ರಾಮಕೃಷ್ಣ ಮಹಾಸಂಘದ "ವಿವೇಕ ಪ್ರಭ"
ಶ್ರೀ ರಾಮಕೃಷ್ಣ ಮಹಾಸಂಘದ ಮೈಸೂರು ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ವಿವೇಕ ಪ್ರಭ". ೨೦೦೦ನೇ ಇಸವಿಯ ಜನವರಿಯಲ್ಲಿ ಆರಂಭವಾದ ಪತ್ರಿಕೆ ಕಳೆದ ೨೬ ವರ್ಷಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಾ ಮುಂದುವರಿದುಕೊಂಡುಬಂದಿದೆ.
ಸ್ವಾಮಿ ನಿತ್ಯಸ್ಥಾನಂದ ವ್ಯವಸ್ಥಾಪಕ ಸಂಪಾದಕರು. ಸ್ವಾಮಿ ವೀರೇಶಾನಂದ ಸಂಪಾದಕರು. ಸ್ವಾಮಿ ಜಗದಾತ್ಮಾನಂದ, ಸ್ವಾಮಿ ರಾಘವೇಶಾನಂದ, ಡಾ. ಪ್ರಭುಶಂಕರ, ಕೆ. ಸಿ. ಶಿವಪ್ಪ, ಕೆ. ಬಿ. ಪ್ರಭುಪ್ರಸಾದ ಹಾಗೂ ಡಾ. ನಿರಂಜನ ವಾನಳ್ಳಿ ಸಂಪಾದಕ ಸಲಹಾ ಮಂಡಳಿ ಸದಸ್ಯರು. ನೆರವು: ಆರ್. ಎಸ್. ಪೂರ್ಣಾನಂದ. ಪಿ. ಪುರುಷೋತ್ತಮ ಕಾರಂತ ಪತ್ರಿಕೆಯ ಚಿತ್ರಕಲಾಕಾರರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಪತ್ರಿಕೆಯ ಡಿಟಿಪಿ (ಅಕ್ಷರ ಜೋಡಣೆ) ಕೆಲಸಗಳು ನಡೆಯುತ್ತದೆ. ಜೆ. ಬಿ. ಪಟ್ಟಾಭಿಯವರ ಪಟ್ಟಾಭಿ ಎಂಟರ್ ಪ್ರೈಸಸ್ ನಲ್ಲಿ ಮುದ್ರಣವಾಗುತ್ತದೆ. ಮುಖಪುಟದ ಮುದ್ರಣವು ಬೆಂಗಳೂರಿನ ಮಯ್ಯೂರ್ ಗ್ರಾಫಿಕ್ಸ್ ನಲ್ಲಾಗುತ್ತದೆ. "ವಿವೇಕ ಪ್ರಭ"ದ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ. ವಾರ್ಷಿಕ ಚಂದಾ ನೂರು ರೂಪಾಯಿ. ಮೂರು ವರ್ಷದ ಚಂದಾ ೨೫೦ ರೂಪಾಯಿ. ಆಜೀವ ಚಂದಾ (೨೫ ವರ್ಷ) ೧೫೦೦ ರೂಪಾಯಿ. ಪೋಷಕ ಸಹಾಯಧನ ರೂಪಾಯಿ ೩೦೦೦ ಅಥವಾ ಹೆಚ್ಚು.
ಈ ಮೇಲಿನ ಎಲ್ಲಾ ಮಾಹಿತಿಗಳೂ ಪತ್ರಿಕೆಯ ದಶಮಾನೋತ್ಸವ ವರ್ಷ ೨೦೦೯ರ ಸಂಚಿಕೆಗಳನ್ನು ಆಧರಿಸಿದ್ದಾಗಿರುತ್ತದೆ. ೨೦೧೦ರ ಜುಲೈ ಸಂಚಿಕೆಯಿಂದ ಕೆಲ ಬದಲಾವಣೆಗಳಾಗಿವೆ. ಸಂಪಾದಕ ಸಲಹಾ ಮಂಡಳಿಯಲ್ಲಿ ನಿರಂಜನ ವಾನಳ್ಳಿಯವರಿಲ್ಲ. ನೆರವುದಾರರ ಸಾಲಲ್ಲಿ ಪೂರ್ಣಾನಂದರ ಜೊತೆಗೆ ಎನ್. ಎಸ್. ಶಾರದಾಪ್ರಸಾದ್, ಡಾ. ಕೆ. ಎಲ್. ಪ್ರಸನ್ನಾಕ್ಷಿ, ಡಾ. ಎಚ್. ಪಾಂಡುರಂಗ ವಿಠಲ ಹಾಗೂ ಎಚ್. ಎಲ್. ಸೀತಾದೇವಿ ಇವರನ್ನು ಸೇರಿಸಲಾಗಿದೆ.
'ಪರಿಪೂರ್ಣ ಜೀವನದ ಪರಮಾಪ್ತ ಪತ್ರಿಕೆ' ಎಂಬ ಘೋಷಣೆಯೊಂದಿಗೆ ಪ್ರಕಟಗೊಳ್ಳುವ "ವಿವೇಕ ಪ್ರಭ"ದಲ್ಲಿ, ಪತ್ರಿಕೆಯ ಧ್ಯೇಯ ಎಂದು ಸ್ವಾಮಿ ವಿವೇಕಾನಂದರ ಈ ಕೆಳಗಿನ ಮಾತನ್ನು ಪ್ರತೀ ಸಂಚಿಕೆಯಲ್ಲೂ ಮುದ್ರಿಸಲಾಗುತ್ತಿದೆ. "ನಾವು ಪತ್ರಿಕೆಯ ಮೂಲಕ ಸಕಲ ವಿಚಾರಗಳಲ್ಲಿಯೂ ಜೋವನಪೋಷಕ ಆದರ್ಶಗಳನ್ನು ಜನರಿಗೆ ಕೊಡಬೇಕು. ಅಲ್ಲ, ಇಲ್ಲ ಎಂಬ ನಿಷೇಧಾತ್ಮಕ ಭಾವನೆಗಳು ಮನುಷ್ಯನನ್ನು ನಿರ್ಜೀವ ಮಾಡಿಬಿಡುತ್ತದೆ. ನಿಂದೆಯ ನುಡಿಗಳಿಗೆ ಅಲ್ಲಿ ಅವಕಾಶವೇ ಇರಕೂಡದು. ವೇದ ವೇದಾಂತಗಳ ಉಚ್ಛ ಭಾವನೆಗಳನ್ನು ಸುಲಭವಾದ ಮಾತುಗಳಲ್ಲಿ ಜನರಿಗೆ ತಿಳಿಸಿಕೊಡಬೇಕು. ಸದಾಚಾರ, ಸದ್ವೈವಹಾರ, ಶಿಕ್ಷಣ ಇವುಗಳನ್ನು ಕುರಿತ ವಿಚಾರಗಳನ್ನು ಜನರಿಗೆ ನೀಡಿ ಕೆಳವರ್ಗದವರೂ ಮೇಲ್ಮಟ್ಟಕ್ಕೆ ಏರುವಂತೆ ಮಾಡಬೇಕು. ಪತ್ರಿಕೆಯಲ್ಲಿ ಇದನ್ನೆಲ್ಲ ಬರೆದು ಯುವಕರು, ಮುದುಕರು, ಪುರುಷರು, ಮಹಿಳೆಯರು ಎಲ್ಲರನ್ನೂ ಜಾಗ್ರತಗೊಳಿಸಿ".
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!