ಶ್ರೀ ಕಳ್ಳಂ ರಾಮಿ ರೆಡ್ಡಿಯವರು ಕಂಡುಕೊಂಡ ‘ಧ್ಯಾನ ಜೀವನದ ರಹಸ್ಯ’ ವನ್ನು ಮಾನಸ ಸರೋವರ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಧ್ಯಾನ ಕಸ್ತೂರಿ ಪತ್ರಿಕೆಯ ಸಂಪಾದಕರಾದ ಡಾ ಎ ಸತ್ಯನಾರಾಯಣ ಇವರು ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ. ಅದರಲ್ಲಿ ಅವರು “ಕಳ್ಳಂ ರಾಮಿರೆಡ್ಡಿಯವರ ಈ 'ಮಾನಸ ಸರೋವರ' ಕೃತಿಯು ಒಂದು ಪ್ರೇರಣಾದಾಯಕ ಪುಸ್ತಕವಾಗಿದೆ. ಪರಂಪರೆ, ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕತೆಯನ್ನು ಹುಡುಕುತ್ತಾ, ಎಲ್ಲವನ್ನೂ ಅಲ್ಲಗಳೆಯುವ ಪ್ರವೃತ್ತಿ ಇದ್ದ ಕಳ್ಳಂ ರಾಮಿರೆಡ್ಡಿ ಒಬ್ಬ ಕಟ್ಟಾ ಕಮ್ಯೂನಿಸ್ಟ್ ಆಗಿದ್ದವರು.
ಅವರು ಆಕಸ್ಮಿಕವಾಗಿ ಆಧ್ಯಾತ್ಮಮಾರ್ಗಕ್ಕೆ ಬಂದು, ಗುರುಗಳ ಮಾರ್ಗದರ್ಶನದಲ್ಲಿ ಒಬ್ಬ ಸಾಧಕನಾಗುವ ತಮ್ಮ ಸ್ವಾನುಭವ ಕಥಾನಕವನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಚಿಕ್ಕಂದಿನಲ್ಲಿ ಅನುಭವಿಸಿದ ಎಲ್ಲ ಕಷ್ಟ-ನಷ್ಟಗಳು, ವಿಶೇಷವಾಗಿ ಬೇರೆಯವರು ನೀಡಿದ ಕಿರುಕುಳವನ್ನು ತಾಳ್ಮೆಯಿಂದ ಸಹಿಸಿದ ಇವರು, 'ಆನಾಪಾನಸತಿ' ಧ್ಯಾನದ ನಿತ್ಯ ಅನುಷ್ಠಾನದಿಂದ ಆದ ತಮ್ಮ ಜೀವನ ರೂಪಾಂತರದ ಕುರಿತು ಇಲ್ಲಿ ಬರೆದಿದ್ದಾರೆ.
'ತಾಳ್ಮೆ' ಮತ್ತು 'ಸಹಿಷ್ಣುತೆ' ಎಂಬ ಎರಡು ಅಸ್ತ್ರಗಳು ತಮ್ಮ ಜೀವನದಲ್ಲಿ ತಂದ ಬದಲಾವಣೆಗಳನ್ನು ಅವರು ಇಲ್ಲಿ ವಿವರಿಸಿದ್ದಾರೆ. ಅವರು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿದ ಬಗೆಯನ್ನು ವಿವರಿಸುತ್ತಾ, ಹಿರಿಯ ವಯಸ್ಸು ಎಂಬುದು ಸಾಧನೆಗೆ ಅಡ್ಡಿಯಾಗುವುದಿಲ್ಲ. ನಮ್ಮಲ್ಲಿ ದೃಢವಾದ ಮನೋಬಲವನ್ನು ಸಂಸ್ಥಾಪಿಸಿಕೊಳ್ಳುವುದು ಮುಖ್ಯ ಎನ್ನುತ್ತಾರೆ. ಕಳ್ಳಂ ರಾಮಿರೆಡ್ಡಿಯವರ ಸಾಧನೆ ಮತ್ತು ಅನುಭವಗಳು ನಮ್ಮ ಯುವಜನಾಂಗಕ್ಕೆ ಒಂದು ಮಾದರಿ ಎನಿಸುತ್ತದೆ. ಮೊದಲಿಗೆ 'ಧ್ಯಾನ' ಅವರಲ್ಲಿ ಸಂಭವಿಸಿದ ಕ್ಷಣಗಳನ್ನು ದಾಖಲಿಸಿ. ಇಡೀ ಕೃತಿಯ ಉದ್ದಕ್ಕೂ ತಮ್ಮ ಆಧ್ಯಾತ್ಮ ಪಯಣದ ಮೈಲಿಗಲ್ಲುಗಳನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಈ ಕೃತಿಯು ಪಿ.ಎಸ್.ಎಸ್.