ಮಾನವಿ

ಖ್ಯಾತ ತೆಲುಗು ಕಾದಂಬರಿಕಾರ್ತಿ ಪೋಪುರಿ ಲಲಿತಾ ಕುಮಾರಿ (ಓಲ್ಗಾ) ಇವರು ಬರೆದ ‘ಮಾನವಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ ಗೊರವಿನಕಲ್ಲು ನಾಗರಾಜು. ಇವರ ಈ ಪ್ರಯತ್ನಕ್ಕೆ ಬೆನ್ನು ತಟ್ಟುತ್ತಾ ಮುನ್ನುಡಿಯನ್ನು ಬರೆದಿದ್ದಾರೆ ಷಣ್ಮುಖಪ್ಪ ಕೆ ಹೆಚ್. ಇವರ ಮುನ್ನುಡಿಯ ಕೆಲವು ಆಯ್ದ ಸಾಲುಗಳು… 

“ಯುವ ಕಾದಂಬರಿಕಾರ ಗೊರವಿನಕಲ್ಲು ನಾಗರಾಜು ಅವರು ಅನುವಾದಿಸಿರುವ ‘ಮಾನವಿ’ ಕಾದಂಬರಿ ಕನ್ನಡದ ಅನುವಾದ ಸಾಹಿತ್ಯಕ್ಕೆ ಸ್ತ್ರೀವಾದಿ ಚಿಂತನೆಗಳ ಸಮರ್ಥ ಅಭಿವ್ಯಕ್ತಿಯು ಈ ಕಾದಂಬರಿ ಯ ಮೂಲಕ ನಿರೂಪಿತವಾಗಿದೆ. ತೆಲುಗು ಸಾಹಿತ್ಯದಲ್ಲಿ ‘ಓಲ್ಗಾ’ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಪೋಪುರಿ ಲಲಿತಾ ಕುಮಾರಿ ಅವರು ೧೯೮೦ರ ದಶಕದಲ್ಲಿ ಬರೆದ ಈ ಕಾದಂಬರಿ ಸಮಾಜದಲ್ಲಿ ಸ್ತ್ರೀಯ ಬದುಕು ಪುರಷ ಕೇಂದ್ರಿತವಾದ ಸಾಮಾಜಿಕ ಬದುಕಿನ ಮಾದರಿಗಳನ್ನು ಪ್ರತಿಭಟಿಸಿ, ಸ್ತ್ರೀ ಕೂಡ ಪುರುಷನಂತೆ ಮನುಷ್ಯಳು ಎಂಬ ಪ್ರತಿಪಾದನೆಯನ್ನು ಜೀವಪರ ಹಾಗೂ ಮಾನವೀಯ ನೆಲೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಆ ಕಾದಂಬರಿಯನ್ನ ಕನ್ನಡಕ್ಕೆ ಅಷ್ಟೇ ಸಮರ್ಥವಾಗಿ ಲೇಖಕರು ಅನುವಾದ ಮಾಡಿದ್ದಾರೆ.

ಮಾನವಿ ಕಾದಂಬರಿ ಕನ್ನಡಕ್ಕೆ ಸಿಕ್ಕ ಒಂದು ಉತ್ತಮ ಕಾದಂಬರಿ. ಈ ಕಾದಂಬರಿಯಲ್ಲಿ ಮುಖ್ಯಪಾತ್ರವಾಗಿ ಕಾಣಿಸಿಕೊಳ್ಳುವ ವಸಂತಳ ಪಾತ್ರ ಭಾರತೀಯ ಸಮಾಜದ ಉತ್ತಮ ವರ್ಗದ ಮಹಿಳೆ, ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಹೇಗೆ ಪುರಷ ನಿರ್ಮಿತ ಜೀವನದ ಮಾದರಿಗಳನ್ನು ಅನುಸರಿಸುವ ಸಮರ್ಥ ಅಭಿವ್ಯಕ್ತಿಯಾಗಿ ಜೀವನ ನಡೆಸುತ್ತಾ ಆ ಜೀವನವೇ ಬದುಕಿನ ಶ್ರೇಷ್ಠಮಾದರಿ ಎಂದು ಭಾವಿಸಿರುವ ಕೋಟ್ಯಂತರ ಭಾರತೀಯರ ಧ್ವನಿಯಾಗಿ ಬದುಕುತ್ತಿರುವಾಗ, ತನ್ನ ವೈಯಕ್ತಿಕ ಬದುಕಿನಲ್ಲಿ ಆದ ಬದಲಾವಣೆ ಆಕೆಯನ್ನು ಸ್ತ್ರೀ ಕೂಡ ಪುರುಷನಂತೆ ಮನುಷ್ಯಳು, ಈ ಸಮಾಜದಲ್ಲಿ ತಾನು ಕೂಡ ಒಬ್ಬ ವ್ಯಕ್ತಿ ಎನ್ನುವ ವ್ಯಕ್ತಿ ಪ್ರಜ್ಞೆಯನ್ನು ಪಡೆದುಕೊಳ್ಳುತ್ತಾಳೆ. 

