ಸೂರ್ಯ ಕಿಟಕಿಯ ಸರಳುಗಳ ಮಧ್ಯದಿಂದ ಕೆಂಪಗಿನ ಬಣ್ಣವನ್ನು ಹೊತ್ತು ನನ್ನ ಕೊಠಡಿಯೊಳಗೆ ಇಣುಕುತ್ತಿದ್ದಾನೆ. ಆತನಿಗೆ ನನ್ನ ಕೊಠಡಿಯ ಒಳಗಿನ ಪ್ರತಿ ದೃಶ್ಯವನ್ನು ನೋಡುವ ತವಕ. ಆಗಾಗ ಎಚ್ಚರಿಸುತ್ತಾನೆ ಕೂಡ. ಸುಮ್ಮನೆ ಕುಳಿತಿದ್ದರೆ ಎದ್ದೇಳುವುದಕ್ಕೆ ಹೊಸ ಕೆಲಸ ಸಾಧ್ಯತೆಗಳ ಹುಡುಕುವುದಕ್ಕೆ ಪ್ರೇರೇಪಿಸುತ್ತಾನೆ. ಪ್ರತಿದಿನವೂ ಅವನ ಜೊತೆ ಆ ಕಿಟಕಿಯ ಸರಳುಗಳ ಮಧ್ಯದಿಂದ ನೋಡಿ ಮಾತನಾಡುತ್ತೇನೆ. ನಮ್ಮಿಬ್ಬರ ನಡುವೆ ಒಂದು ಗಟ್ಟಿಯಾದ ಬಾಂಧವ್ಯ ವೃದ್ಧಿಸಿಕೊಂಡು ಬಿಟ್ಟಿದೆ. ನಾನು ದಿನದಿಂದ ದಿನಕ್ಕೆ ಹೆಚ್ಚು ಹೆಜ್ಜೆಗಳನ್ನ ಇಡುವುದಕ್ಕೆ ಸಾಧ್ಯವಾಗಿದೆ. ಆತ ಇನ್ನೂ ಹೆಚ್ಚಾಗಿ ಕೆಂಪಗೆ ಉರಿಯುವುದಕ್ಕೆ ಶುರು ಮಾಡಿದ್ದಾನೆ. ನಾವಿಬ್ಬರೂ ಸ್ಪರ್ಧೆಯ ರೀತಿಯಲ್ಲಿ ದಿನವನ್ನು ಮುಗಿಸುತ್ತೇವೆ. ಪ್ರತಿದಿನವೂ ಒಬ್ಬರನ್ನೊಬ್ಬರು ನೋಡಿಕೊಂಡು ಆ ದಿನ ಪೂರ್ತಿಗೊಳಿಸಲು ಸಾಧ್ಯವಾಗದ ಕೆಲಸಗಳ ಪಟ್ಟಿ ಮಾಡುತ್ತೇನೆ. ಸೂರ್ಯನಿಗಾದರೂ ಒಂದು ದಿನವೂ ಆಗದಿರುವ ಕೆಲಸವೇ ಸಿಗುವುದಿಲ್ಲ. ನನ್ನದಾದರೆ ಪಟ್ಟಿಗಳು ಬೆಳೆದಿರುತ್ತವೆ. ನನಗೆ ಒಂದೇ ಒಂದು ಆಸೆ ನಾನು ಮಾಡಿಕೊಂಡ ಅಷ್ಟು ಪಟ್ಟಿಗಳಲ್ಲಿ ಎಲ್ಲವೂ ಮಾಡಿದ್ದೇನೆ ಎನ್ನುವ ಹೆಮ್ಮೆ ನನ್ನಲ್ಲಿರಬೇಕು. ಆ ದಿನ ಸೂರ್ಯ ಹೇಳಿದ್ದಾನೆ ಇನ್ನೊಂದಷ್ಟು ಹೆಚ್ಚು ಚಂದದಿಂದ ಮಿನುಗಿ ನಿನ್ನ ಮುಂದೆ ಕರಗಿ ಹೋಗುತ್ತೇನೆ ಅಂತ. ಆ ದಿನಕ್ಕಾಗಿ ಮತ್ತೆ ಕಾಯುತಿದ್ದೇನೆ. ಕಿಟಕಿಯ ಮರೆಯಿಂದ ಸೂರ್ಯನನ್ನು ನೋಡುತ್ತಾ ನನ್ನ ಬದುಕು ಬೆಳಗುವುದನ್ನು ಕಾಣುತ್ತ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!