ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನದ "ಗೀತಾ ಮಿತ್ರ"
ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನವು ಕಳೆದ ೬೩ ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡುಬರುತ್ತಿರುವ ಭಗವದ್ಗೀತಾ ಪ್ರಚಾರಕ್ಕಾಗಿಯೇ ಮೀಸಲಾದ ರಾಜ್ಯದ, ಕನ್ನಡದ ಏಕೈಕ ಅದ್ಯಾತ್ಮಿಕ ಮಾಸಪತ್ರಿಕೆಯಾಗಿದೆ "ಗೀತಾ ಮಿತ್ರ".
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಜ್ಜಂಪುರದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿಯವರು ಅಜ್ಜಂಪುರದ ಶ್ರೀ ಶಿವಾನಂದಾಶ್ರಮದ ಶ್ರೀ ಶ್ರೀ ಶ್ರೀ ಶಂಕರಾನಂದ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ೧೯೬೩ರ ಜನವರಿಯಲ್ಲಿ "ಗೀತಾ ಮಿತ್ರ"ವನ್ನು ಆರಂಭಿಸಿದ್ದಾರೆ. ಇವರ ಕಾಲಾನಂತರ ಇವರ ಪುತ್ರರಾದ ಎಸ್. ರಾಜಗೋಪಾಲ ಗುಪ್ತ ಅವರು ಪತ್ರಿಕೆಯನ್ನು ಮುನ್ನಡೆಸಿದರು.
೨೦೦೪ ಆಗಸ್ಟ್ ನಿಂದ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿಯವರ ಕಿರಿಯ ಪುತ್ರಿ, ಶಿವಮೊಗ್ಗ ಗಾಂಧಿನಗರದ ಶ್ರೀಮತಿ ಶಾರದಾ ಗೋಪಾಲ್ (ಎಸ್. ಭಾಗ್ಯಲಕ್ಷ್ಮಿ) ಅವರು ಪ್ರಧಾನ ಸಂಪಾದಕರು, ಪ್ರಕಾಶಕರು, ಮಾಲಕರಾಗಿ "ಗೀತಾ ಮಿತ್ರ"ವನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ.
ಶಿವಮೊಗ್ಗ ಗಾಂಧಿನಗರ 'ಬಿ' ಬ್ಲಾಕ್ ಎರಡನೇ ಕ್ರಾಸ್ " ಶ್ರೀ ಇಡಗುಂಜಿ ಮಹಾಗಣಪತಿ ನಿಲಯ"ದಿಂದ ಪತ್ರಿಕೆ ಪ್ರಕಾಶನಗೊಳ್ಳುತ್ತಿದೆ. ಅಜ್ಜಂಪುರದ ಎನ್. ವೆಂಕಟೇಶ್ ಅವರ ಪವಿತ್ರ ಪ್ರೆಸ್ ನಲ್ಲಿ ಪತ್ರಿಕೆ ಮುದ್ರಣಗೊಳ್ಳುತ್ತಿದೆ. ಶಿವಮೊಗ್ಗದ ವೈ. ಗೋಪಾಲಕೃಷ್ಣ ಗುಪ್ತ, ಬಾಣಾವರದ ಶ್ರೀಮತಿ ಸರೋಜಾ ಗೋವಿಂದರಾಜ್, ಚಿಕ್ಕಮಗಳೂರಿನ ಶ್ರೀಮತಿ ಪ್ರೇಮಾ ಕೋದಂಡರಾಂ, ಬೆಂಗಳೂರಿನ ಎನ್. ಶೇಷಾಚಲಯ್ಯ ಹಾಗೂ ಎಸ್. ಆರ್. ಪವನ್ ಅವರು ಸಂಪಾದಕ ಮಂಡಳಿಯ ಸದಸ್ಯರಾಗಿರುತ್ತಾರೆ.
೩೨ + ೪ ಪುಟಗಳ "ಗೀತಾ ಮಿತ್ರ" ದ ವಾರ್ಷಿಕ ಚಂದಾ ೩೫೦/- ರೂಪಾಯಿಗಳು. ಐದು ವರ್ಷಕ್ಕೆ ೧೭೫೦/-, ಹತ್ತು ವರ್ಷಕ್ಕೆ ೩,೫೦೦/-, ಮಹಾಪೋಷಕ ಮೊತ್ತ ೧೦,೦೦೦/- ಮತ್ತು ರಾಜ ಪೋಷಕರಾಗಲು ೧೫,೦೦೦/- ರೂಪಾಯಿಗಳಾಗಿವೆ. ಗೀತಾಮಾತಾ ವಾಕ್ಯಗಳು, ಪಂಚಾಂಗ, ಸಂಪಾದಕೀಯ, ಶ್ರೀಮದ್ಭಗವದ್ಗೀತಾ ಪ್ರವಚನಗಳು, ವಿದ್ಯಾರ್ಥಿ ವಿಭಾಗ, ವಾರ್ತೆಗಳು ಮತ್ತು ಶ್ರೀ ಕೃಷ್ಣನ ಸುಂದರ ಭಾವಚಿತ್ರಧಾರೆ ಎಂಬ ಸ್ಥಿರ ಶೀರ್ಷಿಕೆಗಳೊಂದಿಗೆ ಉಪನಿಷತ್ತು, ಪುರಾಣಗಳ ಸಹಿತ ವಿವಿಧ ಅದ್ಯಾತ್ಮಿಕ, ಧಾರ್ಮಿಕ, ವ್ಯಕ್ತಿತ್ವ ವಿಕಸನ, ನೀತಿಯುತ ವೈವಿಧ್ಯಮಯ ಲೇಖನಗಳು "ಗೀತಾಮಿತ್ರ"ದಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!