ಜನಪ್ರಿಯ ಮಾಸಿಕ ‘ಕಸ್ತೂರಿ’ಯಲ್ಲಿ ಪ್ರಕಟವಾದ ಅಂಕಣ ಮಾಲಿಕೆ ‘ವಸುಧಾ ವಲಯ’ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದಿದೆ. ಈ ಮಾಲಿಕೆಯ ಬಗ್ಗೆ ಸ್ವತಃ ಲೇಖಕರಾದ ಪ್ರೊ. ಜಿ ಎನ್ ಉಪಾಧ್ಯ ಅವರು ‘ಮನೋಗತ’ ಎನ್ನುವ ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ…
“ವಸುಧಾ ವಲಯ' ಕಳೆದ ಎರಡೂವರೆ ವರ್ಷಗಳಲ್ಲಿ ಕಸ್ತೂರಿ ಮಾಸಿಕದಲ್ಲಿ ಪ್ರಕಟಣೆ ಕಂಡ ಅಂಕಣ ಲೇಖನಗಳು ಈಗ ಅದೇ ಹೆಸರಿನಿಂದ ಕೃತಿ ರೂಪದಲ್ಲಿ ಹೊರಬರುತ್ತಿದೆ.
'ಕಸ್ತೂರಿ' ಕನ್ನಡಿಗರ ಭಾವಕೋಶದಲ್ಲಿ ಸೇರಿ ಹೋಗಿರುವ ಕನ್ನಡ ಮಾಸಿಕ. ಇದೊಂದು ಕನ್ನಡಿಗರ ಮಣಿ ದೀಪ. ಮಣಿದೀಪ ಎಂದರೆ ತನಗೆ ತಾನೇ ಸ್ವಯಂಪ್ರಕಾಶ ಉಳ್ಳ ದೀಪ ಎಂದು ಅರ್ಥ. ಕಳೆದ ಏಳು ದಶಕಗಳಿಂದ ಕಸ್ತೂರಿ ಅಖಂಡ ಕನ್ನಡಿಗರ ಮನ ಮನೆಗಳನ್ನು ಬೆಳಗುತ್ತಾ ಬಂದಿದೆ. ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಗಳ ಬಲವರ್ಧನೆಗೆ ಈ ಮಾಸಿಕ ಕೊಟ್ಟ ಯೋಗದಾನ ದೊಡ್ಡದು. ಕನ್ನಡ, ಕನ್ನಡಿಗ, ಕರ್ನಾಟಕ ಈ ಮೂರೂ ತತ್ವಗಳ ಪ್ರಸಾರಕ್ಕೆ ಅದು ಇವತ್ತಿಗೂ ಕಟಿಬದ್ಧವಾಗಿದೆ. ಕಸ್ತೂರಿ ತನ್ನತನವನ್ನು ಮೂಲ ಸ್ವರೂಪದ ಕಸುವನ್ನು ವರ್ತಮಾನದಲ್ಲೂ ಉಳಿಸಿಕೊಂಡು ಬಂದಿದೆ. ಕನ್ನಡ ಪತ್ರಿಕಾ ಪ್ರಪಂಚದಲ್ಲಿ ನಕ್ಷತ್ರ ಪುಂಜದಂತೆ ಕಸ್ತೂರಿ ಇವತ್ತಿಗೂ ತನ್ನ ಸ್ವಂತಿಕೆಯಿಂದ ಮಿಂಚುತ್ತಿದೆ. ಹೀಗಾಗಿ ಅದು ನಮ್ಮ ನಾಡಿನ ಏಕಮೇವ ರೀಡರ್ ಡೈಜಿಸ್ಟ್ ಎಂಬ ಕೀರ್ತಿಗೂ ಭಾಜನವಾಗಿದೆ. ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನತನವನ್ನು ಕಾಪಿಟ್ಟುಕೊಂಡು ಬಂದಿರುವ ಕಸ್ತೂರಿ ಮಾಸಿಕದಲ್ಲಿ ಅಂಕಣ ಬರೆಯಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದೇ ಭಾವಿಸಿಕೊಂಡಿರುವೆ.
