ಜಾಗತಿಕ ಅಹ್ಮದೀಯಾ ಜಮಾಅತಿನ ಮುಖವಾಣಿ, ಮುಹಮ್ಮದ್ ಯೂಸುಫ್ ಅವರ "ಯುಗರಶ್ಮಿ"
ಜಾಗತಿಕ ಅಹ್ಮದೀಯಾ ಜಮಾಅತಿನ ಮುಖವಾಣಿಯಾಗಿ, ಮೂಲತಹ ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರದ ಉದ್ಯಾವರದವರಾಗಿರುವ ಮುಹಮ್ಮದ್ ಯೂಸುಫ್ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರಾಗಿ ಕಳೆದ ಐವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತ್ರೈಮಾಸಿಕವಾಗಿದೆ "ಯುಗರಶ್ಮಿ".
"ಯುಗರಶ್ಮಿ"ಯ ಸಂಪಾದಕೀಯ ಕಚೇರಿ ಮಂಗಳೂರು ಬಂದರಿನ ಅನ್ಸಾರಿ ರಸ್ತೆಯಲ್ಲಿದೆ. ಅಜೀಜುದ್ದೀನ್ ರಸ್ತೆಯ ಕರಾವಳಿ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದೆ. ೧೯೭೫ರ ಎಪ್ರೀಲ್ ತಿಂಗಳಲ್ಲಿ ಯುಗರಶ್ಮಿಯ ಮೊದಲ ಸಂಚಿಕೆ ಪ್ರಕಟವಾಗಿದೆ. ೧೯೭೫ - ೯೦ರ ನಡುವೆ ಒಂದು ಮೂರ್ನಾಲ್ಕು ವರ್ಷ ಕಾಲ ಪತ್ರಿಕೆ ಮುದ್ರಣ ಕಾರ್ಯ ಸ್ಥಗಿತಗೊಂಡದ್ದು ಹೊರತುಪಡಿಸದರೆ, ಉಳಿದಂತೆ ಕಳೆದ ಐವತ್ತು ವರ್ಷಗಳಿಂದ ಪ್ರಕಟಗೊಳ್ಳುತ್ತಾ, ೨೦೨೫ರ ಸುವರ್ಣ ಜುಬಿಲಿ ವಿಶೇಷ ಸಂಚಿಕೆಯೊಂದಿಗೆ ಸುವರ್ಣ ಮಹೋತ್ಸವವನ್ನು ಪತ್ರಿಕೆ ಆಚರಿಸಿದೆ. ಕಳೆದ ಐವತ್ತು ವರ್ಷಗಳ ಪ್ರತೀ ಸಂಚಿಕೆಯೂ (ತರಂಗ, ರೂಪಾತಾರ ಮಾದರಿ) ಪುಟಗಳ ಸಂಖ್ಯೆ ೪೦ಕ್ಕಿಂತ ಅಧಿಕ, ೫೦ಕ್ಕಿಂತ ಕಡಿಮೆಯಿಲ್ಲದಂತೆ ಹೊರಬಂದಿದೆ. ಸುವರ್ಣ ಜುಬಿಲಿ ವಿಶೇಷ ಸಂಚಿಕೆ ೧೦೪ ಪುಟಗಳನ್ನು ಹೊಂದಿದೆ.