ಎಂ. ನಲ್ಲಿ ಸ್ವಾಧ್ಯಾಯಕ್ಕೊಂದು ಉತ್ತಮ ಕೊಡುಗೆಯಾಗಿದೆ. ಈ ಕೃತಿಯನ್ನು ಹೊರತರುವಲ್ಲಿ ಪರಿಶ್ರಮಿಸಿರುವ ಗಂಗಾವತಿಯ ಶ್ರೀಮತಿ ಲಲಿತಾ ನಾರಾಯಣ ವಗ್ಗಾ ಇವರ ಪ್ರಯತ್ನ ಶ್ಲಾಘನೀಯ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂಲ ಲೇಖಕರಾದ ಕಳ್ಳಂ ರಾಮಿರೆಡ್ಡಿ ಇವರು ಮುನ್ನುಡಿಯಲ್ಲಿ ಈ ಕೃತಿಯನ್ನು ಹೊರ ತರಲು ಕಾರಣವಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ “ನನ್ನ ಚಿಕ್ಕ ಮಗ ಕಿಶೋರ್: "ಅಪ್ಪಾ ! ನಿಮ್ಮ ಜೀವನ ಚರಿತ್ರೆಯ ಬಗ್ಗೆ ಪುಸ್ತಕ ಬರೆಯಿರಿ. ನಮ್ಮನ್ನು ಈ ಮಟ್ಟಕ್ಕೆ ತರಲು ನೀವು ಎಷ್ಟು ಕಷ್ಟಪಟ್ಟಿದ್ದೀರಿ ಎಂದು ನಮಗೆ ತಿಳಿದಿದೆ. ಆದರೆ, ಮಕ್ಕಳಿಗೂ ನಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ತಿಳಿಸಬೇಕು'' ಎಂದಾಗ, ನಾನು, ಮುಗುಳ್ನಕ್ಕು ಸುಮ್ಮನಾಗಿದ್ದೆ.
೨೮ನೇ ಆಗಸ್ಟ್ ೨೦೧೪ ರಂದು ಗುಂಟೂರು. IFSS ಸಭೆಯಲ್ಲಿ ನಾನು ಪತ್ರೀಜಿ (ಬ್ರಹ್ಮಶ್ರೀ ಪತ್ರೀಜಿ) ಅವರನ್ನು ಭೇಟಿಯಾದಾಗ, ನಾನು ನಿನಗೆ ಒಂದು ಕೆಲಸ ಹೇಳುತ್ತೇನೆ: ಮಾಡಬೇಕು. "ಮೂರು ತಿಂಗಳು ಕಾಯುತ್ತೇನೆ" ಎಂದರು. ನಾನು ಮುಗುಳ್ಳಗುತ್ತಾ, "ಸಾಧ್ಯವಾದರೆ ಮಾಡುತ್ತೇನೆ ಸಾರ್” ಎಂದೆ.
"ನಿನಗೆ ಸಾಧ್ಯ ಎಂದು ನನಗೆ ಗೊತ್ತು. ನಿನ್ನ ಅನುಭವಗಳ ಆಧಾರದ ಮೇಲೆ ನಿನ್ನ ಆತ್ಮ ಚರಿತ್ರೆ ಬರೆಯಬೇಕು. ನಿನ್ನ ಜೀವನ, ಲೌಕಿಕ ಜೀವನ ಹೇಗಿದೆ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ನೀವು ಹೊಂದಿರುವ ಅನುಭವಗಳು ಹೇಗಿದೆ ಎಂದು ವಿವರವಾಗಿ ಬರೆಯಿರಿ" ಎಂದಾಗ, ಆಶ್ಚರ್ಯದಿಂದ ಕಂಗಾಲಾದೆನು. ಪುಸ್ತಕ ಬರೆಯುವ ಅನುಭವವಿಲ್ಲದೆ ನಾನು ಹೇಗೆ ಬರೆಯಬಲ್ಲೆ?" ಎಂದುಕೊಳ್ಳುತ್ತಾ ಗುರುಗಳ ಅಪ್ಪಣೆಯನ್ನು ಅಲ್ಲಗಳೆಯಲಾರೆ ಎಂದುಕೊಂಡು ಸುಮ್ಮನಾದೆನು. ಮೂರು ತಿಂಗಳು ಪೆನ್ನು ಪೇಪರ್ ಹಿಡಿಯಲಿಲ್ಲ. ಈ ನಡುವೆ ಪತ್ರಿಸಾರ್ ಭೇಟಿಯಾದಾಗಲೆಲ್ಲ "ಎಲ್ಲಿಯವರೆಗೆ ಬಂದಿದೆ ಪುಸ್ತಕ" ಎಂದು ಕೇಳುತ್ತಿದ್ದರು. ಇನ್ನು ಯೋಚಿಸಿದರೆ ಪ್ರಯೋಜನವಿಲ್ಲ ಎಂದು... ಪ್ರಶಾಂತವಾದ ವಾತಾವರಣದಲ್ಲಿರುವ ಪಿಡುಗುರಾಜ್ ಎಂಬ ಊರಿನಲ್ಲಿರುವ "ಕೃಷ್ಣ ಕಿಶೋರ್ ” ಧ್ಯಾನ ಮಂದಿರಕ್ಕೆ ಹೋಗಿ ಕುಳಿತು ಬರೆಯಲು ಆರಂಭಿಸಿದೆನು. ಈ ಅವಕಾಶ ನೀಡಿದ ಶ್ರೀ ಶ್ರೀನಿವಾಸರಾವ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ, ಅಲ್ಲಿ ಬರೆದದ್ದು ಕೇವಲ ಒಂದು ದಿನ ಮಾತ್ರ.
