ಗ್ರಾಮದ ತುದಿಯಲ್ಲಿ ಹಳೆಯ ದೇವಾಲಯವಿತ್ತು. ಆ ದೇವಾಲಯಕ್ಕೆ ದಿನವೂ ಜನರು ಬರುತ್ತಿದ್ದರು. ಯಾರೋ ತಮ್ಮ ಕಷ್ಟ ಹೇಳಲು, ಯಾರೋ ಆಶೀರ್ವಾದ ಕೇಳಲು, ಯಾರು ಮನಶಾಂತಿ ಹುಡುಕಲು...ಒಂದು ದಿನ ದೈವವೇ ಮನುಷ್ಯ ರೂಪದಲ್ಲಿ ಇಳಿದು ಬಂತು. “ನನ್ನ ಭಕ್ತರ ಜೊತೆ ಸ್ವಲ್ಪ ಮಾತನಾಡೋಣ" ಅನ್ನಿಸಿತು.

ಮೊದಲು ಬಂದವನು ದೇವಾಲಯದ ಮೆಟ್ಟಿಲು ಮೇಲೆ ಕುಳಿತುಕೊಂಡು ಫೋನ್‌ನಲ್ಲಿ ತಲೆ ಇಳಿಸಿಕೊಂಡಿದ್ದ. ದೇವರು ಹತ್ತಿರ ಹೋಗಿ ಕೇಳಿದ, "ಏನಪ್ಪಾ, ಏನಾದರೂ ಕಷ್ಟವೇ?" ಅವನು ಕಣ್ಣು ಕೂಡ ಎತ್ತದೇ, “ಒಂದು ನಿಮಿಷ... ರೀಲ್ ಮುಗಿಯಲಿ" ಎಂದ.

ಮತ್ತೊಬ್ಬಳು ಬಂದಳು. ಕೈಯಲ್ಲಿ ಹೂವು, ತೆಂಗಿನಕಾಯಿ... ಆದರೆ ಕಣ್ಣು ಮೊಬೈಲ್‌ನಲ್ಲಿ. "ದೇವರೆ, ನನಗೆ ಒಳ್ಳೆಯದಾಗಲಿ..." ಎಂದು ಹೇಳುತ್ತಾ ಸ್ಟೇಟಸ್ ಅಪ್‌ಲೋಡ್ ಮಾಡುತ್ತಿದ್ದಳು. ದೇವರು ನಿಧಾನವಾಗಿ ನಕ್ಕ... ಆದರೆ ಆ ನಗುವಿನ ಹಿಂದೆ ಒಂದು ನೋವು ಇತ್ತು. ಒಬ್ಬ ವೃದ್ಧ ಮಾತ್ರ ನಿಧಾನವಾಗಿ ಬಂದು, ಕಣ್ಣು ಮುಚ್ಚಿ, ಮನಸ್ಸಿನಿಂದ ಪ್ರಾರ್ಥನೆ ಮಾಡಿದರು.

ಅವರ ಮುಖದಲ್ಲಿ ಶಾಂತಿ ಕಂಡು ದೇವರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು. ಆದರೂ ದೈವದ ಮನಸ್ಸಿನಲ್ಲಿ ಒಂದೇ ಪ್ರಶ್ನೆ: "ನನ್ನನ್ನು ನೋಡಲು ದೇವಸ್ಥಾನಕ್ಕೆ ಬರುತ್ತಾರೆ... ಆದರೆ ನನ್ನನ್ನೇ ನೋಡುವುದಿಲ್ಲ. ಮನಸ್ಸಿಗೆ ಇಳಿಸಿಕೊಳ್ಳುವುದನ್ನು ಬಿಟ್ಟು, ಮೊಬೈಲ್ ಒಳಗೆ ಇಳಿಯುತ್ತಿದ್ದಾರೆ...”ಅಂದು ದೈವ ಮರಳಿ ತನ್ನ ಲೋಕಕ್ಕೆ ಹೊರಟಾಗ

"ನನ್ನನ್ನು ಕರೆದು ಮಾತಾಡುವ ಭಕ್ತರು ಕಡಿಮೆ... ನನ್ನನ್ನು ತೋರಿಸಿ ಪೋಸ್ಟ್ ಮಾಡುವವರು ಹೆಚ್ಚು..."ಆ ದಿನದಿಂದ ದೇವಾಲಯದ ಮೌನ ಸ್ವಲ್ಪ ಹೆಚ್ಚಾಯಿತು... ಆದರೆ ದೈವದ ನಿರೀಕ್ಷೆ ಇನ್ನೂ ಹಾಗೇ ಉಳಿದಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