ನಾನು ಇತ್ತೀಚೆಗೆ ಓದುತ್ತಿರುವ ಕಥೆಗಳಲ್ಲಿ ಒಂದು ಸಂಗತಿ ಗಮನಿಸಿದ್ದೇನೆ. ಆ ಕುರಿತು ಬರೆಯುತ್ತಿದ್ದೇನೆ. ನೀವು ಬರಹಗಾರರಾದರೆ ಇದನು ದಯವಿಟ್ಟು ಓದಿ. ನಿಮ್ಮ ಹತ್ತಿರ ಬರಹಗಾರರಿದ್ದರೆ ಅವರಿದನ್ನು ಓದದಿದ್ದರೆ ಅವರಿಗಾಗಿ ನೀವು ಇದನ್ನು ಓದಿ. ನನ್ನ ಅಭಿಪ್ರಾಯವನ್ನು ಅವರಿಗೆ ತಿಳಿಸಿ.

ಕಥೆಗಳನ್ನು ಬರೆದವರು ಪ್ರಕಟಣೆಗೆ ಕಳಿಸುವ ಮೊದಲು ಯಾರಿಗಾದರೂ ಓದಲು ಕೊಡಬೇಕು. ಅವರಿಗೆ ನಿಮ್ಮ ಬರಹ ತಿಳಿಯುತ್ತಿದೆಯೇ ಎಂದು ಕೇಳಬೇಕು. 

ಅನೇಕ ಸಲ ಬರಹಗಾರರು ವಿಷಯವನ್ನು ತಿಳಿದುಕೊಂಡಿರುವುದರಿಂದ ಓದುಗರ ದೃಷ್ಟಿಯಿಂದ ವಿಚಾರ ಮಾಡುವುದಿಲ್ಲ. ಉದಾಹರಣೆಗೆ ಕೆಲವೊಮ್ಮೆ ಹೆಸರುಗಳನ್ನು ಬರೆಯುತ್ತಾ ಹೋಗುತ್ತಾರೆ. ಆದರೆ ಅವರುಗಳ ನಡುವಿನ ಸಂಬಂಧ ಓದುಗರಿಗೆ ಗೊತ್ತಾಗುವುದಿಲ್ಲ. ಬರಹಗಾರರಿಗೆ ಗೊತ್ತು ಇರುವುದರಿಂದ ಅದನ್ನು ಬರೆಯಲು ಹೋಗುವುದಿಲ್ಲ. ಆದ್ದರಿಂದ ಓದುಗರಿಗೆ ತೊಂದರೆ ಆಗುತ್ತದೆ. 

ಈಗ ಒಂದು ಯುಗಾದಿ ವಿಶೇಷಾಂಕದಲ್ಲಿ ಒಂದು ಕಥೆಯನ್ನು ಓದುತ್ತಿದ್ದೇನೆ. ಕಥೆ ಯಾವುದು? ಅದನ್ನು ಬರೆದವರು ಯಾರು ಎಂದು ಹೇಳುವುದು ಬೇಡ. ಕಥೆ 5 ಪುಟದ್ದು. ಮೊದಲ ಪುಟ್ಟ ಪ್ಯಾರಾದಲ್ಲಿ A ಮತ್ತು B ಎಂಬ ಹೆಸರುಗಳ ಇಬ್ಬರು ಇದ್ದಾರೆ. 

ಮುಂದಿನ ಪ್ಯಾರಾದಲ್ಲಿ ಒಂದು ಫೋನ್ ಸಂಭಾಷಣೆ ಇದೆ. ಯಾರು ಮಾತನಾಡುತ್ತಿದ್ದಾರೆ  ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಗೊತ್ತಾಗುವುದು ಇಲ್ಲ. ಮಾತಿನಲ್ಲಿ ಏನು ವಿಶೇಷವೂ ಇಲ್ಲ.

ಮೂರನೇ ಪ್ಯಾರಾದಲ್ಲಿ ಯಾವನೋ C ಎಂಬುವನಿಗೆ ಹೃದಯ ತೊಂದ್ರೆಯಾಗಿ ಅವನ ಹೆಂಡತಿ - ಅವಳ ಹೆಸರು ಇಲ್ಲ - ಅವನನ್ನು ಕಾರ್ ನಲ್ಲಿ ಕರೆದುಕೊಂಡು ಹೋಗುತ್ತಾಳೆ . ದಾರಿಯಲ್ಲಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುತ್ತಾಳೆ. ಮುಂದೆ ಆಸ್ಪತ್ರೆಯಲ್ಲಿ ಆ C ಯು ತೀರಿಕೊಳ್ಳುತ್ತಾನೆ.

ಮುಂದಿನ ಪುಟದಲ್ಲಿ A ಯ ಸಂಗತಿ ಇದೆ . ಅವಳು ಕೊರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವನ ಕ್ಲಾಸ್ಮೇಟ್ D ಅಂತ. ಯಾವುದೋ ಸಂದಿಯಲ್ಲಿ ಈ ಸಂಗತಿ ಬರುತ್ತದೆ. 