ಹಾಗೆಯೇ ಪಾಂಡಿಚೇರಿಯ ಅರವಿಂದ ಆಶ್ರಮಕ್ಕೆ ಪ್ರತಿ ವರ್ಷ ಕುಟುಂಬ ಸಮೇತರಾಗಿ ಹೋಗುವುದು ಅಭ್ಯಾಸ. "ಈ ವರ್ಷವೂ ಅಲ್ಲಿಗೆ ಹೋಗಿ ಈ ಪುಸ್ತಕವನ್ನು ಪೂರ್ಣಗೊಳಿಸಬೇಕು" ಎನ್ನುವ ಸಂಕಲ್ಪದಿಂದ ನಾನು ನನ್ನ ಶ್ರೀಮತಿ ಹೊರಟೆವು. ಶ್ರೀ ಮಾತಾ ಅರವಿಂದರ ದಿವ್ಯ ಆಶೀರ್ವಾದಗಳೊಂದಿಗೆ “ಮಾತೃ ಮಂದಿರ” ದಲ್ಲಿ ಜಪ ಮಾಡಿ ಈ ಕಾರ್ಯವನ್ನು ಪೂರ್ಣಗೊಳಿಸಿದ್ದೇನೆ!
ಈ ಪುಸ್ತಕ ಶ್ರೀ ರಾಮನವಮಿಯಂದು ಬ್ರಹ್ಮರ್ಷಿ ಪಿತಾಮಹ ಪತ್ರೀಜಿಯವರ ಕೈಯಿಂದ ವಿಶಾಖಪಟ್ಟಣಂ ಜಿಲ್ಲೆಯ 'ವಿ.ಮೂಡುಗ” ದಲ್ಲಿರುವ "ವಿಶ್ವಶಾಂತಿ ಮಹಾ ಪಿರಮಿಡ್"ನಲ್ಲಿ ಅನಾವರಣಗೊಂಡಿದ್ದು, ನನ್ನ ಜೀವನದಲ್ಲಿ ಮಹದಾನಂದ ನೀಡಿದ ಘಟನೆ. ನನ್ನ ಜೀವನದಲ್ಲಿ ನಡೆದ ಘಟನೆಗಳು ಮತ್ತು ಅವುಗಳಿಂದ ಬಂದ ಅನುಭವಗಳು ಹಾಗೂ ಮತ್ತು ನಾನು ಓದಿದ ಪುಸ್ತಕಗಳ ಮೂಲಕ ನಾನು ಸಾಕಷ್ಟು ಜ್ಞಾನವನ್ನು ಪಡೆದುಕೊಂಡಿದ್ದೇನೆ. ಮುಖ್ಯವಾಗಿ ಶ್ರೀರಾಂ ರವರ “ಜೀವನ ಬೃಂದಾವನಂ” ನನ್ನ ಮೇಲೆ ವಿಶೇಷವಾಗಿ ಪ್ರಭಾವ ಬೀರಿತು. ಅದರಲ್ಲಿ ಅಡಕವಾಗಿರುವ ಪದಗಳು ಮತ್ತು ಭಾವನೆಗಳು... ಜೊತೆಗೆ “ಡಾ.ಶಂಕರಯ್ಯ" ಅವರ ಪ್ರೇರಣೆಯೂ ಈ ಪುಸ್ತಕವನ್ನು ಮತ್ತಷ್ಟು ಪ್ರಖ್ಯಾತಿಗೊಳಿಸಿದೆ. ಈ ಪುಸ್ತಕದ ಮೂಲಕ ಅವರಿಗೆ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ.”
೨೮೮ ಪುಟಗಳ ಈ ಕೃತಿಯನ್ನು ಲೇಖಕರು ತಮಗೆ ಮಾರ್ಗದರ್ಶನ ನೀಡುತ್ತಿರುವ ಬ್ರಹ್ಮಶ್ರೀ ಪಿತಾಮಹ ಡಾ. ಸುಭಾಷ್ ಪತ್ರೀಜಿ ಇವರಿಗೆ ಅರ್ಪಣೆ ಮಾಡಿದ್ದಾರೆ. ಈ ಕೃತಿಯಲ್ಲಿ ೭೭ ಅಧ್ಯಾಯಗಳಿವೆ. ರಕ್ಷಾಪುಟಗಳಲ್ಲಿ ಸೊಗಸಾದ ವರ್ಣಚಿತ್ರಗಳಿವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!