ಪ್ರಸಕ್ತ ನಮ್ಮ ದೇಶದಲ್ಲಿ ಒಂದು ವ್ಯಕ್ತಿಗೆ ಸಮಾಜದಲ್ಲಿ ವ್ಯವಹರಿಸಲು ಹಲವಾರು ಕಾರ್ಡಗಳಾಗಿವೆ. ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ಲಭ್ಯ.‌ ಡೆಬಿಟ್ ಕಾರ್ಡ್ಎಂದರೆ, ಬ್ಯಾಂಕಿನಲ್ಲಿರುವ ನಿಮ್ಮ ಖಾತೆಯಿಂದ ಏಟಿಎಮ್ ಮೂಲಕ ಹಣವನ್ನು ಪೂರ್ವ ನಿರ್ಧಾರಿತ ಮಿತಿಯಲ್ಲಿ ಹಣವನ್ನು ಪಡೆಯುವುದು.

ಕ್ರೆಡಿಟ್ ಕಾರ್ಡೆಂದರೆ, ನಿಮಗೆ ಬ್ಯಾಂಕು ನಿಮ್ಮ ತುರ್ತು ಖರ್ಚಿಗೆ ಸಾಲದ ಮಿತಿಯನ್ನು ನಿಗದಿ ಪಡಿಸುತ್ತಾರೆ. ಆ ಕ್ರೆಡಿಟ್ ಕಾರ್ಡಿನಿಂದ ಏಟಿಎಮ್ ನಿಂದಲೇ ಹಣ ಪಡೆಯಲು ಅವಕಾಶ ಮಾಡಿಕೊಡುತ್ತದೆ. ನಂತರ ಮುಂದಿನ ೩೫-೪೦ ದಿನಗಳಲ್ಲಿ ತಿಂಗಳಲ್ಲಿ ಉಪಯೋಗಿಸದ ಸಾಲದ ಹಣವನ್ನು ಬ್ಯಾಂಕಿಗೆ ಮರುಪಾವತಿ ಮಾಡುವುದು ಕ್ರಮ. ಸಾಲ ಎಂದಾಗ ಬಡ್ಡಿಯನ್ನು ಕಾರ್ಡ್ ಹೋಲ್ಡರ್ ಕಟ್ಟಬೇಕು.

ಇನ್ನು ರೇಷನ್ ಕಾರ್ಡೆಂದರೆ ಸಕ್ಕರೆ, ಗೋಧಿ ಅಥವಾ ಅಕ್ಕಿ, ಎಣ್ಣೆಯನ್ನು ಸರಕಾರವು ಪ್ರತಿಯೋರ್ವ ಕುಟುಂಬಕ್ಕು ತಿಂಗಳಿನಲ್ಲಿ ನಿಗದಿತ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ಅದಕ್ಕಾಗಿ ನಿಯೋಜಿಸಿದ ಅಂಗಡಿಗಳಲ್ಲಿ ಒದಗಿಸುವ ಏರ್ಪಾಡು ಮಾಡಿರುತ್ತದೆ. ಪ್ರತಿ ತಿಂಗಳಿನ ಪಡಿತರದ ಪ್ರಮಾಣವು ಕುಟುಂಬದ ನೋಂದಾಯಿಸಿದ ಸದಸ್ಯರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಇದರಲ್ಲಿ BPL ಮತ್ತು APL ಕಾರ್ಡಗಳಿರುತ್ತವೆ. BPL (below poverty line) ಕಡು ಬಡವರಿಗಾಗಿ ಮತ್ತು APL (Above poverty line) ಇನ್ನುಳಿದ ಆರ್ಥಿಕವಾಗಿ ಹಿಂದುಳಿದವರಿಗೆಂದು ರಾಜ್ಯ ಸರ್ಕಾರದಿಂದ ಜನರಿಗಿರುವ ಸವಲತ್ತು.

