ಕರ್ನಾಟಕ ಸಾಹಿತ್ಯ ಅಕಾಡೆಮಿಯ "ಅನಿಕೇತನ"

ಬೆಂಗಳೂರು ಜೆ. ಸಿ. ರಸ್ತೆಯ 'ಕನ್ನಡ ಭವನ'ದಲ್ಲಿ ಕಚೇರಿಯಿರುವ 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಪ್ರಕಟಿಸುವ ಸಾಹಿತ್ಯಿಕ ತ್ರೈಮಾಸಿಕ ಪತ್ರಿಕೆಯಾಗಿದೆ "ಅನಿಕೇತನ". ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಳೆದ ೩೬ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ "ಅನಿಕೇತನ"ದ ಪ್ರಧಾನ ಸಂಪಾದಕರು, ಪ್ರಕಾಶಕರು ಮೊದಲಾದವರು ಅಕಾಡೆಮಿಯ ಅಧ್ಯಕ್ಷರು, ಸದಸ್ಯರು ಮತ್ತು ರಿಜಿಸ್ಟ್ರಾರ್ ಬದಲಾದಂತೆ ಬದಲಾಗುತ್ತಾ ಇರುತ್ತಾರೆ. ಸಂಪಾದಕರನ್ನು ಪ್ರಧಾನ ಸಂಪಾದಕರು ನಿಯುಕ್ತಿಗೊಳಿಸುತ್ತಾರೆ.

ಬೆಂಗಳೂರಿನ ಡಾ. ಕೆ. ಎಸ್. ನಿಸಾರ್ ಅಹಮದ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ (೧೯೮೪ - ೧೯೮೭) "ಚಂದನ" ಎಂಬ ಹೆಸರಿನಲ್ಲಿ ಆರಂಭವಾದ ಪತ್ರಿಕೆ, ಡಾ. ಜಿ. ಎಸ್. ಶಿವರುದ್ರಪ್ಪ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ (೧೯೮೭ - ೧೯೯೦) "ಅನಿಕೇತನ" ವಾಗಿ ಬದಲಾಯಿತು. ಆರಂಭದಲ್ಲಿ, ಕನ್ನಡಿಗರಿಗೆ ಕನ್ನಡೇತರ ಮತ್ತು ಜಾಗತಿಕ ಸಾಹಿತ್ಯವನ್ನು ಪರಿಚಯ ಮಾಡಿಕೊಡುವ ಹಾಗೂ ಕನ್ನಡೇತರರಿಗೆ ಕನ್ನಡ ಸಾಹಿತ್ಯವನ್ನು ಪರಿಚಯಮಾಡಿಕೊಡುವ ಉದ್ಧೇಶದಿಂದ ಅಕಾಡೆಮಿಯು " ಅನಿಕೇತನ" ತ್ರೈಮಾಸಿಕವನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರತ್ಯೇಕವಾಗಿ ಆರಂಭಿಸಿತು. ಹಾಗಾಗಿ ಕನ್ನಡ ಅನಿಕೇತನ, ಕನ್ನಡೇತರ ಭಾಷೆಗಳ ಅನುವಾದಿತ ಬರೆಹಗಳಿಗೆ ಸೀಮಿತವಾಗಿತ್ತು.

ನಂತರದ ಅವಧಿಯಲ್ಲಿ (ಡಾ. ಬಿ‌ ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯ ೨೦೧೯ - ೨೦೨೨ರ ಅವಧಿಯಲ್ಲಿ) ಅನುವಾದ ಬರೆಹಗಳಿಗೆ ಸೀಮಿತವಾಗದೆ ಪ್ರಸಿದ್ಧರು, ಯುವ ಮತ್ತು ಉದಯೋನ್ಮುಖ ಬರೆಹಗಾರರ ವೈವಿಧ್ಯಮಯ ಸಾಹಿತ್ಯವನ್ನು ಪ್ರಕಟಿಸುವ ಪತ್ರಿಕೆಯಾಗಿ ಪರಿವರ್ತನೆಗೊಂಡಿತು.