ಮಹಾರಾಷ್ಟ್ರ ಕರ್ನಾಟಕ ಇವುಗಳ ನಡುವಿನ ಬಾಂಧವ್ಯದ ಹಿನ್ನೆಲೆಯಲ್ಲಿ ನಾನು ಕಳೆದ ಮೂರು ದಶಕ ಗಳಿಂದ ಅಧ್ಯಯನ ಮಾಡುತ್ತ ಪ್ರವಾಸ ಹೋಗುತ್ತ ಬಂದವನು. ಇವತ್ತಿನ ಮಹಾರಾಷ್ಟ್ರದ ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ಆಗು ಹೋಗುಗಳನ್ನು ಕೇಂದ್ರವಾಗಿಟ್ಟುಕೊಂಡು ವಸ್ತುನಿಷ್ಠವಾಗಿ ಇಲ್ಲಿ ವಿವೇಚಿಸಲಾಗಿದೆ. ಕಸ್ತೂರಿ ಸಂಪಾದಕ ಮಂಡಳಿ ಸಹ ಈ ವಿಷಯದ ಕುರಿತೇ ಬರೆಯಲು ಹೇಳಿದ್ದು ನನಗೆ ಖುಷಿ ಕೊಟ್ಟಿದೆ. 'ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ' ಎಂಬ ಪ್ರಸಿದ್ಧವಾದ ಹೇಳಿಕೆಯೊಂದಿದೆ. ಅಂದರೆ ಹೆತ್ತ ತಾಯಿ ಹಾಗೂ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ಈ ಮಾತಿನ ಅಂತರಾರ್ಥ. ಅಲ್ಲಮಪ್ರಭುಗಳು 'ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ ಅನುಭಾವ ಎಲ್ಲಿಯದೋ' ಎಂಬುದಾಗಿ ಪ್ರಶ್ನಿಸಿದ್ದಾರೆ.
ಅನುಭಾವವೆಂದರೆ ನಿಜದ ನೆಲೆ, ವಾಸ್ತವ ಸತ್ಯ ಎಂದು ಅರ್ಥ. ನೆಲದ ವ್ಯಾಮೋಹ ಉಳ್ಳವರಿಗೆ ನಿಜದ ನೆಲೆ ಕಾಣುವುದಿಲ್ಲ ಎಂಬ ಪ್ರಭುದೇವರ ಮಾತು ಅವಲೋಕನೀಯವಾಗಿದೆ. ಆದ್ದರಿಂದ ಲೇಖಕರಾದವರು ಸಂಶೋಧಕರಾದವರು ಒಂದು ಬಗೆಯ ನಿರ್ದಿಷ್ಟ ಅಂತರವನ್ನು ಸದೂರವನ್ನು ಕಾಪಾಡಿಕೊಂಡೇ ವಾಸ್ತವವನ್ನು ಕಟ್ಟಿ ಕೊಡಬೇಕಾಗುತ್ತದೆ, ಸತ್ಯವನ್ನು ಹೇಳಬೇಕಾಗುತ್ತದೆ. ಈ ಬಗೆಯ ವಿವೇಕ, ಎಚ್ಚರವನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಸಕ್ತ ಲೇಖನಗಳನ್ನು ಪೋಣಿಸಲಾಗಿದೆ.
ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಾವಿರಾರು ವರ್ಷಗಳ ಸಾಹಚರ್ಯವನ್ನು ಸಾಂಸ್ಕೃತಿಕ ಬಾಂಧವ್ಯವನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಇವುಗಳ ನಡುವಿನ ಸಂಬಂಧ ಅತ್ಯಂತ ಘನಿಷ್ಠವಾದದ್ದು. ಕರ್ನಾಟಕ- ತಮಿಳುನಾಡು, ಕರ್ನಾಟಕ-ಕೇರಳ, ಕರ್ನಾಟಕ- ಆಂಧ್ರಪ್ರದೇಶ, ಕರ್ನಾಟಕ- ಗೋವಾ ಇವುಗಳ ನಡುವಿನ ಕೊಳುಪಡೆಗಿಂತ ವ್ಯಾಪಕವಾದ ಆದಾನ ಪ್ರದಾನ ಕರ್ನಾಟಕ - ಮಹಾರಾಷ್ಟ್ರಗಳ ನಡುವೆ ಇರುವುದು ವಿಶೇಷ. ಇದು ವಿಚಿತ್ರ ಎನಿಸಿದರೂ ವಾಸ್ತವ. ಭಾಷೆ, ನೆಲ ನೀರಿನ ನೆಪದಲ್ಲಿ ಜಗಳ ಮಾಡುವವರಿಗೆ ಈ ಬಾಂಧವ್ಯದ ಗುಟ್ಟು ತಿಳಿಯಲಿ ಎಂಬ ಆಶಯದ ಹಿನ್ನೆಲೆಯಲ್ಲಿ ಈ ಲೇಖನಗಳನ್ನು ಬರೆಯಲಾಗಿದೆ. ಈ ಅಂಕಣ ಬರವಣಿಗೆ ಇದೀಗ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ 115ನೆಯ ಕೃತಿ ಕುಸುಮವಾಗಿ ಬೆಳಕು ಕಾಣುತ್ತಿರುವುದು ಸಂತೋಷದ ಸಂಗತಿ. ಇದಕ್ಕೆ ಕಾರಣೀಕರ್ತರಾದ ಹಿರಿಯ ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಹಾಗೂ ಕಸ್ತೂರಿಯ ಸಂಪಾದಕರಾದ ಶಾಂತಲಾ ಧರ್ಮರಾಜ್ ಅವರಿಗೆ ನಾನು ಕೃತಜ್ಞನಾಗಿರುವೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!