PAN ಕಾರ್ಡ್ (Permanent Account Number) : ಈ ಕಾರ್ಡನ್ನು ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯು ಜನರಿಗೆ ವಿತರಣೆ ಮಾಡಿರುತ್ತದೆ. ಆದಾಯ ತೆರಿಗೆ ಸಲ್ಲಿಸುವವರು ಈ ಕಾರ್ಡನ್ನು ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಹಾಕಿ ಈ ಕಾರ್ಡನ್ನು ಪಡೆಯತಕ್ಕದ್ದು. ಇತ್ತೀಚೆಗೆ ಹೆಚ್ಚಿನ ಜನರು ಆದಾಯ ತೆರಿಗೆ ಕಾರ್ಡ ಅಂದ್ರೆ ಪಾನ್ ಕಾರ್ಡನ್ನು ಇಲಾಖೆಯಿಂದ ತೆಗೆದುಕೊಂಡಿರುತ್ತಾರೆ. ಕಾರಣ ಆದಾಯದಲ್ಲಿಯೇ ತೆರಿಗೆ ಹಣವನ್ನು ವಸೂಲಿ ಮಾಡುವಂತೆ ಇಲಾಖೆಯ ಕಾನೂನುಯಿರುವುದರಿಂದ, ಯಾವುದೇ ವ್ಯಕ್ತಿಯ ಆದಾಯದಲ್ಲಿಯೇ ಆದಾಯ ತೆರಿಗೆಯ ನಿರ್ಧಾರಿತ ಅಂಶವನ್ನು ವಸೂಲಿ ಮಾಡುವುದರಿಂದ, ತೆರಿಗೆ ಮರುಪಾವತಿ ಪಡೆಯಲು ಅಥವಾ ಮೂಲ ಆದಾಯದಲ್ಲಿ ವಸೂಲಿ ಮಾಡುವುದನ್ನು ತಡೆಯಲು ಸಹ ಪಾನ್ ಕಾರ್ಡಿನ ಅಗತ್ಯವಿರುತ್ತದೆ. ಈಗ ಪಾನ್ ಕಾರ್ಡಿಗೂ ಮತ್ತು ವ್ಯಕ್ತಿಯ ಆಧಾರ ಕಾರ್ಡಿಗೂ ಲಿಂಕ್ ಮಾಡಬೇಕೆಂದು ಕೇಂದ್ರ ಸರ್ಕಾರ ಕಾನೂನುಯಿದೆ. ವ್ಯಕ್ತಿಯ ಭಾವಚಿತ್ರ, ಹುಟ್ಟಿದ ದಿನಾಂಕ, ತಂದೆಯ ಹೆಸರು ನಮೂದಿಸಲ್ಪಟ್ಟಿರುತ್ತದೆ.

ಆಧಾರ ಕಾರ್ಡ್: ಪ್ರತಿಯೊಬ್ಬ ವ್ಯಕ್ತಿಗೂ ಒಂದು ಗುರುತಿನ ಚೀಟಿ ಅವಶ್ಯವೆಂದು ೨೦೧೦ ರಲ್ಲಿ , ಕೇಂದ್ರ ಸರಕಾರ ಜಾರಿಯಲ್ಲಿ ತಂದಿರುತ್ತದೆ. ೨೦೧೬ ರಿಂದ ಪ್ರತಿಯೊಬ್ಬ ಭಾರತೀಯ ಪ್ರಜೆಯು ಆಧಾರ ಕಾರ್ಡನ್ನು ಪಡೆಯತಕ್ಕದ್ದೆಂದು ಕಡ್ಡಾಯ ಮಾಡಿದ್ದಾರೆ. ಇದರಲ್ಲಿ ಕಾರ್ಡ ಹೊಂದಿರುವ ವ್ಯಕ್ತಿಯ ಭಾವಚಿತ್ರ, ವಿಳಾಸ, ಜನ್ಮ ದಿನಾಂಕವಿರುತ್ತದೆ. ೨೦೧೮ ರಲ್ಲಿ ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರಕಾರದ ಕಲ್ಯಾಣ ಯೋಜನೆಗಳಿಗೆ ಮತ್ತು ಆದಾಯ ತೆರಿಗೆಗಾಗಿ ಈ ಕಾರ್ಡನ್ನು ಹೊಂದಿರುವ ಸರ್ಕಾರದ ನಿರ್ಧಾರವನ್ನು ಅನುಮೋದಿಸಿದೆ.

