ಯು. ಆರ್. ಅನಂತಮೂರ್ತಿಯವರ "ರುಜುವಾತು"
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಪ್ರಖ್ಯಾತ ಸಾಹಿತಿ, ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾಗಿದ್ದ ಡಾ. ಯು. ಆರ್. ಅನಂತಮೂರ್ತಿ (ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ) ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಹೊರತರುತ್ತಿದ್ದ ತ್ರೈಮಾಸಿಕವಾಗಿದೆ "ರುಜುವಾತು".
೧೦೮೧ರ ಜನವರಿ - ಫೆಬ್ರವರಿ - ಮಾರ್ಚ್ ಸಂಚಿಕೆ " ರುಜುವಾತು"ವಿನ ಮೊದಲ ಸಂಚಿಕೆ. ೧೯೯೦ರ ದಶಕದಲ್ಲಿ, ೧೯೯೬ರ ನಂತರ ಸ್ಥಗಿತಗೊಂಡಿತು. ಸಾಗರ ಹೆಗ್ಗೋಡಿನ ಪ್ರಸನ್ನ, ಬೆಂಗಳೂರಿನ ಎನ್. ವಿದ್ಯಾಶಂಕರ್ ಅವರು ಬೇರೆ ಬೇರೆ ಅವಧಿಗಳಲ್ಲಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದರು.
ವಿಲಿಯಂ, ಬಂದಗದ್ದೆ ರಾಧಾಕೃಷ್ಣ , ಸರ್ವಮಂಗಳಾ ಹಾಗೂ ಎಚ್. ಪಟ್ಟಾಭಿರಾಮ ಸೋಮಯಾಜಿ ಮುಂತಾದವರು ಸಹ ಸಂಪಾದಕರಾಗಿಯೂ, ಕಿ.ರಂ. ನಾಗರಾಜ, ಕೆ. ಪಿ. ವಾಸುದೇವನ್, ಆರ್. ರಾಮಚಂದ್ರ ಮೊದಲಾದವರು ಸಂಪಾದಕ ಮಂಡಳಿ ಸದಸ್ಯರಾಗಿದ್ದರು.
ಕೆಲ ವರ್ಷಗಳ ಕಾಲ ಶ್ರೀಧರ ರಾವ್ ಎಚ್. ಹಾಗೂ ಗಂಗಾಧರ ಎನ್. ಸಿ. ಅವರು ಪ್ರಸರಣ ವಿಭಾಗದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಶ್ರೀಲಕ್ಷ್ಮಿ ಎಸ್. ಭಟ್, ಸವಿತಾ ಕಾಕಲ್ ಹಾಗೂ ಪ್ರಮಥ ಎಚ್. ಎನ್. ಅವರು ಅಕ್ಷರ ಜೋಡಣೆ (ಡಿಟಿಪಿ) ಕೆಲಸ ನಿರ್ವಹಿಸುತ್ತಿದ್ದರು. ಕೆಲ ಕಾಲ ಶಿವಮೊಗ್ಗ ಜಿಲ್ಲೆ ಸಾಗರ ತಾತೂಕು ಹೆಗ್ಗೋಡುವಿನಿಂದ ಪ್ರಕಾಶನಗೊಳ್ಳುತ್ತಿದ್ದ " ರುಜುವಾತು", ಮತ್ತೆ ಕೆಲಕಾಲ ಮೈಸೂರಿನಿಂದ ಪ್ರಕಾಶನಗೊಳ್ಳುತ್ತಿತ್ತು. ಬೇರೆ ಬೇರೆ ಸಂದರ್ಭಗಳಲ್ಲಿ ಸನ್ನಿವೇಶ ಪ್ರಕಾಶನ ಮತ್ತು ರುಜುವಾತು ಟ್ರಸ್ಟ್ ನಿಂದ ಪತ್ರಿಕೆ ಪ್ರಕಾಶನಗೊಳ್ಳುತ್ತಿತ್ತು.
ಮೊದಲಿಗೆ ಬಿಡಿ ಸಂಚಿಕೆಯ ಬೆಲೆ ೬ ರೂಪಾಯಿಯಾಗಿತ್ತು. ಆರು ವಾರ್ಷಿಕ ಚಂದಾ ಮೊತ್ತ ೨೦ ರೂಪಾಯಿಗಳಾಗಿತ್ತು. ಆಜೀವ ಚಂದಾ ಮೊತ್ತ ೨೫೦ ರೂಪಾಯಿಗಳಾಗಿತ್ತು. ೫೦೦ ರೂಪಾಯಿಗಳ ಠೇವಣಿಯನ್ನು ಸಂಗ್ರಹಿಸಲಾಗುತ್ತಿತ್ತು. ನಂತರ ಬಿಡಿ ಸಂಚಿಕೆಯ ಬೆಲೆ ೧೬ ರೂಪಾಯಿಗಳು, ವಾರ್ಷಿಕ ಚಂದಾ ೪೦ ರೂಪಾಯಿಗಳಾಗಿತ್ತು.
"ಸೃಜನಶೀಲ ಹೊಸ ಪ್ರಯೋಗಗಳಿಗಾಗಿ, ಹೊಸದಿಕ್ಕುಗಳ ಹುಡುಕಾಟಕ್ಕಾಗಿ, ನಮ್ಮ ಸಾಮಾಜಿಕ ಸಂದರ್ಭದ ಶೋಧಕ್ಕಾಗಿ" ಎಂಬ ಘೋಷಣೆಯೊಂದಿಗೆ ರುಜುವಾತು ಹೊರಬರುತ್ತಿತ್ತು. ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದಂತೆ ಹಲವು ಬರೆಹಗಾರರು ಬರೆದ ವಿವಿಧ ರೀತಿಯ ಅಧ್ಯಯನಾತ್ಮಕ, ಸಂಶೋಧನಾತ್ಮಕ ಪ್ರಬುದ್ಧ ಬರೆಹಗಳು "ರುಜುವಾತು"ವಿನಲ್ಲಿ ಪ್ರಕಟವಾಗುತ್ತಿತ್ತು. ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು, ಸಹ ಸಂಪಾದಕರು ಮತ್ತು ಸಂಪಾದಕ ಮಂಡಳಿ ಸದಸ್ಯರು ವಿವಿಧ ಕಾಲಗಳಲ್ಲಿ ಬದಲಾವಣೆ ಆಗುತ್ತಿದ್ದರು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!