ಸೊಳ್ಳೆಗಳು ಹುಡುಕಾಟ ಆರಂಭಿಸಿದೆ, ಇಷ್ಟು ದಿನದವರೆಗೆ ಬದುಕಿದ್ದ ರೀತಿ ಒಂದು, ಆದರೆ ಈಗ ಮನುಷ್ಯ ಹೆಚ್ಚು ಬುದ್ಧಿವಂತನಾಗಿದ್ದಾನೆ. ರಾಸಾಯನಿಕಗಳನ್ನ ಬಳಸಿ ತಮ್ಮನ್ನ ಮನೆಯಿಂದ ಓಡಿಸುವುದಕ್ಕೆ ಪ್ರಯತ್ನಪಡ್ತಾ ಇದ್ದಾನೆ. ತಲೆ ತಿರುಗುವ ಹೊಗೆ, ಜೀವ ತಿನ್ನುವ ದ್ರಾವಣಗಳು ಹೀಗೆ ನಮ್ಮ ಸಾವನ್ನ ಸಂಭ್ರಮಿಸಲು ಕಾದು ಕುಳಿತಿರುವ ಮನುಷ್ಯನ ಎದುರು ನಾವು ಬದುಕಿ ತೋರಿಸಬೇಕು ಅದಕ್ಕಾಗಿ ತರಬೇತಿ ಕೇಂದ್ರ ಒಂದನ್ನ ಶುರು ಮಾಡಲು ಎಲ್ಲ ಸೊಳ್ಳೆಗಳು ನಿರ್ಧರಿಸಿವೆ. ಅಲ್ಲಿ ಯಾವುದೇ ರೀತಿಯ ಶುಲ್ಕವಿಲ್ಲ ಆದರೆ ಬದುಕಲು ಸಾಧ್ಯವಾಗುವ ಎಲ್ಲ ವಿದ್ಯೆಗಳನ್ನು ಕಲಿಸಿ ಸಾಯುತ್ತಿರುವವರನ್ನೆಲ್ಲಾ ಬದುಕಿಸಿ ಜಗತ್ತನ್ನ ತಮ್ಮ ವಶಕ್ಕೆ ಪಡೆದುಕೊಳ್ಳುವ ತೀರ್ಮಾನ ಆಗಿದೆ. ಹಾಗಾಗಿ ಸೊಳ್ಳೆಗಳ ಕ್ರಾಂತಿ ಶುಭವಾಗಲಿದೆ. ಬೇಸಿಗೆಕಾಲ ಮುಗಿದು ಮಳೆಗಾಲ ಶುರುವಾಗುವ ಒಳಗೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಿಮ್ಮ ಸುತ್ತಮುತ್ತ ಸೊಳ್ಳೆಗಳ ಶಬ್ದ ಕೇಳಲು ಶುರುವಾದರೆ ಅಲ್ಲೇ ಅವುಗಳನ್ನು ಹೊಸಕಿ ಹಾಕಿಬಿಡಿ ಇಲ್ಲವಾದರೆ ಅವುಗಳ ಹೊಸ ತಂಡ ರಚನೆಯಾಗಿ ಎಲ್ಲರಿಗೂ ಸಮಸ್ಯೆ ಉಂಟು ಮಾಡಬಹುದು. ಮುಂದೆ ಏನಾಗುತ್ತೆ ಅನ್ನುವ ಯೋಚನೆಯಲ್ಲಿದ್ದಾಗ ಎಚ್ಚರವಾಗಿ ಬಿಟ್ಟಿತ್ತು...

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