ವೋಟರ್ಸ್ ಕಾರ್ಡ್: ಮತದಾನಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಚುನಾವಣೆ ಆಯೋಗವು ವೋಟರ್ಸ ಕಾರ್ಡನ್ನು ಭಾರತದ ಅರ್ಹ ಪ್ರಜೆಗಳಿಗೆ ವಿತರಣೆ ಮಾಡುತ್ತದೆ. ಇದರಲ್ಲೂ ಸಹ ಕಾರ್ಡ್ ಧಾರಿಯ ಭಾವಚಿತ್ರ, ಹುಟ್ಟಿದ ದಿನಾಂಕ ಮತ್ತು ವಿಳಾಸವಿರುತ್ತದೆ.

ಇಳಿ ವಯಸ್ಸಿನವರ ಸೌಲಭ್ಯಕ್ಕಾಗಿ, ಕೆಲವು ರಾಜ್ಯಗಳಲ್ಲಿ ವರಿಷ್ಠ ನಾಗರಿಕ ಕಾರ್ಡಗಳಿವೆ. ಹೀಗೆ ಬೇರೆ ಬೇರೆ ರಾಜ್ಯಗಳ ಸರಕಾರಿ ಕಲ್ಯಾಣ ಯೋಜನೆಗಳಿಗೆಂದು ಹಲವು ಬಗೆಯ ಕಾರ್ಡುಗಳು ಬಳಕೆಯಲ್ಲಿವೆ.

ಕಳೆದ ದಶಕದಿಂದ ಬ್ಯಾಂಕ್ ನಲ್ಲಿ ಅಥವಾ ಯಾವುದೇ ಹಣಕಾಸು ಸಂಸ್ಥೆಯಲ್ಲಿ, ಸರಕಾರಿ ಇಲಾಖೆಗಳಲ್ಲಿ ವ್ಯವಹರಿಸುವಾಗ, ವ್ಯಕ್ತಿಯ ಗುರುತಿಗಾಗಿ ವಿಳಾಸ, ವಯಸ್ಸು ಮತ್ತು ಆದಾಯದ ಅಂದಾಜಿಗಾಗಿ, ವೋಟರ್ಸ್, ಅಥವಾ ಆಧಾರ ಕಾರ್ಡ್ ಅಥವಾ / ಮತ್ತು ಪಾನ್ ಕಾರ್ಡಿನ ಅಗತ್ಯವಿರುತ್ತದೆ. ಜನ ಸಾಮಾನ್ಯರು ಈ ಎರಡು / ಮೂರು ಕಾರ್ಡಿನ ನಕಲು ಹಾಜರು ಪಡಿಸುವ ಅಗತ್ಯವಿದೆ. ಸರಕಾರಿ ಇಲಾಖೆಗಳಲ್ಲಿ ಒದಗಿಸುವ ದಾಖಲೆಗಳು ನಿಗದಿತವಾಗಿರುವುದಿಲ್ಲ. ಅಗತ್ಯವಾದ ದಾಖಲೆಗಳ ವಿಷಯದಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಮತ್ತು ಅಧಿಕಾರಿಗಳ ತೀರ್ಮಾನವೂ ಭಿನ್ನವಾಗಿರುತ್ತದೆ. ಇದರಿಂದ ಜನರಿಗೆ ಬಹಳ ಗೊಂದಲವುಂಟಾಗುತ್ತಿದೆ.

