ಕಾಲೇಜಿನಿಂದ ಹೊರಬಂದು ಉದ್ಯಮ ಶುರುಮಾಡಬೇಕೆಂದು ಮನಸ್ಸಿರುವ ವಿದ್ಯಾರ್ಥಿಗಳಿಗೆ, ಈಗ ಹಲವು ದಾರಿಗಳಿವೆ. ಮುಂಚೆ ಏನಾದರೂ ಹೊಸ ವಿಷಯ ತಿಳಿಯಬೇಕೆಂದರೆ, ಇಷ್ಟು ಸುಲಭದಲ್ಲಿ ಮಾಹಿತಿ ಸಿಗುತ್ತಿರಲಿಲ್ಲ. ಈಗಿನ ಕಾಲದಲ್ಲಿ ಯಾರಾದರೂ ಓದುವುದನ್ನು ಮುಂದುವರಿಸಿ ಹಣ ಹಾಳು ಮಾಡಿಕೊಂಡರೆ, ಅದು ಮೂರ್ಖತನ ಎಂಬರ್ಥ ಬರುವಂತೆ ನಿಖಿಲ್ ಕಾಮತ್ ಎನ್ನುವ ಕನ್ನಡ ನಾಡಿನ ಉದ್ಯಮಿ (ಜೆರೋದಾ) ಹೇಳಿದ ಮಾತು ತುಂಬಾ ಚರ್ಚೆಗೆ ಒಳಪಟ್ಟಿತ್ತು.

ಈಗಲೂ ಬಹುಪಾಲು ಎಲ್ಲರಿಗೂ ಓದು ಅಥವಾ ಎಜುಕೇಶನ್ ಎನ್ನುವುದು ಇಲ್ಲ ಅಂದರೆ, ಮುಂದೆ ಕೆಲಸ ಸಿಗುವಲ್ಲಿ ಅಥವಾ ಅವಕಾಶಗಳು ಸಿಗುವಲ್ಲಿ ಬಹಳ ಸಮಸ್ಯೆಯಾಗುವುದು ಎನ್ನುವ ಮನಸ್ಥಿತಿ ಇರುವುದು. ಹಿಂದಿನ ದಿನಗಳಲ್ಲಿ ಕಾಲೇಜು ಬಿಟ್ಟು, ಅಂದರೆ ಕಾಲೇಜು ಡ್ರಾಪ್ ಔಟ್ ಆಗಿ ಉದ್ಯಮ ಶುರುಮಾಡುವುದು ಎಂದರೆ, ಅದು ಅತೀವ ರಿಸ್ಕ್ ಎಂಬುದೇ ಆಗಿತ್ತು. ಏಕೆಂದರೆ ಎಲ್ಲಿ ಪ್ರಾರಂಭ ಮಾಡುವುದು, ಕಂಪನಿ ಶುರುಮಾಡುವುದಾದರೂ ಎಲ್ಲಿ ಮಾಡುವುದು, ಹೇಗೆ ಮಾಡುವುದು, ಅದಕ್ಕೆ ಹಣ ಯಾರು ಕೊಡುತ್ತಾರೆ? ಇಂಥದ್ದೆಲ್ಲ ವಿಷಯಗಳನ್ನು ತಿಳಿಸುವವರು ಯಾರು ಇರಲಿಲ್ಲ, ತಿಳಿದುಕೊಳ್ಳುವುದು ಸುಲಭ ಇರಲಿಲ್ಲ. ಈ ರೀತಿಯ ವಿಷಯಗಳನ್ನು ತಿಳಿದುಕೊಳ್ಳಬೇಕೆಂದರೆ ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಇದ್ದಲ್ಲಿ ಮಾತ್ರ ವಿಷಯಗಳು ತಿಳಿಯುತ್ತಿತ್ತು. ಈಗಿನ ಕಾಲದಲ್ಲಿ ಹಾಗಲ್ಲ. ಮೊಬೈಲಿನಲ್ಲಿ ಇರುವ ಎಐ ಉಪಕರಣಗಳೇ ಪ್ರತಿಯೊಂದು ವಿಷಯವನ್ನು ತಕ್ಷಣ ತಿಳಿಸಿಬಿಡುತ್ತದೆ. ಮನೆಯಲ್ಲಿ ಕುಳಿತುಕೊಂಡು ಎಲ್ಲಿ ಹೋದರೆ ಏನು ಕೆಲಸ ಆಗುತ್ತದೆ, ಅದಕ್ಕೆ ಎಷ್ಟು ಹಣ ತಗಲುತ್ತದೆ, ಪ್ರೊಸೀಜರ್ ಏನು, ಇದೆಲ್ಲವನ್ನು ತಿಳಿದುಕೊಂಡು ಬಿಡಬಹುದು.

ಇರಲಿ, ಸಂಪದ ಓದುವವರಲ್ಲಿ ಪೋಷಕರು ಬಹಳಷ್ಟು ಮಂದಿ ಇದ್ದಾರೆ - ಅವರಿಗೆ ನನ್ನ ಪ್ರಶ್ನೆ:

ಇಂದಿನ ದಿನದಲ್ಲಿ ನಿಮ್ಮ ಮಕ್ಕಳು ಓದು ನಿಲ್ಲಿಸಿ ಉದ್ಯಮವೊಂದನ್ನು ಪ್ರಾರಂಭಿಸಬೇಕೆಂದು ಆಸಕ್ತಿ ತೋರಿಸಿದರೆ ನೀವು ಅದಕ್ಕೆ ಒಪ್ಪಿಗೆ ಕೊಡುತ್ತೀರ?