ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ,ಹೋಗಲಿ

ಉಳಿಯುತ್ತೇನೆ ಹೇಳಿದವನನ್ನು ಮುಟ್ಟಿಬಿಡಿ,ಬಾಗಲಿ

 

ಜೀವನದಲ್ಲೂ ಮಸಣದ ದಾರಿಯನೆಲ್ಲಾ ತುಳಿದವರಿಲ್ಲವೆ

ಮಣ್ಣಿನ ಒಳಗೂ ಹೊರಗು ತಟ್ಟಿಬಿಡಿ, ಬೀಗಲಿ

 

ಕೈಹಿಡಿದು ಎಳೆದೋಯ್ದು ಕುಳ್ಳಿರಿಸಿದವರು ಇಹರೇ ಇಲ್ಲಿ

ತಮಗಾಗುವರ ಜೊತೆಯೇ ಇಟ್ಟುಬಿಡಿ,ಮಾಗಲಿ

 

ಯಾತ್ರೆಯ ನಡುವೆಯೇ ಹೇಳದೆಯೇ ಹೋಗುವವರಿಲ್ಲವೆ

ಬದುಕಿನ ಸಂಘರ್ಷವನ್ನು ಕೊಟ್ಟುಬಿಡಿ,ನೀಗಲಿ

 

ಈಶನ ದಯೆಯಿಂದ ಜೀವ ಕೊನರಿತು ಹೇಳುವವರೇನು

ಪ್ರತಿಯೊಂದು ವೇಷವನ್ನೂ ಉಟ್ಟುಬಿಡಿ,ಸಾಗಲಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