ಯುವ ಬರಹಗಾರ ಕಾರ್ತಿಕ್ ಆಚಾರ್ಯ ‘ಇಷ್ಟು ದಿನ ಒಟ್ಟಿಗಿದ್ದ ಬರಹಗಳು’ ಎನ್ನುವ ಲೇಖನಗಳ ಸಂಗ್ರಹವನ್ನು ಹೊರತಂದಿದ್ದಾರೆ. ಇದರಲ್ಲಿ ಪ್ರಕಟವಾದ ಲೇಖನಗಳು ತಮ್ಮಲ್ಲಿ ಮೂಡಿದ ಭಾವವನ್ನು ‘ನನ್ನುಡಿ’ ಯಲ್ಲಿ ಹಂಚಿಕೊಂಡಿದ್ದಾರೆ. ಆದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ಇಷ್ಟು ದಿನ ಒಟ್ಟಿಗಿದ್ದ ಬರಹಗಳು ಕೃತಿ ನಮ್ಮ ಪ್ರಕಾಶನದ ಮೊದಲ ಕೃತಿ ಹಾಗೂ ನನ್ನ ಎರಡನೇ ಕೃತಿಯೂ ಸಹ. ಅಷ್ಟು ಗೊಂದಲಗಳ ಬಗೆಹರಿಸಿ ಅದೇನನ್ನೋ ಸಾಧಿಸಿದ ರೀತಿಯಲ್ಲಿ ಈ ಕೃತಿಯನ್ನು ಇದೀಗ ನಿಮ್ಮ ಕೈಗೆ ಇರಿಸುತ್ತಿದ್ದೇನೆ ಎಂಬ ತೃಪ್ತಿ ಮತ್ತು ಸಾರ್ಥಕ್ಯಭಾವ ಪ್ರತಿಷ್ಠಾಪನೆಗೊಳ್ಳುವಂತೆ ಮಾಡಿದೆ. ಕೃತಿ ಸಿದ್ಧವಾಗುವವರೆಗೂ ಅದೆಷ್ಟು ಕನಸುಗಳೋ ಅದೆಷ್ಟು ಭರವಸೆಗಳೋ ನಿಜಾ ಆ ಕೌತುಕತೆ ಮತ್ತು ಆ ಭಯ, ಆತಂಕ, ಖುಷಿ ಎಲ್ಲವನ್ನೂ ಮಾತುಗಳಲ್ಲಿ ಹೇಳಲಾಗದು ಆದರೂ ಬರೆಯಬೇಕು. ಆದರೆ ಅದ್ಹೇಗೆ ಪ್ರಾರಂಭಿಸಬೇಕೋ? ಅಥವಾ ಅದ್ಹೇಗೆ ಬರೆಯಬೇಕೆನ್ನುವ ಗೊಂದಲ ಇಲ್ಲಿಯವರೆಗೂ ಇದೆ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದವ ಬೆಳೆಯುತ್ತಿರುವವ, ಜಗತ್ತಿನ ಸ್ಪಷ್ಟತೆಯೂ ಸಿಗದ ನನಗೆ, ಬರೆಯುವ ಹಂಬಲ, ಹೇಳತೀರದ ಭಾವನೆ, ತಿಳಿಯುವ ತವಕ, ಗೆಲ್ಲಬೇಕೆಂಬ ಹಠ, ಎಡೆಬಿಡದೇ ಕಾಡುವಂತೆ ಮಾಡಿ ಶ್ರದ್ಧೆ - ಪ್ರಾಮಾಣಿಕ ಅಧ್ಯಯನ - ಪರಿಶ್ರಮ ಈ ಚಿಕ್ಕ ಯಶಸ್ಸಿನತ್ತ ತಂದು ನಿಲ್ಲಿಸಿದೆ ಎನ್ನುವ ಸತ್ಯ ಹೃದಯಕ್ಕೆ ಹತ್ತಿರವಾದವರಿಗಷ್ಟೇ ಗೊತ್ತು.