ಪ್ರಪಂಚದಲ್ಲಿ ನಮ್ಮ ದೇಶವು ಸಾಫ್ಟವೇರ್ ಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ. ಕಾರಣ, ಭಾರತದಲ್ಲಿ ಹಲವಾರು ಜಗದ್ವಿಖ್ಯಾತ ಸಾಫ್ಟವೇರ್ ಕಂಪೆನಿಗಳು ಮತ್ತು ಸಾಫ್ಟವೇರ್ ಇಂಜಿನಿಯರ್ಸ್ ಗಳಿದ್ದಾರೆ. ಹಾಗಿರುವಾಗ ನಾವು ಒಂದು ವ್ಯಕ್ತಿಗೆ (ಬ್ಯಾಂಕ್ ಕಾರ್ಡ್ ಹೊರತಾಗಿ,) ಆಧಾರ ಕಾರ್ಡ್ , ಪಾನ್ ಕಾರ್ಡ್, ವೋಟರ್ಸ ಕಾರ್ಡ್ , ರೇಷನ್ ಕಾರ್ಡ್ ಗಳನ್ನೆಲ್ಲಾ ಸೇರಿಸಿ "ಒಂದೂ ವ್ಯಕ್ತಿ ಒಂದು ಕಾರ್ಡ್" ನ್ನು ಜಾರಿಗೆ ತರಬಹುದು. ಒಂದು ಮಗು ಹುಟ್ಟಿದಾಗ ಒಂದು ಗುರುತಿನ ಕಾರ್ಡ್ , (ಉದಾಹರಣೆಗೆ ಆಧಾರ ಕಾರ್ಡ್ ) ನ್ನು ಮಾಡಿದರೆ, ಆ ಕಾರ್ಡ್ ನ ಸಂಖ್ಯೆ ವಿಶಿಷ್ಟ ಸಂಖ್ಯೆ (unique number) ಜೀವನ ಪರ್ಯಂತ ಉಪಯೋಗಿಸಬೇಕು. ಆ ಕಾರ್ಡಿನ ಸಂಖ್ಯೆಯು ವ್ಯಕ್ತಿಯ ಹೆಸರು, ಭಾವಚಿತ್ರ, ಹುಟ್ಟಿದ ದಿನಾಂಕ, ಹಿಂದುಳಿದ, ಅಲ್ಪ ಸಂಖ್ಯಾತರ, ಪರಿಶಿಷ್ಟ ಪಂಗಡ, ಆದಾಯ ಇವೆಲ್ಲವನ್ನು ಒಳಗೊಳ್ಳಬಹುದು. 30 ಅಂಶಗಳನ್ನೊಳಗೊಳ್ಳುವ ಒಂದು ಆಧಾರ ಕಾರ್ಡ ಜಾರಿಗೆ ತಂದರೆ, ಜನರ, ಸರಕಾರೀ ಇಲಾಖೆಗಳ, ಹಣಕಾಸು, ಬ್ಯಾಂಕ್ ಗಳಲ್ಲಿ ವ್ಯಕ್ತಿಯ ಗುರುತಿನ ಚೀಟಿಯ ಸಮಸ್ಯೆ ಪರಿಹಾರ ಸಾಧ್ಯ. ಎಲ್ಲರಿಗೂ ಸುಲಭವಾದ ಮಾರ್ಗವನ್ನು ನಾವು ಕಂಡುಕೊಳ್ಳಲು ಸಾಧ್ಯವಿದೆ. ಈಗಿರುವ ಆಧಾರ್ ಕಾರ್ಡನ್ನೆ 30 ಅಂಶಗಳನ್ನೊಳಗೊಂಡ ಕಾರ್ಡಾಗಿ ಪರಿವರ್ತಿಸಬಹುದು. ಆ ಕಾರ್ಡಿನ ವಿಶಿಷ್ಟ ಸಂಖ್ಯೆ ( Unique number) ಯನ್ನು ಯಾವುದೇ ಸಂಸ್ಥೆ ತಪಾಸಣೆ ಮಾಡಿದಾಗ, ಅವುಗಳಿಗೆ ವ್ಯಕ್ತಿಯ ಸಂಬಂಧಪಟ್ಟ ಮಾಹಿತಿ ಲಭ್ಯವಾಗುವಂತೆ ಮಾಡಬಹುದು. ಸರಕಾರಕ್ಕೆ ಇಚ್ಛಾಶಕ್ತಿಯಿದ್ದಲ್ಲಿ ಮಾತ್ರ ಸುಲಭ ಸಾಧ್ಯ.

ಬೈ ಪ್ರಕಾಶ ನಡಹಳ್ಳಿ. ಮನೋ ಚಿಕಿತ್ಸಕ, ಮಂಗಳೂರು.