ಲೈಂಗಿಕತೆಯ ವಿಷಯ ಪುರುಷನಿಗೆ ಮಾತ್ರ ಸೀಮಿತ, ಆತನಿಗೆ ಮಾತ್ರ ಅದನ್ನು ಮುಕ್ತವಾಗಿ ಮಾತನಾಡುವ, ಹಂಚಿಕೊಳ್ಳುವ, ಒಂದಕ್ಕಿಂತ ಹೆಚ್ಚು ಸ್ನೇಹ ಸಂಬಂಧಗಳನ್ನು ಹೊಂದುವ ಅವಕಾಶವಿದೆ ಎನ್ನುವ ಪುರುಷಕೇಂದ್ರಿತ ಸಂಬಂಧಗಳನ್ನು ಪರಾಮರ್ಶಿಸುತ್ತಾ, ಹೆಣ್ಣು ಕೂಡ ಅತ್ಯಂತ ಸಹಜವಾಗಿರುವ ಕಾಮವನ್ನು ಪುರುಷ ಮತ್ತು ಮಹಿಳಯೆ ಇಚ್ಚಾಪೂರ್ವಕವಾಗಿ ನಡೆದಾಗ ಅದನ್ನು ಸಹಜವಾಗಿ ಸ್ವಿಕರಿಸಬೇಕು, ಅದರ ಕುರಿತಾದ ಅತೀಯಾದ ಮಡಿವಂತಿಕೆ, ಹೇವರಿಕೆಯ ಭಾವನೆ ಅನಾವಶ್ಯಕ. ಅದರಲ್ಲೂ ವಿವಾಹಪೂರ್ವ ಲೈಂಗಿಕತೆಯು, ವಂಚನೆಗೆ ಒಳಗಾಗುವ ಸನ್ನಿವೇಶಗಳು ಮಾನಸಿಕವಾಗಿ ಕುಗ್ಗಿಸುತ್ತವೆ. ಆ ಸನ್ನಿವೇಶದಲ್ಲಿ ಹೆಚ್ಚು ಭಾವನಾತ್ಮಕವಾಗಿ ವರ್ತಿಸದೆ, ವೈಚಾರಿಕವಾಗಿ ಜೀವನವನ್ನು ಸ್ವೀಕರಿಸುವ ಸ್ತ್ರೀಯು ಜೀವಪರ ಚಿಂತನೆಯನ್ನು ನವತಳ ಮೂಲಕ ಪ್ರತಿಪಾದಿಸುತ್ತದೆ. ಇದು ಸಿಮೋನ್ ದ ಬೋವಾ ತಮ್ಮ “ದ್ವಿತೀಯ ಲಿಂಗ” ಕೃತಿಯಲ್ಲಿ “ಎಂದಿನವರೆಗೆ ಪುರುಷನಿರ್ಮಿತ ಮಾನಸಿಕ-ವೈಚಾರಿಕ ಚೌಕಟ್ಟುಗಳಲ್ಲಿಯೇ ಸ್ತ್ರೀಯು ಬದುಕಬೇಕಾಗುತ್ತದೆಯೋ ಅಲ್ಲಿಯವರೆಗೆ ನಿಜವಾದ ಅರ್ಥದಲ್ಲಿ ಸ್ತ್ರೀ ಸ್ವತಂತ್ರಳಾಗುವುದಿಲ್ಲ.”  ಇಲ್ಲಿ ಸಿಮೋನ್ ದ ಬೋವಾರ ಚಿಂತನೆಗಳ ಅನುಷ್ಠಾನಗೊಂಡಿರುವುದನ್ನ ಗಮನಿಸಬಹುದು.” ೧೮೦ ಪುಟಗಳ ಉತ್ತಮ ಕಾದಂಬರಿ ಎನ್ನಬಹುದು.