ಬರೆಹದ ದಾಹ ಮೂಡಿದ್ದು ಒಂದು ದಿನದ ಹುಚ್ಚಲ್ಲ. ಅದು ಪ್ರಾಥಮಿಕ ಶಾಲಾ ಹಂತದಿಂದಲೂ ಮೂಡಿದ್ದು ಮತ್ತು ಕಾಡಿದ್ದು, ಕಂಡ ದೃಶ್ಯಗಳಿಗೆ ಅಕ್ಷರರೂಪ ಕೊಟ್ಟು ಹಂಚುವಲ್ಲಿ ಅದೇನೋ ಸಾಧಿಸಿದ ಖುಷಿ ಮತ್ತು ತೃಪ್ತಿ ಕಾಣುವ ಹುಡುಗ ನಾನಾಗಿದ್ದೆ. ಅದೃಷ್ಟವೋ ಅಥವಾ ದೈವಸಂಕಲ್ಪವೋ ದೊರೆತ ವಾತಾವರಣವೆಲ್ಲ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಪ್ರೇರೆಪಿಸುವಂತಹವುಗಳೇ ಆಗಿಬಿಟ್ಟವು!! ಇವುಗಳಿಂದ ಮತ್ತಷ್ಟು ಕಲಿಯುವ ಮತ್ತು ಬರೆಯುವ ಹಂಬಲ ಹೆಚ್ಚಿತು ಎಂದರೆ ತಪ್ಪಾಗಲಾರದು. ಅದೆಷ್ಟೋ ವೇದಿಕೆ, ಅದೆಷ್ಟೋ ಧಾರ್ಮಿಕ ಕಾರ್ಯಕ್ರಮ ಇವೆಲ್ಲದರ ನಡುವೆ ಪುಸ್ತಕದ ಕೆಲಸವೇ ಮರೆಯಾಗಿತ್ತು, ಹಿತ ಬಯಸುವ ಅನೇಕ ಬಂಧುಗಳ ಪ್ರಶ್ನೆ - ಯಾವಾಗ ಪುಸ್ತಕ ತರ್ತಿ ಅನ್ನುವುದು ಆದರೆ ದೈವ ಸಂಕಲ್ಪ ಈಗಲೇ ಆಗಬೇಕೆಂದಿತ್ತು ಈಗ ಲೋಕಾರ್ಪಣೆ ಆಗುತ್ತಿದೆ. ಇದರ ಖುಷಿ ಹೇಳತೀರದು. ಈ ಸಾರ್ಥಕ್ಯ ಭಾವಕ್ಕೆ ಓದುಗರಾದ ನೀವೇ ಸಾಕ್ಷಿ.
ವಾಸ್ತವದಲ್ಲಿ ಎಲ್ಲವೂ ಇವೆ ವಾಸ್ತವ್ಯಕ್ಕೊಂದು ಸೂರು, ತಿರುಗಾಡಲಿಕ್ಕೊಂದು ಕಾರು, ದುಡಿಮೆಗೊಂದು ಉದ್ಯೋಗ, ಗಳಿಕೆಗೊಂದು ವಿದ್ಯೆ ಮನರಂಜನೆಂದು ಸಾವಿರಾರು ರೂಪಾಯಿಗಳ ಫೋನ್ ಇದ್ದರೂ ಆದರೆ ಬಾಲ್ಯದಲ್ಲಿ ಸಿಕ್ಕಷ್ಟು ನೆಮ್ಮದಿಯಿಲ್ಲ, ಸಂತೋಷವೂ ಇಲ್ಲ ಇವುಗಳಿಂದ ಹೊರಬಂದು ನೋಡಿದಾಗ ನನಗೆ ದೊರಕುವುದೇ ಸಾಹಿತ್ಯವೆಂಬ ಸ್ವರ್ಗ. ನಾನೇನು ತೀರಾ ಅನುಭವಿಯಲ್ಲ, ಆದರೂ ಅನುಭವಿಗಳ ಓಟನಾಟದಿಂದ ಮೂಡಿದ ಅಕ್ಷರಗಳನ್ನೇ ಅಚ್ಚೊತ್ತಿದ್ದೇನೆ. ಒಂದೇ ವಿಷಯಕ್ಕೆ ಸೀಮಿತಗೊಳಿಸದೇ ವೈಚಾರಿಕತೆ, ನೈತಿಕತೆ, ದೃಷ್ಟಿಕೋನ, ಆಧ್ಯಾತ್ಮಿಕತೆ, ಪೌರಾಣಿಕ, ವೈಜ್ಞಾನಿಕ ಹೀಗೆ ಅನೇಕ ಕವಲುಗಳ ಅಕ್ಷರಗಳೇ "ಇಷ್ಟು ದಿನ ಒಟ್ಟಿಗಿದ್ದ ಬರಹಗಳು"ಎಂಬ ಕೃತಿಯನ್ನು ನಿಮ್ಮ ಮನೆಮಗ ನಿಮ್ಮ ಮಡಿಲಿಗೆ ಹಾಕುತ್ತಿದ್ದಾನೆ. ಒಪ್ಪಿ ಅಪ್ಪಿಕೊಳ್ಳುವಿರೆಂಬ ಭರವಸೆ ನನಗಿದೆ ಕಾರಣ ಕೈ ಹಿಡಿದಿದ್ದು, ನಡೆಸಿದ್ದು ಬೆಳೆಸಿ ಹಾರೈಸಿದ್ದು ನೀವುಗಳೇ!! ಅಷ್ಟೇನು ಸಾಧಿಸಿಲಿಲ್ಲ ಆದರೆ ಸಂಘಟನೆಯ ಹೊಸ ಅಧ್ಯಾಯಗಳ ಅಭ್ಯಾಸ, ಆವಿಷ್ಕಾರದ ಅನುಭವ, ಅನೇಕ ಕಡೆಗಳ ಹೋರಾಟ ಓಡಾಟ, ಒಂದಿಷ್ಟು ಸಜ್ಜನರ ಸಂಗ ಕೆಲವರೊಂದಿಗಿನ ಭಂಗ ಒಂದಿಷ್ಟು ಸಕಾರಾತ್ಮಕ ವ್ಯಕ್ತಿಗಳ ಹತ್ತಿರತ್ತಿರ, ಬೇಡದವರೊಂದಿಗಿನ ಅಂತರ ಮಾನಾಪಮಾನಗಳ ಸಾಮಿಪ್ಯ, ಸನ್ಮಾನದ ತೃಪ್ತಿ ಇವೆಲ್ಲವೂ ಕಲಿತ ಅನನ್ಯವಾದ ಅನುಭೂತಿಯ ಜೊತೆ ಈ ಕೃತಿಯ ಲೋಕಾರ್ಪಣೆಯೂ ಸಹ ಒಂದು.
ಮತ್ತೇನನ್ನೋ ಕಲಿಯಬೇಕು. ಹೊಸತನದಲ್ಲೇನೋ ದುಡಿಯಬೇಕು. ಬದುಕು ಅಂದುಕೊಂಡಷ್ಟು ಸುಲಭವಿಲ್ಲ, ಭಾವಿಸಿದಷ್ಟು ಭಾರವಲ್ಲ ನಮ್ಮಗಳ ಅಸ್ವಾದನೆಯ ಸ್ಥಿತಿಯ ಮೇಲೆ ಅವಲಂಬನೆ ಆಗಿರುತ್ತದೆ. ಯಾವುದು ಹಿತ ? ಯಾವುದು ಅಹಿತ? ಎನ್ನುವುದರ ಗೊಂದಲಗಳಿಲ್ಲಿಯೇ ನಮ್ಮಪಾಲಿನ ದಿನಗಳು ತೀರಾ ಮುಪ್ಪಾಗಿಬಿಡುತ್ತವೆ. ತೀರಾ ದುಡಿದಿಲ್ಲ ತೀರಾ ದಣಿದಿಲ್ಲ, ನನಗಾಗಿ, ಮನೆಯಮನಗಳಿಗಾಗಿ, ನಾಡಿಗಾಗಿ ಇನ್ನೂ ಧಣಿಯಬೇಕು ಮತ್ತು ದುಡಿಯಬೇಕು ಆಗ ಮತ್ತೊಂದು ಹೊಸ್ತಿಲಿಯ ಅಧ್ಯಾಯಕ್ಕೆ ಆರಂಭಕ್ಕೂ ಸಾರ್ಥಕ.
ಹೇಳಬೇಕಾಗಿರುವುದು ತುಂಬಾ ಇದೆ. ಹೇಳಲು ಪದಗಳಿಲ್ಲ, ಬರೆಯಲು ನಿಮ್ಮಷ್ಟು ಹಿರಿಕನೂ ಅಲ್ಲ ಆದರೂ ನೀವು ತಿದ್ದುವಿರೆಂದು ಬರೆದಿದ್ದೇನೆ! ಹಾಗಾಗಿ ಈ ಕಿರಿವನ ಹೊತ್ತಿಗೆಯಲ್ಲಿ ದೋಷಗಳಿದ್ದಲ್ಲಿ ಖಂಡಿತ ಸಲಹೆ ನೀಡಿ ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ. ನಿಮ್ಮ ಒಂದು ಪ್ರೋತ್ಸಾಹ ನೂರು ಕೃತಿಬರೆಯುವ ಚೈತನ್ಯ ನೀಡುತ್ತದೆ. ಮತ್ತೊಮ್ಮೆ ಹೇಳ್ತಿದೀನಿ ಇದು ನಿಮ್ ಕೃತಿ ಇಷ್ಟು ದಿನ ಒಟ್ಟಿಗಿದ್ದ ಬರಹಗಳು ಅಭಿಮಾನದಿಂದ ಕಾಣುವ ತಮ್ಮೆಲ್ಲರಿಗೂ ಪ್ರೀತಿಯ ಪೂರ್ಣ ಪಾಲಿದೆ!”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!