ಪುಸ್ತಕ ರೂಪದಲ್ಲಿ ಹೊರಬರುತ್ತಿರುವ "ಅನಿಕೇತನ"ದ ಪ್ರಕಾಶಕರು ಅಕಾಡೆಮಿಯ ರಿಜಿಸ್ಟ್ರಾರ್ ಆಗಿರುತ್ತಾರೆ. ಅಧ್ಯಕ್ಷರು ಪ್ರಧಾನ ಸಂಪಾದಕರಾಗಿರುತ್ತಾರೆ. ಸಂಪಾದಕರನ್ನು ನೂತನ ಅಧ್ಯಕ್ಷರು (ಪ್ರಧಾನ ಸಂಪಾದಕರು) ನಿಯುಕ್ತಿಗೊಳಿಸುತ್ತಾರೆ. ಮೊದಲು, ಬೆಂಗಳೂರು ಚಾಮರಾಜಪೇಟೆಯಲ್ಲಿರುವ ಲಕ್ಷ್ನಿ ಮುದ್ರಣಾಲಯದಲ್ಲಿ ಮುದ್ರಣಗೊಳ್ಳುತ್ತಿದ್ದ "ಅನಿಕೇತನ",  ನಂತರ ಬೆಂಗಳೂರು ಕಾಮಾಕ್ಷಿಪಾಳ್ಯದ ಏಕಾಕ್ಷರ ಪ್ರಿಂಟರ್ಸ್ ನಲ್ಲಿ ಮುದ್ರಣಗೊಳ್ಳುತ್ತಿತ್ತು.

೨೦೦೯ - ೨೦೧೪ರ ನಡುವೆ  ಸುಮಾರು ಆರು ವರ್ಷಗಳ ಕಾಲ ಅನಿಕೇತನದ ಪ್ರಕಟಣೆ ಸ್ಥಗಿತಗೊಂಡಿತ್ತು. ಆದರೆ, ಧಾರವಾಡದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ (೨೦೧೪ - ೨೦೧೭) ಮತ್ತೆ ಪುನರಾರಂಭಗೊಂಡಿತು. ಸ್ಥಗಿತಗೊಂಡ ಅವಧಿಯಲ್ಲಿನ ಸಂಚಿಕೆಗಳನ್ನು ನಂತರದ ಅವಧಿಯಲ್ಲಿ ಐದು ಸಂಯೋಜಿತ ಆವೃತ್ತಿಗಳಾಗಿ ಪ್ರಕಟಿಸಲಾಯಿತು.

೨೦೧೮ - ೨೦೧೯ರ ಅವಧಿಯಲ್ಲಿಯೂ ಪತ್ರಿಕೆ ಮುದ್ರಣವಾಗಲಿಲ್ಲ. ಆದರೆ ೨೦೨೧ರಲ್ಲಿ ಮೈಸೂರಿನ ಡಾ. ಬಿ. ವಿ. ವಸಂತಕುಮಾರ್ ಅವರು ಅಧ್ಯಕ್ಷರು ಮತ್ತು ಕರಿಯಪ್ಪ ಎನ್. ಅವರು ರಿಜಿಸ್ಟ್ರಾರ್ ಆಗಿದ್ದ ಅವಧಿಯಲ್ಲಿ ಎರಡು ವರ್ಷಗಳ ಸಂಚಿಕೆಯನ್ನು ಸಂಯುಕ್ತವಾಗಿ ಮುದ್ರಿಸಲಾಯಿತು. ೨೦೧೮ರ ಸಂಯುಕ್ತ ಸಂಚಿಕೆಯನ್ನು ಡಾ. ಎಚ್. ಎಸ್. ರಘುನಾಥ್ ಅವರು ಸಂಪಾದಿಸಿದರೆ, ೨೦೧೯ರ ಸಂಯುಕ್ತ ಸಂಚಿಕೆಯನ್ನು ಡಾ. ಚಿತ್ತಯ್ಯ ಪೂಜಾರ್ ಅವರು ಸಂಪಾದಿಸಿಕೊಟ್ಟರು.

ಆರಂಭದಲ್ಲಿ, ಬಿಡಿ ಸಂಚಿಕೆಯ ಬೆಲೆ ೨೦ ರೂಪಾಯಿಯಾಗಿತ್ತು. ನಂತರ ೬೦ ರೂಪಾಯಿಗೆ ಹೆಚ್ಚಿಸಲಾಯಿತು. ವಾರ್ಷಿಕ ಚಂದಾ  ೭೦ ರೂಪಾಯಿಯಿಂದ ೨೦೦ ರೂಪಾಯಿಗೆ, ನಂತರ ೨೫೦ ರೂಪಾಯಿಗೆ ಹೆಚ್ಚಿಸಲಾಯಿತು. ಅಜೀವ ಚಂದಾ ಮೊತ್ತವನ್ನು ೨೫೦ ರೂಪಾಯಿಯಿಂದ ೧೦೦೦ ರೂಪಾಯಿಗೆ, ನಂತರ ೧೫೦೦ ರೂಪಾಯಿಗೆ ಹೆಚ್ಚಿಸಲಾಯಿತು. ಯುಜಿಸಿ - ಕೇರ್ (UGC - CARE)ನಿಂದ ಅನುಮೋದನೆ ಪಡೆದ ಕೆಲವೇ ಕೆಲವು ಪತ್ರಿಕೆಗಳಲ್ಲಿ " ಅನಿಕೇತನ"ವೂ ಒಂದಾಗಿದೆ.

~ ಶ್ರೀರಾಮ ದಿವಾಣ