟನೆಯ ಕೇಂದ್ರ ಸಮಿತಿ ಮತ್ತು ಜಿಲ್ಲಾ, ತಾಲೂಕು ಘಟಕಗಳು ಆಯೋಜಿಸಿದ ಕಾರ್ಯಕ್ರಮಗಳ ವರದಿಗಳು, ಸಾಧಕರ ಸಾಧನೆಯ ವರದಿಗಳು, ಸಂಘಟನೆಯ ಯೋಜನೆಗಳ ಕುರಿತಾಗಿರುವ ಮಾಹಿತಿಗಳು ಮೊದಲ ಆದ್ಯತೆಯಲ್ಲಿ ಪ್ರಕಟವಾಗುತ್ತವೆ. ಉಳಿದಂತೆ ಸಣ್ಣ ಪುಟ್ಟ ಒಂದೆರಡು ಲೇಖನಗಳೂ ಇರುತ್ತವೆ.

~ ಶ್ರೀರಾಮ ದಿವಾಣ