ಸಂಪಾದಕರ ತಂದೆಯವರಾದ ಜನಾಬ್ ಎಂ. ಅಬ್ದುಲ್ ರಶೀದ್ ಸಾಹಿಬ್, ಬಂಧುಗಳಾದ ಜನಾಬ್ ಸಿದ್ದೀಖ್ ಅಮೀರಲಿ ಸಾಹಿಬ್, ಮೌಲವಿ ಯು. ಅಬೂಬಕರ್ ಸಾಹಿಬ್, ಸಹೋದರ ಎಂ. ಉಬೈದುಲ್ಲಾ ಸಾಹಿಬ್, ಮಿತ್ರರಾದ ಎಂ. ಪಿ. ಇಬ್ರಾಹೀಂ ಸಾಹಿಬ್ ಮೊದಲಾದವರ ಸಹಾಯ, ಸಹಕಾರ ಮತ್ತು ಪ್ರೋತ್ಸಾಹದಿಂದ ಯುಗರಶ್ಮಿಯನ್ನು ಆರಂಭಿಸಿದ್ದು, ಮುನ್ನಡೆಸಿಕೊಂಡು ಬರುತ್ತಿರುವುದಾಗಿ ಹೇಳಿಕೊಂಡಿರುವ ಮುಹಮ್ಮದ್ ಯೂಸುಫ್ ಅವರು, "೧೯೭೪ರಲ್ಲಿ ಪಾಕಿಸ್ಥಾನದ ಭುಟ್ಟೋ ಸರಕಾರ ಅಹ್ಮದಿಯರನ್ನು ಮುಸ್ಲಿಮೇತರರೆಂದು ಘೋಷಿಸಿದಾಗ, ಕನ್ನಡ ಜನತೆಗೆ ಅಹ್ಮದಿಯಾ ಜಮಾಅತಿನ ಬಗ್ಗೆ ಮತ್ತು ಯಥಾರ್ಥ ಇಸ್ಲಾಮಿನ ಕುರಿತು ತಿಳಿಯಪಡಿಸಬೇಕೆಂಬ ಆಕಾಂಕ್ಷೆ ಉಂಟಾಗಿ ಯುಗರಶ್ಮಿಯ ಹುಟ್ಟಿಗೆ ಕಾರಣವಾಯಿತು" ಎಂದು ಸುವರ್ಣ ಸಂಭ್ರಮದ ವಿಶೇಷ ಸಂಚಿಕೆಯ ಸಂಪಾದಕೀಯದಲ್ಲಿ ಬರೆದುಕೊಂಡಿದ್ದಾರೆ.
ಎಂ. ಉಬೈದುಲ್ಲಾ ಸಾಹಿಬ್ ಅವರು ಯಿಗರಶ್ಮಿಯ ಖಾಯಂ ಪ್ರಧಾನ ಅನುವಾದಕರು ಮತ್ತು ಲೇಖಕರು. ಎಂ. ಪಿ. ಇಬ್ರಾಹಿಂ ಸಾಹಿಬ್, ಮೌ | ಇನಾಮುಲ್ಲಾಹ್ ಸಾಹಿಬ್, ಮುಹಮ್ಮದ್ ಇಸ್ಮಾಈಲ್ ಸಾಹಿಬ್ ಹಾಗೂ ಮುಹಮ್ಮದ್ ರಫೀಖ್ ಸಾಹಿಬ್ ಅವರು ಅನುವಾದಕರು ಮತ್ತು ಲೇಖಕರು. ಸಿದ್ದೀಖ್ ಅಶ್ರಫ್ ಅಲಿ ಸಾಹಿಬ್, ರಶೀದ್ ಅಹ್ಮದ್ ಸಿದ್ದೀಖ್ ಸಾಹಿಬ್, ಕೆ. ಎಂ. ಉಮರ್ ಸಾಹಿಬ್, ಕೆ. ಕೆ. ಬದ್ರುದ್ದೀನ್ ಸಾಹಿಬ್, ತಯ್ಯಿಬ್ ಅಹ್ಮದ್ ಸಾಹಿಬ್, ನಜ್ಮತುನ್ನಿಸ್ ಲೈಝ್ , ಝಹಿರಾ ಅನಸ್ ಮೊದಲಾದವರ ಬರೆಹಗಳೂ ಯುಗರಶ್ಮಿಯಲ್ಲಿ ಪ್ರಕಟವಾಗುತ್ತವೆ.
ಬೆಂಗಳೂರಿನ ವಲಿಯುದ್ದೀನ್ ಕಲಿಮುಲ್ಲಾಹ್ ಸಾಹಿಬ್, ಶಿವಮೊಗ್ಗದ ಮೀರ್ ಆಝಂ ಝಕರಿಯ, ಮುಬಾರಕ್ ಅಹ್ಮದ್ ನಸೀಂ ಹಾಗೂ ಮಡಿಕೇರಿಯ ಜೆ. ಎಂ. ಶರೀಫ್ ಸಾಹಿಬ್ ರವರು ಪ್ರಸರಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
~ ಶ್ರೀರಾಮ ದಿವಾಣ, ಉಡುಪಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!