ಕರಾಡ ಕಲಾ ಸಾಹಿತ್ಯ ಪ್ರತಿಷ್ಠಾನ (ರಿ)ದ "ಕರಾಡವಾಣಿ"
ಗಡಿನಾಡು ಕಾಸರಗೋಡು ಜಿಲ್ಲೆ ಪೆರ್ಲದ ಕರಾಡ ಕಲಾ ಸಾಹಿತ್ಯ ಪ್ರತಿಷ್ಠಾನ (ರಿ)ವು ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಕರಾಡ ಬ್ರಾಹ್ಮಣ ಸಮುದಾಯದ ಮುಖವಾಣಿ ಮಾಸ ಪತ್ರಿಕೆಯಾಗಿದೆ "ಕರಾಡವಾಣಿ".
ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯ ಸಾಹಿತಿ ಮಾ. ಭ. ಪೆರ್ಲ ಅವರು "ಕರಾಡವಾಣಿ" ಆರಂಭಿಸಲು, ಮವ್ವಾರು ಸುಬ್ರಹ್ಮಣ್ಯ ಭಟ್ಟ ಹಾಗೂ ಕನಕಮಜಲು ಪದ್ಮನಾಭ ಭಟ್ ರವರು ಪ್ರೇರಣೆ ನೀಡಿದವರಾಗಿದ್ದಾರೆ. ಸ್ವತಃ ಮಾ. ಭ. ಪೆರ್ಲ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ವೆಂಕಟಸುಬ್ಬ ರಾವ್ ಅವರು ಹಾಕಿದ ಮೂಲ ಬಂಡವಾಳ ಪತ್ರಿಕೆಯು ಆರಂಭಿಕ ಹೆಜ್ಜೆ ಇರಿಸಲು ಬಲ ಒದಗಿಸಿತ್ತು.
೨೦೦೧ರ ಜನವರಿ ತಿಂಗಳ ಸಂಚಿಕೆಯೊಂದಿಗೆ ನಾಲ್ಕು ಪುಟಗಳ "ಕರಾಡವಾಣಿ" ಆರಂಭವಾಗಿತ್ತು. ಮೊದಲ ಸಂಚಿಕೆಯ ಬಿಡುಗಡೆ ಸಮಾರಂಭವು ಅಗಲ್ಪಾಡಿ ದೇವಸ್ಥಾನದಲ್ಲಿ ನಡೆದಿತ್ತು. ಅಂದಿನ ಶೃಂಗೇರಿ ಸ್ವಾಮೀಜಿಗಳು ಆ್ಯಂಬ್ಲಮ್ ಬಿಡುಗಡೆಗೊಳಿಸಿದ್ದರೆ, ಬಳ್ಳಪದವು ಮಾಧವ ಉಪಾಧ್ಯಾಯರು ಪತ್ರಿಕೆಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದರು. ಒಂದೆರಡು ವರ್ಷಗಳ ನಂತರ ೨೦ ಪುಟಗಳಲ್ಲಿ ಬಹುವರ್ಣ ಮುಖಪುಟದೊಂದಿಗೆ ಬರತೊಡಗಿತು. ಆನಂತರ ೨೪ ಪುಟಗಳ ಪತ್ರಿಕೆಯಾಗಿ ಬೆಳೆದ "ಕರಾಡವಾಣಿ", ಪ್ರಸ್ತುತ ೨೮ ಪುಟಗಳೊಂದಿಗೆ ಹೊರಬರುತ್ತಿದೆ.
ಆರಂಭದಲ್ಲಿ ಸಂಪಾದಕರು ಮತ್ತು ಪ್ರಕಾಶಕರು ಮಾ. ಭ. ಪೆರ್ಲ ಅವರೇ ಆಗಿದ್ದರು. ಈ ಅವಧಿಯಲ್ಲಿ ಕೆ. ವೆಂಕಟಸುಬ್ಬ ರಾವ್ ಹಾಗೂ ಅರುಣಾ ಶಿವರಾಂ ಪಡ್ಪು ಅವರು ಸಹಸಂಪಾದಕರಾಗಿದ್ದರು. ಮವ್ವಾರು ಸುಬ್ರಹ್ಮಣ್ಯ ಭಟ್ಟ, ಕೆ. ಪದ್ಮನಾಭ ಭಟ್, ಕೋಟೆ ರಾಮ ಭಟ್ ಕಾರ್ಕಳ ಹಾಗೂ ಡಾ. ರಾಧಾಕೃಷ್ಣ ಭಟ್ ಯಂ. ಅವರು ಉಪಸಂಪಾದಕರಾಗಿದ್ದರು. ಆನೆಮಜಲು ವಿಷ್ಣು ಭಟ್, ಪಿಲಿಂಗಲ್ಲು ಕೃಷ್ಣ ಭಟ್ ಹಾಗೂ ಶೆಟ್ಟಿಬೈಲು ಗಣಪತಿ ಭಟ್ಟ ಅವರು ವ್ಯವಸ್ಥಾ ಪ್ರಮುಖರಾಗಿದ್ದರು. ಗಣೊತಿ ಭಟ್ ಸಜಂಗದ್ದೆ ಹಾಗೂ ಬಾಲಕೃಷ್ಣ ಭಟ್ ಟಿ. ಅವರು ಪ್ರಸರಣಾಧಿಕಾರಿಗಳಾಗಿದ್ದರು.
ಮಾ. ಭ. ಪೆರ್ಲ ಅವರ ನಿಧನದ ನಂತರದಿಂದ, ಕಳೆದ ಎಂಟು ವರ್ಷಗಳಿಂದ ಅರುಣಾ ಶಿವರಾಂ ಪಡ್ಪು ಅವರು ಪ್ರಧಾನ ಸಂಪಾದಕರಾಗಿದ್ದಾರೆ. ಕರಾಡ ಕಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಪಿಲಿಂಗಲ್ಲು ಕೃಷ್ಣ ಭಟ್ ಅವರು ಪ್ರಕಾಶಕರಾಗಿದ್ದಾರೆ. ಪತ್ರಿಕೆ ಕಳೆದ ೨೫ ವರ್ಷಗಳಿಂದಲೂ ಪೆರ್ಲದ ಗುರುಕುಲ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದೆ.
ಕರಾಡವಾಣಿಯ ವಾರ್ಷಿಕ ಚಂದಾ ೩೦೦ ರೂಪಾಯಿ (ಅಂಚೆ ಮೂಲಕವಾದರೆ ೩೮೦ ರೂಪಾಯಿ), ಆಜೀವ ಸದಸ್ಯತ್ವ ಮೊತ್ತ ೩೦೦೦ ರೂಪಾಯಿ, ಸಂರಕ್ಷಕರಾಗಲು ೮೦೦೦ ರೂಪಾಯಿ, ಮಹಾಸಂರಕ್ಷಕರಾಗಲು ೧೫೦೦೦ ರೂಪಾಯಿ ಮತ್ತು ಪೋಷಕರಾಗಲು ೩೦೦೦೦ ರೂಪಾಯಿಗಳು. ಸಾಹಿತ್ಯ, ಸಂಸ್ಕೃತಿ, ಕಲೆ, ಸಮಾಜ, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ವೈವಿದ್ಯಮಯ ಬರೆಹಗಳು ಕನ್ನಡ ಮತ್ತು ಕರಾಡ ಬ್ರಾಹ್ಮಣರ ಕರಾಡಿ ಭಾಷೆಯಲ್ಲಿ ಪ್ರಕಟವಾಗುತ್ತಿದೆ.
ಪಿಲಿಂಗಲ್ಲು ಕೃಷ್ಣ ಭಟ್ಟರ "ಜೀವನ ಸಂದೇಶ", ಡಾ | ದುರ್ಗಾಪ್ರಸಾದ್ ಆನೆಮಜಲು ಅವರ " ವೈದ್ಯಕೀಯ", ಶ್ರೀಕೃಷ್ಣ ಭಟ್ ಬಟ್ಯಮೂಲೆ ಅವರ "ಪುರಾಣ ಪ್ರಸಿದ್ಧ ಕಥೆಗಳು", ಹರ್ಷ ಬಾಯಾರು ಅವರ " ಜವಾಬು - ದಾರಿ", ಸುರೇಶ್ ಕುಮಾರ್ ಕೆ. ಅವರ "ಮಾಸ ಭವಿಷ್ಯ", ಸಂಧ್ಯಾ ಕೊರೆಕ್ಕಾನ ಅವರ "ಪದ ಪ್ರತಿಭೆ", "ಬಾಲವನ" ಇತ್ಯಾದಿ ಖಾಯಂ ಅಂಕಣಗಳೂ "ಕರಾಡವಾಣಿ" ಯಲ್ಲಿವೆ. ೨೦೨೬ ಸೆಪ್ಟೆಂಬರ್ ೬ರಂದು ಪೆರ್ಲದ ಶ್ರೀ ಭಾರತಿ ಸದನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ "ಕರಾಡವಾಣಿ"ಯ ರಜತ ಮಹೋತ್ಸವವು ಆಚರಿಸಲ್ಪಟ್ಟಿದೆ.
~ ಶ್ರೀರಾಮ ದಿವಾಣ, ಉಡುಪಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!