ಆಮೇಲೆ ಈ Aಗೆ ಗಂಡನು C ನಂತೆ. ಮತ್ತೆ ಮತ್ತೆ ಓದಿದರೆ ತಾನೇ ಈ ಸಂಶಯ ಬರುತ್ತದೆ. ಆದರೆ Aಯ  ಜೊತೆ ರಾತ್ರಿಯಲ್ಲಿ D ಇದ್ದಾನೆ! Cಯು ಗಂಡನಾದರೆ ಇದು ಹೇಗೆ ಸಾಧ್ಯ?

ಈ D ಜತೆಗೆ ಈ A ಯ ಹೆಸರು ತಳುಕು ಹಾಕಿ ಕೆಲವು ಚಾನೆಲ್ಗಳು ಸುದ್ದಿ ಮಾಡುತ್ತವೆ. 

C ಗೆ ಇದೆಲ್ಲ ಗೊತ್ತಿರದ ವಿಷಯವೇನು ಆಗಿರಲಿಲ್ಲ ಎಂಬ ವಾಕ್ಯವು ಕಡೆಯ ಪುಟದಲ್ಲಿದೆ. ಓದುಗರಿಗೆ ಮಾತ್ರ ಇವರ ಸಂಬಂಧ ಸ್ಪಷ್ಟವಾಗುವುದಿಲ್ಲ.

ಈಗ ಕಥೆಯ ಕಡೆಯ ಪುಟದಲ್ಲಿ ಇದ್ದೇನೆ. ಇಲ್ಲಾದರೂ ನನ್ನ ಸಂಶಯಗಳು ನಿವಾರಣೆ ಆಗುತ್ತವೆಯೋ ಇಲ್ಲವೋ ಗೊತ್ತಿಲ್ಲ. 

ಇಲ್ಲಿನ ಎರಡು ಪ್ಯಾರಾಗಳಲ್ಲಿ ಗಂಡ C ಸತ್ತ ನಂತರ D ಜೊತೆಗೆ A ಯ ಸಂಬಂಧ ಕುರಿತು ಒಂದಿಷ್ಟು ಸಂಗತಿ ಇದೆ.

ಈಗ ಕಡೆಯ ಪ್ಯಾರಾದಲ್ಲಿ ಇದ್ದೀನಿ. ಈ ಪ್ಯಾರಾದಲ್ಲಿ B ಯು A ಯ ತಂಗಿ, ಇವಳನ್ನು D ಮದುವೆ ಆಗುತ್ತಾ ಇದ್ದಾನೆ ಎಂದು ಗೊತ್ತಾಗುತ್ತಿದೆ. A ಈ ಮದುವೆಯ ಪ್ಲಾನಿಂಗ್ ನಲ್ಲಿ ಇದ್ದಾಳೆ ಆದರೆ ಮದುವೆ ಸಂದರ್ಭದಲ್ಲಿ ಅಳುತ್ತಾಳಂತೆ. ಯಾಕಂತ ಅವಳಿಗೂ ಗೊತ್ತಾಗೋದಿಲ್ಲ. ಇಲ್ಲಿಗೆ ಕಥೆ ಮುಗಿಯುತ್ತದೆ.

ಕತೆಗಾರರು ಏನು ಹೇಳಲು ಬಯಸಿದರು ಗೊತ್ತಾಗಲಿಲ್ಲ. ಕಥೆಯೂ ಗೊತ್ತಾಗಲಿಲ್ಲ. ಯಾರಿಗಾದರೂ ಓದಲು ಕೊಟ್ಟು ಅವರಿಗೆ ಅರ್ಥವಾಯಿತೇ ಅಂತ ಕೇಳಬೇಕಿತ್ತು. ಇದನ್ನು ಮುದ್ರಿಸಲು ಸಂಪಾದಕರು ಹೇಗೆ ತೀರ್ಮಾನ ತೊಗೊಂಡರೋ ಏನೋ .

ಇವತ್ತಿನ ವಾಟ್ಸಾಪ್ ಯುಗದಲ್ಲಿ ಜನರ ಅಟೆನ್ಷನ್ ಸ್ಪ್ಯಾನ್ ಕಡಿಮೆಯಾಗಿದೆ ಎನ್ನುವುದು ಈ ಬರಹಗಾರರಿಗೆ ಗೊತ್ತಾಗಲಿಲ್ಲವೇ? ಕಥೆಯನ್ನು ಒಂದು ಕಡೆಯಿಂದ ಹೇಳಿದರೆ ಏನು ತೊಂದರೆ ? ಪಾತ್ರಗಳ ಹಿನ್ನೆಲೆ ಮತ್ತು ಸಂಬಂಧ ಮೊದಲಲ್ಲಿ ಹೇಳಬಾರದೇ?