ದಸಂಸ ನಾಯಕ ಮಾವಳ್ಳಿ ಶಂಕರ್ ಅವರ "ಅಂಬೇಡ್ಕರ್ ವಾದ"
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಯಾಗಿತ್ತು "ಅಂಬೇಡ್ಕರ್ ವಾದ". ೨೦೦೪ರ ಜೂನ್ ಸಂಚಿಕೆಯೊಂದಿಗೆ ಆರಂಭವಾದ " ಅಂಬೇಡ್ಕರ್ ವಾದ" ಹದಿನೈದಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ಪ್ರಕಟಗೊಳ್ಳುತ್ತಾ ಕೊನೆಗೆ ಕೊರೋನಾ ಅವಧಿಯಲ್ಲಿ ಸ್ಥಗಿತಗೊಂಡಿತು.
೨೪ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಬರುತ್ತಿದ್ದ "ಅಂಬೇಡ್ಕರ್ ವಾದ" ದ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ. ವಾರ್ಷಿಕ ಚಂದಾ ಮೊತ್ತ ನೂರು ರೂಪಾಯಿ ಮತ್ತು ಆಜೀವ ಸದಸ್ಯತ್ವ ಮೊತ್ತ ಒಂದು ಸಾವಿರ ರೂಪಾಯಿಗಳಾಗಿತ್ತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಾದ ದಿ | ಪ್ರೊ. ಬಿ. ಕೃಷ್ಣಪ್ಪರವರ ಪತ್ನಿ ಶ್ರೀಮತಿ ಇಂದಿರಾ ಕೃಷ್ಣಪ್ಪ, ಖ್ಯಾತ ಕಥೆಗಾರರಾದ ಮೊಗಳ್ಳಿ ಗಣೇಶ್, ಡಾ. ಎಸ್. ಜಾಫೆಟ್ ಹಾಗೂ ಡಾ. ಮನೋಹರ್ ಯಾದವ್ ಸಂಪಾದಕ ಮಂಡಳಿ ಸದಸ್ಯರಾಗಿದ್ದರು.
ಎಸ್. ಆರ್. ಕೊಲ್ಲೂರು, ಎನ್. ನಾಗರಾಜ್, ಆರ್. ಮೋಹನ್ ರಾಜ್, ಎಚ್. ಮಲ್ಲೇಶ್, ಗೌತಮ್ ಪಾಟೀಲ್, ವೈ. ಎಸ್. ದೇವೂರ್, ತಿಪ್ಪಣ್ಣ ಆರತಿ, ಗಾ. ನ. ಅಶ್ವಥ್, ತಿಪ್ಪಣ್ಣ ಮೈಲೂರ್ ಕರ್, ಪ್ರೇಮನಾಥ್ ಗರಸಿಂಘೆ, ಸುಧಾ ವೆಂಕಟೇಶ್ ಹಾಗೂ ರೋಹಿತಾಕ್ಷ ವಚಯವಸ್ಥಾಪಕ ಮಂಡಳಿ ಸದಸ್ಯರಾಗಿದ್ದರು. ಮುರಳೀಧರ್ ರಾಠೋಡ್ ಮುಖಪುಟ ವಿನ್ಯಾಸಕರಾಗಿದ್ದರು. ಬೆಂಗಳೂರು ಲಾಲ್ ಭಾಗ್ ನ ಫೋರ್ಟ್ ರಸ್ತೆಯಲ್ಲಿ ಪತ್ರಿಕಾಲಯವಿತ್ತು.
೨೦೦೪ರ ಮೊದಲು "ಅಂಬೇಡ್ಕರ್ ವಾದ" ಪ್ರಕಟವಾಗುತ್ತಿತ್ತು. ಆದರೆ ಇದು ಪ್ರಾಯೋಗಿಕ ಸಂಚಿಕೆಗಳಾಗಿತ್ತು ಅಥವಾ ನೋಂದಣಿಯಾಗುವ ಮೊದಲಿನ ಸಂಚಿಕೆಗಳಾಗಿತ್ತು. ೨೦೦೪ರ ಜೂನ್ ತಿಂಗಳ ಸಂಚಿಕೆಯೇ ಸಂಪುಟ ೧ ಸಂಚಿಕೆ ೧ರ ಸಂಚಿಕೆಯಾಗಿದೆ. ಈ ಮೊದಲ ಸಂಚಿಕೆಯಲ್ಲಿ ಬಾಬಾ ಸಾಹೇಬ ನೀ ಹಚ್ಚಿದ ಹಣತೆಗಳು / ವಿಮೋಚನಾ ಹೋರಾಟದ ಹಣತೆ: ಪ್ರೊ. ಬಿ. ಕೃಷ್ಣಪ್ಪ (ನಿಮ್ಮೊಂದಿಗೆ / ಮಾವಳ್ಳಿ ಶಂಕರ್), ಮಹಾ ಬೋಧಿವೃಕ್ಷದ ನದಿ: ಡಾ. ಬಾಬಾಸಾಹೇಬ ಅಂಬೇಡ್ಕರ್ (ಮೊಗಳ್ಳಿ ಗಣೇಶ್), ಸ್ಥಾಪಿತ ಮೌಲ್ಯಗಳ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಮಹಾನ್ ಚೇತನ (ಶ್ರೀಮತಿ ಇಂದಿರಾ ಕೃಷ್ಣಪ್ಪ), ಕರ್ನಾಟಕದ ದಲಿತ ಚಳವಳಿಯ ಸಂಕೇತ (ಪ್ರೊ. ಬರಗೂರು ರಾಮಚಂದ್ರಪ್ಪ), ದಲಿತ ಚಳವಳಿ ಮತ್ತು ರಾಜಕೀಯ ಧ್ರುವೀಕರಣ (ರಾಜಪ್ಪ ದಳವಾಯಿ), ಸಾಹಿತ್ಯ: ದಲಿತರ ಜಾಗೃತಾವಸ್ಥೆಯ ವ್ಯಕ್ತರೂಪ (ಡಾ. ಕಾ. ವೆಂ. ಶ್ರೀನಿವಾಸಮೂರ್ತಿ), ಬುದ್ಧ ಕಂಡ ಬದುಕು (ರಂಜಾನ್ ದರ್ಗಾ), ಸ್ವಾಭಿಮಾನ, ಸಂಘರ್ಷದ ದಿನವಾಗಿ ಬಿ. ಕೃಷ್ಣಪ್ಪನವರ ಜನ್ಮದಿನಾಚರಣೆ (ಆರ್. ಮೋಹನ್ ರಾಜ್), ಮನೆ ಬಿಟ್ಟ ಮಗ ಮಹಾನಾಯಕನಾಗಿ ಮರಳಿದಾಗ...... (ಕೆ. ಎನ್. ಶ್ರೀನಿವಾಸ ರೆಡ್ಡಿ ಐ. ಡಿ. ಹಳ್ಳಿ), ಅಂಬೇಡ್ಕರ್ ಮತ್ತು ಧರ್ಮಾಂತರ (ಸರಜೂ ಕಾಟ್ಕರ್), ಕಲ್ಲಿನ ಚೂರುಗಳು ಮತ್ತು ತುಪ್ಪ (ಬುದ್ಧನ ತತ್ವಗಳು) ಲೇಖನಗಳು ಮತ್ತು ಸಂದೂಕದೊಳಗಿನ ಗೊಂಬೆ (ಸುಜಾತಾ ಕುಮಟಾ) ಕವನವಿದೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!